CONNECT WITH US  

ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ

ಶಹಾಪುರ: ನಗರದ ಸಂಗೀತ, ಹಾಸ್ಯ ವಿವಿಧ ಕಲಾವಿದರು ಒಗ್ಗೂಡಿ ಸಂಗೀತ ಪಡೆ ರಚಿಸಿಕೊಂಡು ಸ್ಥಳೀಯ ಕಲಾವಿದರನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದ್ದು, ಸರ್ವರೂ ಇದಕ್ಕೆ ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು ತಿಳಿಸಿದರು.

ನಗರದ ಸಿಪಿಎಸ್‌ ಶಾಲಾ ಮೈದಾನದಲ್ಲಿ ಶನಿವಾರ ರಾತ್ರಿ ಅಕ್ಷಯ್‌ ಮೆಲೋಡಿಸ್‌ 2ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ನಮ್ಮ ಊರು ನನ್ನ ಹಾಡು ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸ್ಥಳೀಯರಿಗೆ ಸೂಕ್ತ ವೇದಿಕೆ ಒದಗಿಸಿಕೊಟ್ಟಲ್ಲಿ ಸಾಕಷ್ಟು ಪ್ರತಿಭೆ ಹೊರ ಬರಲಿವೆ. ಹಾಸ್ಯ ಕಲಾವಿದರು ಸಹ ಈ ವೇದಿಕೆ ಮೇಲೆ ಕಾಣಬಹುದಾಗಿದೆ. ಉತ್ತಮ ಗಾಯಕರು ನೃತ್ಯ ಪಟುಗಳು, ಅಲ್ಲದೇ ಯೋಗ ಪಟುಗಳಿಗೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಾನಪದ, ಸಿನಿಮಾ ಹಾಡುಗಾರರು ಇಲ್ಲಿದ್ದಾರೆ. ಕೆಲವರು ಒಂದಿಷ್ಟು ಸಂಗೀತ ಪಾಠ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಇನ್ನೊಂದಿಬ್ಬರು ಜನ್ಮತಾ ಅವರಲ್ಲಿ ಕಲೆ ಉದ್ಭವಿಸಿ ಬಂದಿದೆ. ಹೀಗೆ ಅವರಲ್ಲಿದ್ದ ಕಲೆಯನ್ನು ಹೊರ ಸೂಸುವ ಕಾರ್ಯ ಮಾಡುವುದು ಬಹು ಮುಖ್ಯವಾಗಿದೆ ಎಂದರು.

ಕಾರಣ ಸಾರ್ವಜನಿಕರು ಸ್ಥಳೀಯ ಕಲಾವಿದರನ್ನು ಗೌರವಿಸಿ ಅವರನ್ನು ಬೆಳೆಸುವ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಪ್ರಸ್ತುತ ದಿನಮಾನಗಳಲ್ಲಿ ಸಾಕಷ್ಟು ಅವಕಾಶಗಳು ಬೆಂಗಳೂರ, ಮೈಸೂರ ಭಾಗದಲ್ಲಿ ನಡೆಯುತ್ತಿವೆ. ಆ ಭಾಗದ ಕಲಾವಿದರನ್ನು ಮೀರಿಸುವ ಕಲಾ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಆದರೆ ಅವರನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಏಕದಂಡಿಗಿ ಮಠದ ಕಾಳಹಸ್ತೇಂದ್ರ ಶೀಗಳು ಮಾತನಾಡಿದರು. ಕಾರ್ಯಕ್ರಮವನ್ನು ಕಾಂಗ್ರೆಸ್‌ ಮುಖಂಡ ಅಂಬರೇಶಗೌಡ ದರ್ಶನಾಪುರ ಉದ್ಘಾಟಿಸಿದರು. ರಾಜಶೇಖರ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಂದ್ರ ಪಾಟೀಲ ಮಡ್ನಾಳ, ಬಸವರಾಜ ಹಿರೇಮಠ, ಕರವೇ ಉ.ಕ ಅಧ್ಯಕ್ಷ ಶರಣು ಗದ್ದುಗೆ, ಪತ್ರಕರ್ತರ ಸಂಘದ ಅಧ್ಯಕ್ಷ ನಾರಾಯಣಾಚಾರ್ಯ ಸಗರ, ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಗುರು ಕಾಮಾ ಇದ್ದರು.


Trending videos

Back to Top