CONNECT WITH US  

ಇಂಟರ್ನ್ ಶಿಪ್‌ನ ಆ ರಿಲೇಶನ್‌ಶಿಪ್‌

ಆಸಕ್ತಿ ಎಂಬುದು ಪ್ರತಿಯೊಬ್ಬರಲ್ಲಿಯೂ ಮನೆಮಾಡಿರುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಅದರಲ್ಲಿಯೂ ನಾವು ಎರಡು ವಿಧದ ಆಸಕ್ತಿ ನೋಡಬಹುದು. ಸ್ವಂತ ಆಸಕ್ತಿ ಮತ್ತು ಇನ್ನೊಬ್ಬರ ಒತ್ತಾಯದ ಆಸಕ್ತಿ. ಕೆಲವೊಬ್ಬರಿಗೆ ತಮ್ಮದೇ ಆದ ವಿಶೇಷ ಆಸಕ್ತಿ ಇರುತ್ತದೆ. ಅದನ್ನು ಅವರು ಸಾಧಿಸುವವರೆಗೆ ಬಿಡುವುದಿಲ್ಲ. ಅದರಲ್ಲಿ ಏನಾದರೂ ಸಾಧನೆ ಮಾಡುತ್ತಾರೆ. ಇನ್ನೂ ಕೆಲವರು ತಮಗೆ ಅದರ ಬಗ್ಗೆ ತಿಳಿಯದಿದ್ದರೂ ಯಾರೋ ಹೇಳಿದರು ಎಂದು ಸಾಧನೆಗೆ ಮುಂದಾಗುತ್ತಾರೆ. ಆದರೆ ಅದು ಅವರಿಗೆ ಯಶಸ್ಸಾಗುವುದಿಲ್ಲ. ಇವಳೇನಪ್ಪಾ ಆಸಕ್ತಿಯ ಬಗ್ಗೆಯೇ ವಿವರಿಸುತ್ತಾಳ್ಳೋ ಎಂದು ಅಂದುಕೊಳ್ಳಬೇಡಿ. ನಾನು ಹೇಳಹೊರಟಿರುವುದೇ ಬೇರೆ ವಿಷಯ.

ನಾನು ಚಿಕ್ಕವಳಿರುವಾಗ ಯಾವಾಗಲೂ ನಮ್ಮ ಮನೆಯಲ್ಲಿ ಟಿ.ವಿ. ಚಾಲೂ ಇರುತ್ತಿತ್ತು. ನಮ್ಮ ಮನೆಯ ಗಬ್ಬರ್‌ಸಿಂಗ್‌ನಂತೆ ಇದ್ದ ನನ್ನ ಅಪ್ಪ ತುಂಬಾನೇ ಜೋರು. ಅವರು ಯಾವಾಗಲೂ ಸುದ್ದಿವಾಹಿನಿಯನ್ನೇ ವೀಕ್ಷಿಸುತ್ತಿದ್ದರು. ಅಮ್ಮ ಯಾವಾಗಲೂ ಹೇಳ್ತಾ ಇದ್ರು, ""ನೀನು ಕೂಡ ಅವರಂತೆ ಟಿ.ವಿ.ಯಲ್ಲಿ ವಾರ್ತೆ ಓದಬೇಕು. ಅದೊಂದು ಬಹಳ ದೊಡ್ಡ ಗೌರವದ ಕೆಲಸ. ಅದರಲ್ಲಿ ಏನಿಲ್ಲಾ, ಬರಿದಿದ್ದನ್ನು ಓದಿದರಾಯಿತು'' ಎಂದು ಹೇಳುತ್ತಿದ್ದರು. ನನಗೆ ಏನೂ ತಲೆಗೆ ಹೋಗುತ್ತಿರಲಿಲ್ಲ. ಆಚೆ ದಡ್ಡಿಯೂ ಅಲ್ಲದೇ ಜಾಣೆಯೂ ಆಗದೆ ಮಧ್ಯದಾರಿಯಲ್ಲಿ ಬೆಳೆದವಳು ನಾನು. ಮೆಟ್ರಿಕ್‌ ಆದ ನಂತರ ನಮಗೆ ಇರುವುದೇ ಭವಿಷ್ಯದ ದಾರಿ. ಆದರೆ ನನಗೆ ದಾರಿತಪ್ಪಿದಂತಾಗಿತ್ತು. ಪ್ರೌಢಶಾಲೆಯಲ್ಲಿ ಪ್ರಬಂಧದಲ್ಲಿ ಮೇಲುಗೈ. ಬರೆಯುವುದೆಂದರೆ ನನಗೆ ತುಂಬಾ ಆಸಕ್ತಿ. ನದಿ, ತೊರೆಯ ನೀರು ಕೊನೆಗೆ ಹೋಗಿ ಸೇರುವುದು ಸಮುದ್ರಕ್ಕೆಂಬಂತೆ ಕೊನೆಗೂ ನಾನು ಸೇರಿದ್ದು ಪತ್ರಿಕೋದ್ಯಮ ಪದವಿ ವ್ಯಾಸಂಗಕ್ಕೆ. ಅದರಲ್ಲಿಯೂ ಮನಃಶಾಸ್ತ್ರ, ಪತ್ರಿಕೋದ್ಯಮ ಹಾಗೂ ಇಂಗ್ಲೀಷ್‌ ಕಾದಂಬರಿ. ಆದರೆ ಒಂದೇ ಸೆಮಿಸ್ಟರಿನಲ್ಲಿ ನನ್ನನ್ನು ಸೆಳೆದಿದ್ದು ಪತ್ರಿಕೋದ್ಯಮ. 

ಪತ್ರಿಕೋದ್ಯಮದ ದ್ವಿತೀಯ ವರ್ಷ ಮುಗಿದ ನಂತರ ನಾನು ವೃತ್ತಿ ತರಬೇತಿಗೆ ಸೇರುವ ನಿರ್ಧಾರ ಮಾಡಿದೆ. ಮನಸ್ಸಿನಲ್ಲಿ ಒಂದು ಕಡೆ ಯಾರಪ್ಪಾ ಅದನ್ನೆಲ್ಲಾ ರಿಪೋರ್ಟ್‌ ಮಾಡೋದು ಅಂತ ಇದ್ದರೂ ಕೂಡ ಕೊನೆಗೆ ಸೇರಿಯೇ ಬಿಟ್ಟೆ.

ಮೊದಲ ಎರಡು ದಿನ ಕಸ, ಕೊಳಚೆ ನೀರು ಅಂತ ನನ್ನ ಸೀನಿಯರ್‌ ಇಡೀ ಊರನ್ನೇ ತಿರುಗಿಸಿಬಿಟ್ಟಿದ್ರು. ಅಬ್ಟಾ! ನನಗೆ ಸಾಕಾಗಿಯೇ ಬಿಟ್ಟಿತ್ತು. ಆದರೂ ಮನಸ್ಸಿನಲ್ಲಿ ಸಮಾಧಾನ ಯಾಕೆಂದರೆ ನಮ್ಮ ಊರಿನ ಬಗ್ಗೆಯೇ ಸರಿಯಾಗಿ ತಿಳಿದಿರಲಿಲ್ಲ. ನಾನು ಸೇರಿದ ಎರಡೇ ದಿನಗಳಲ್ಲಿ ನನ್ನ ಮೊದಲ ಲೇಖನ ಪತ್ರಿಕೆಯಲ್ಲಿ ಬಂದಿರುವುದನ್ನು ನೋಡಿ ಖುಷಿಗೆ ಪಾರವೇ ಇರಲಿಲ್ಲ. ನಾನು ಸೇರಿದ್ದು ಕಾರ್ಯನಿರತ ಪತ್ರಕರ್ತರ ಸಂಘಕ್ಕಾದರೂ ಅದರೊಳಗೆ ಒಂದು ಚಹಾ ಅಭಿಮಾನಿ ಸಂಘವೇ ಇತ್ತು. ಪ್ರತಿದಿನ ಸಂಜೆ ಎಲ್ಲರೂ ತಮ್ಮತಮ್ಮ ಸಂಬಂಧಿಸಿದ ಪತ್ರಿಕೆಗೆ ಸುದ್ದಿ ಕಳಿಸುವ ಭರದಲ್ಲಿ ಇರುವಾಗ ಪ್ರಸ್‌ ಕ್ಲಬ್‌ಗ 4 ಚಹಾ ಎಂದು ಸಂಧ್ಯಾಕ್ಕನ ಕರೆ ಲಕ್ಷ್ಮೀ ಹೊಟೇಲಿಗೆ ಹೋಗುತ್ತಿತ್ತು. ಆದರೆ ನಾನು ಎಂದೂ ಆ ಚಹಾ ಅಭಿಮಾನಿಗಳೊಂದಿಗೆ ಸೇರಿದವಳಲ್ಲ.

ನನ್ನ ನಾಮವನ್ನೇ ತಪ್ಪಾಗಿ ಉಚ್ಚರಿಸಿ ಇವತ್ತಿಗೂ ನನ್ನ ನಿಜ ನಾಮ ಹೇಳದೇ ನನಗೆ ಹೊಸ ನಾಮಕರಣ ಮಾಡಿದವರು ಇನ್ನೊಬ್ಬರು. ಪ್ರತಿಯೊಂದು ಕಾರ್ಯಕ್ರಮಕ್ಕೆ ಪತ್ರಕರ್ತರೊಂದಿಗೆ ಹೋಗಿ ಬರುತ್ತಿದ್ದೆ. ಅಲ್ಲಿ ಯಾರಾದರೂ ನನ್ನನ್ನು ನೋಡಿ ಇವರು ಯಾವ ಪತ್ರಿಕೆಯವರು ಎಂದಾಗ ನಮ್ಮಲ್ಲಿ ಯಾರಾದರೂ ಹಿರಿಯ ಪತ್ರಕರ್ತರು ನಮ್ಮ ಬಗ್ಗೆ ವಿವರಿಸುತ್ತಿದ್ದರು. ಸಮಾಜದಲ್ಲಿ ಪತ್ರಕರ್ತರಿಗೆ ಸಿಗುವ ವಿಶೇಷ ಆತಿಥ್ಯವನ್ನು ನೋಡಿ ತುಂಬಾನೆ ಖುಷಿಯಾಗುತ್ತಿತ್ತು.

ಮೊದಲೇ ಹೇಳಿದಂತೆ ಚಹಾ ಅಭಿಮಾನಿ ಸಂಘದೊಂದಿಗೆ ನಾನು ಬೆರೆಯಲೇ ಇಲ್ಲ. ಬರೋಬ್ಬರಿ ಒಂದು ತಿಂಗಳ ವೃತ್ತಿ ತರಬೇತಿಯ ಕೊನೆಯ ದಿನ ಅದ್ಯಾಕೋ ಗೊತ್ತಿಲ್ಲ ಚಹಾ ಕುಡಿಯುವ ಮನಸ್ಸಾಯಿತು. ಒಂದು ದಿನ ಚಹಾ ಕುಡಿದು ನೋಡುವ ಎಂದು ಸಂಜೆಯಾಗುತ್ತಲೇ ನನಗೂ ಚಹಾ ತರಿಸಿದೆ. ಎಲ್ಲರೊಂದಿಗೆ ಚಹಾ ಕುಡಿಯಲು ಶುರುಮಾಡಿದೆ. ಆಗ ನನಗಾಗಿದ್ದು ಪಶ್ಚಾತ್ತಾಪ. ಒಂದು ತಿಂಗಳಿನಿಂದ ಆ ಚಹಾವನ್ನು ತಿರಸ್ಕರಿಸುತ್ತಿದ್ದೆ. ಆದರೆ ಆ ಚಹಾ ಕುಡಿದವರು ಸ್ವರ್ಗಕ್ಕೆ ಹೋಗುವುದಂತೂ ಗ್ಯಾರಂಟಿ. ಹಾಗಾಗಿ ಪ್ರತಿಸಲ ನಾನು ಅಲ್ಲಿಗೆ ಭೇಟಿ ಕೊಟ್ಟಾಗ ಲಕ್ಷಿ¾à ಚಹಾ ಸವಿಯದೇ ಎಂದಿಗೂ ಬರುವುದಿಲ್ಲ.

- ಅನ್ವಯ ಮೂಡಬಿದ್ರಿ 
ಆಳ್ವಾಸ್‌ ಕಾಲೇಜು, ಮೂಡಬಿದ್ರಿ 


Trending videos

Back to Top