CONNECT WITH US  

ನಂಬುವ ಮೊದಲು !

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು. ಪ್ರಮಾಣಿಸಿ ಕಂಡರೂ ವಿಚಾರಿಸಿ ನೋಡು. ವಿಚಾರಿಸಿದಾಗ ನಂಬಿಕೆ ಬಂದರೂ 100ರಲ್ಲಿ 50ರಷ್ಟು ಶೇಕಡ ಮಾತ್ರ ನಂಬಬೇಕು. ಏಕೆಂದರೆ, ಇದು ಸತ್ಯಹರಿಶ್ಚಂದ್ರನ ಕಾಲವೂ ಅಲ್ಲದ ಕಾರಣ ಅವನಂತೆ ಇಲ್ಲಿ ಯಾರೂ ಇಲ್ಲ. ಕಲಿಯುಗದ ನಂತರ ಯಾವುದಾದರೊಂದು ಸತ್ಯವಂತರ ಕಾಲ ಅಥವಾ ಪ್ರಾಮಾಣಿಕರ ಕಾಲ ಬಂದಾಗ "ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು' ಎಂಬ ಬದಲಿಗೆ "ಪ್ರತ್ಯಕ್ಷ ಕಂಡು ನಂಬಿಬಿಡು' ಎಂಬ ಗಾದೆ ಪ್ರಚಲಿತಕ್ಕೆ ಬರಬಹುದೋ ಏನೋ! ನಾವು ಎಂದಿಗೂ ಎಂದೆಂದಿಗೂ ಯಾರ ಮೇಲೆಯೂ ಅತಿಯಾದ ನಂಬಿಕೆ, ವಿಶ್ವಾಸ ಇಡಬಾರದು. ಎಂದಾದರೂ ಒಮ್ಮೆ ಅವರಿಗೆ ಅಪಾಯವಿದೆ ಎಂದು ತಿಳಿದಾಗ ನಮ್ಮನ್ನು ನಡುನೀರಿನಲ್ಲಿ ಕೈಬಿಡುತ್ತಾರೆ. ಇದಕ್ಕೆ ಯಾವುದೇ ರೀತಿಯ ಸಂಶಯವಿಲ್ಲ.

ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಪರಮಾತ್ಮನಾದ ಶ್ರೀಕೃಷ್ಣನೂ ಯುಧಿಷ್ಠಿರನ ಬಳಿ, ""ನೀನು ಹತಃ ಅಶ್ವತ್ಥಾಮಃ ಕುಂಜರಃ ಎಂದು ದ್ರೋಣನ ಬಳಿಹೋಗಿ ಹೇಳು'' ಎಂದನು. ಅಂದರೆ ಅಶ್ವತ್ಥಾಮನೆಂಬುದು ದ್ರೋಣನ ಪುತ್ರನ ಹೆಸರಾದರೆ ಕುಂಜರ ಎಂಬುದು ಒಂದು ಆನೆ. ಹಾಗಾಗಿ, ರಣರಂಗದಲ್ಲಿ ಸತ್ತಿರುವುದು ಒಂದು ಆನೆ. ಯುಧಿಷ್ಠಿರನು ದ್ರೋಣನ ಬಳಿ ಹೇಳುವಾಗ, "ಹತಃ ಅಶ್ವತ್ಥಾಮ' ಎಂಬುದನ್ನು ಜೋರಾಗಿ ಹೇಳಿ, "ಕುಂಜರಃ' ಎಂಬುದನ್ನು ನಿಧಾನವಾಗಿ ಹೇಳುತ್ತಾನೆ. ಇದರಿಂದ ದ್ರೋಣನು ತನ್ನ ಮಗನೇ ಸತ್ತನೆಂದು ತನ್ನ ವಚನದಂತೆ ಪ್ರಾಣ ಬಿಡುತ್ತಾನೆ. ಇದರಿಂದ ಯುಧಿಷ್ಠಿರನು ತನ್ನ ಪಡೆಯ ವಿಜಯಕ್ಕಾಗಿ ನಂಬಿಕೆದ್ರೋಹ ಮಾಡಿದಂತೆ ಆಯಿತಲ್ಲವೇ!

ಇದೊಂದು ಉದಾಹರಣೆ ಅಷ್ಟೇ. ಒಬ್ಬ ಕವಿ ತನ್ನ ಲೇಖನಿಯನ್ನೇ ಅಸ್ತ್ರವಾಗಿಟ್ಟುಕೊಂಡು ಸತ್ಯವನ್ನೇ ಸುಳ್ಳುಮಾಡಬಹುದು ಅಥವಾ ಸುಳ್ಳನ್ನೇ ಸತ್ಯಮಾಡಬಹುದಾದ ಶಕ್ತಿಯು ಅವನಿಗಿದೆ. ಇದು ನಮ್ಮ ನಮ್ಮ ನಂಬಿಕೆಯ ಮೇಲೂ ಪರಿಣಾಮ ಬೀರಬಹುದು.
ನೇಮಿಚಂದ್ರನು ಹೇಳಿದಂತೆ ಅಥವಾ ಬರೆದಂತೆ:
ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ|
ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ|
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್‌ ಕೃತಿಬಂಧದೊಳಲೆ¤ ಕಟ್ಟಿದರ್‌ |
ಮುಟ್ಟಿದರೊತ್ತಿ ಮೆಟ್ಟಿದರದೇ ನಳವಗ್ಗಳಮೋ ಕವೀಂದ್ರರಾ ||
-ನೇಮಿಚಂದ್ರ

ಕಪಿ ಸಂತತಿಯು ಕಡಲಿನಲ್ಲಿ ಸೇತುವೆ ಕಟ್ಟಿರಬಹುದು ಅಥವಾ ಕಟ್ಟದೇ ಇರಬಹುದು. ವಾಮನನ ಕಾಲು ಮುಗಿಲನ್ನು ಮುಟ್ಟಿರಬಹುದು ಅಥವಾ ಮುಟ್ಟದೇ ಇರಬಹುದು. ಹರನ ಗಂಟಲನ್ನು ನರನು (ಅರ್ಜುನ) ಮೆಟ್ಟಿರಬಹುದು ಅಥವಾ ಮೆಟ್ಟದೇ ಇರಬಹುದು. ಇವುಗಳನ್ನು ಕವಿ ತನ್ನ ಕೃತಿಗಳಲ್ಲಿ ಕಟ್ಟಿದ್ದಾನೆ, ಮುಟ್ಟಿದ್ದಾನೆ. ಇದು ಈ ಶೇಷ್ಠ ಕವೀಂದ್ರರ ಸಾಮರ್ಥ್ಯವಾಗಿದೆ ಎಂಬುದು ಮೇಲಿನ ಪದ್ಯದ ಆಶಯವಾಗಿದೆ.

ವಿಜಯನಗರದಲ್ಲಿ ವಿಜೃಂಭಣೆ ಎಲ್ಲೆಲ್ಲೂ ಎದ್ದು ಕಾಣುತ್ತಿದ್ದ ನಗರ. ಚಿನ್ನದ ಒಡವೆ ಬೀದಿಯಲ್ಲಿ ಮಾರುವ ಊರು ಎಂದು ನಾವು ತಿಳಿದಿದ್ದೇವೆ ಅಲ್ಲವೇ? ಆದರೆ ಅದನ್ನು ನಮಗೆ ತಿಳಿಸಿದವನು ಯಾರು ಒಬ್ಬ ಪ್ರವಾಸಿಗನಲ್ಲದೇ (ಕವಿ) ಮತಾöರೂ ಅಲ್ಲ. ತಾನು ಭೇಟಿ ನೀಡುವಾಗ ಹೇಗಿದೆ ಎಂದು ಆ ಪ್ರವಾಸಿಗ ವರ್ಣಿಸಿದ್ದಾನೆ. ಇದನ್ನು ಅಲ್ಲಿಯ ರಾಜ ಅಥವಾ ಅಲ್ಲಿನ ಪ್ರಜೆಗಳು ಒಬ್ಬ ಪ್ರವಾಸಿಗ ತಮ್ಮ ರಾಜ್ಯ ಚೆನ್ನಾಗಿದೆ ಎಂದು ಆತ ವರ್ಣಿಸಲು ಆ ಏರ್ಪಾಡನ್ನು ಮಾಡಿಲ್ಲ ಎನ್ನುವುದಕ್ಕೆ ಯಾವ ಸಾಕ್ಷಿಯಿದೆ. ಪುಸ್ತಕದಲ್ಲಿ ಪ್ರವಾಸಿಗ ಬರೆದಿದ್ದಾನೆಯೇ ಹೊರತು ಮತಾöವ ಸಾಕ್ಷಿಯಿದೆ. ಇದ್ದರೂ ದೇವಾಲಯಗಳೂ; ಅಲ್ಲಿ ಎಲ್ಲೆಲ್ಲೂ ಇರುವಂತೆ ಶಾಸನ ಇದೆ. ಅದು ಕೇವಲ ಅಲ್ಲಿನ ಸುಸ್ಥಿತಿಯನ್ನು ಮಾತ್ರ ತಿಳಿಸುತ್ತದೆಯೇ ಹೊರತಾಗಿ ಅಲ್ಲಿನ ದುಃಸ್ಥಿತಿಯನ್ನು ತಿಳಿಸುವುದಿಲ್ಲ.

ಕನ್ನಡದ ಆದಿಕವಿ ಪಂಪ ಬಾಹುಬಲಿಯನ್ನು ನಾಯಕನನ್ನಾಗಿ ಮಾಡಿ ಒಂದು ಕೃತಿಯನ್ನು ರಚಿಸುತ್ತಾನೆ. ಆದರೆ, ಕರಾವಳಿ ಕರ್ನಾಟಕದ ಮಹಾಕವಿ, ಶೃಂಗಾರಕವಿಯಾದ ರತ್ನಾಕರವರ್ಣಿ ಭರತನನ್ನೂ ನಾಯಕನನ್ನಾಗಿ ಮಾಡಿ, ಭರತೇಶ ವೈಭವ ಎಂಬ ಕೃತಿಯನ್ನು ರಚಿಸಿದ್ದಾನೆ. ಆ ಕಾಲದಲ್ಲಿ ಇವರಿಬ್ಬರೂ ಇರಲಿಲ್ಲ, ಹೊರತಾಗಿ ಕಲ್ಪನೆಯಲ್ಲೇ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಯಾವುದನ್ನು ಓದುವುದು ಯಾವುದನ್ನು ನಂಬುವುದು ಎಂಬುದು ಓದುಗನಿಗೆ ಇನ್ನೂ ಗೊಂದಲವಾಗಿಯೇ ಉಳಿದಿದೆ!

ವ್ಯಾಸರು ಬರೆದಿರುವ "ಮಹಾಭಾರತ', ವಾಲ್ಮೀಕಿ ಬರೆದಿರುವ "ರಾಮಾಯಣ' ನಂಬಬಹುದೋ ಏನೋ! ಏಕೆಂದರೆ, ಅವರು ಆ ಕಾಲದಲ್ಲೇ ಇದ್ದವರು. ಆದರೆ ಆ ಪವಿತ್ರ ಮಹಾಕಾವ್ಯಗಳು ನಡೆದುದು ಶತಶತಮಾನಗಳ ಹಿಂದೆ. ಅದು ಈ ಕಲಿಯುಗದವರೆಗೂ ಬಳುವಳಿಯಾಗಿ ಬಂದಿದೆ. ಅಂದರೆ ಸ್ವಲ್ಪವಾದರೂ ಬದಲಾಗದೇ ಇರುತ್ತದೆಯೇ. ಒಬ್ಬನ ಕಿವಿಯಲ್ಲಿ ಹೇಳಿದ ಮಾತು ಇನ್ನೊಬ್ಬನ ಕಿವಿಗೆ ಬರುವಾಗ ಮತ್ತೂಂದಾಗಿರುತ್ತದೆ. ಅಂತಹುದರಲ್ಲಿ ಇದು ಶತಮಾನಗಳ ಹಿಂದೆ ನಡೆದದ್ದು ಎಂದ ಮೇಲೆ ಬದಲಾಗದೇ ಇರುತ್ತದೆಯೆ?

ಪಂಪನು ಅರ್ಜುನನ್ನು ನಾಯಕನನ್ನಾಗಿ ಮಾಡಿಕೊಂಡು ವಿಕ್ರಮಾರ್ಜುನ ವಿಜಯ ಎಂಬ ಕೃತಿ ಬರೆದ. ರನ್ನನು ಭೀಮನನ್ನು ನಾಯಕನನ್ನಾಗಿ ಮಾಡಿ ಸಾಹಸಭೀಮವಿಜಯ ಎಂಬ ಕೃತಿಯನ್ನು ರಚಿಸಿದ್ದಾನೆ. ಆದರೆ ಅಲ್ಲಿ ಇರುವುದು ಮಹಾಭಾರತವೇ. ಭೀಮ ಮತ್ತು ಅರ್ಜುನನನ್ನೂ ನಾಯಕನನ್ನಾಗಿ ಮಾಡುವ ಸಲುವಾಗಿ ಅವರಿಬ್ಬರೂ ಕವಿಗಳೂ ಮಹಾಕಾವ್ಯಗಳನ್ನು ಸ್ವಲ್ಪವಾದರೂ ಬದಲು ಮಾಡದೇ ಇರುತ್ತಾರೆಯೆ? ಖಂಡಿತವಾಗಿಯೂ ಮಾಡಿರುತ್ತಾರೆ.

ಇನ್ನು ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯನ್ನು ಅರಿಷ್ಟನೇಮಿ ಎಂಬ ಶಿಲ್ಪಿ ಕೆತ್ತಿದ್ದಾನೆಂದು ನಾವು ತಿಳಿದಿದ್ದೇವೆ. ಆದರೆ ಡಾ. ನಂದಾವರರವರು ತಮ್ಮ ಕೃತಿಯೊಂದರಲ್ಲಿ ಇದನ್ನು ವೀರಶಂಭು ಎಂಬ ಶಿಲ್ಪಿಯು ಕೆತ್ತಿದ್ದಾನೆಂದು ಹೇಳಿದ್ದಾರೆ. ಇಬ್ಬರಲ್ಲಿ ಯಾರು  ಆ ಮಹಾಮೂರ್ತಿಯನ್ನು ಕೆತ್ತಿದರೆಂಬುದು ಓದುಗರಿಗೆ  ಗೊಂದಲದ ವಿಷಯ.
ಇತ್ತೀಚಿನ ಪತ್ರಿಕೆಯೊಂದರಲ್ಲಿ "ಗುರುತ್ವಾಕರ್ಷಣ ಬಲ'ವನ್ನು ನ್ಯೂಟನ್‌ಗಿಂತಲೂ ಮೊದಲೇ ಗುರುಕುಲದ ಪದ್ಧತಿಯಲ್ಲಿ ಗುರುಗಳು ನ್ಯೂಟನ್‌ನ ಸೇಬಿನ ಕಥೆಯಂತೆ "ಗುರುತ್ವದ ಬಲ'ವನ್ನು ಕಂಡುಹಿಡಿದರು ಎಂಬುದನ್ನು ಪ್ರಕಟಿಸಿತ್ತು. ಇದರಿಂದ ವಿದ್ಯಾರ್ಥಿಗಳಲ್ಲಿ "ಗುರುತ್ವದ ಬಲ' ಯಾರು ಕಂಡುಹಿಡಿದರು ಎಂಬುದೇ ಗೊಂದಲವಾಯಿತು.

ಭಾರತಕ್ಕೆ ಯಾವ ರಾಜನಿಂದ "ಭಾರತ' ಎಂಬ ಹೆಸರು ಬಂದಿತೆಂಬುದು ಸಹ ಗೊಂದಲವೆ, ಏಕೆಂದರೆ, ಭಾರತದ ಪುರಾಣ ಇತಿಹಾಸಗಳಲ್ಲಿ ಇಬ್ಬರೋ, ಮೂವರೋ ಭರತರಿದ್ದಾರೆ.

ನಾವೆಲ್ಲರೂ ತಿಳಿದಂತೆ ಕನ್ನಡದ ಮೊದಲ ಗ್ರಂಥ "ಕವಿರಾಜ ಮಾರ್ಗ'. ಅದರ ಕತೃì ನೃಪತುಂಗ ಎಂದು ತಿಳಿದೆವು. ಆದರೆ 9ನೇ ತರಗತಿಯಲ್ಲಿ ಕನ್ನಡ ಪಠ್ಯಪುಸ್ತಕದಲ್ಲಿ ಅದನ್ನು ನೃಪತುಂಗನ ಆಶ್ರಯದಲ್ಲಿ "ಶ್ರೀವಿಜಯ' ಎಂಬ ಕವಿ ಬರೆದಿದ್ದಾನೆ ಎಂದು ಪ್ರಕಟವಾಗಿದೆ.

ವೈಜ್ಞಾನಿಕ ದೃಷ್ಟಿಯಲ್ಲಿ ರೇಡಿಯೋವನ್ನು ಮಾರ್ಕೊನಿ ಕಂಡುಹಿಡಿದಿದ್ದಾನೆ ಎಂದು ಎಲ್ಲರಿಗೂ ಗೊತ್ತು. 8ನೇ ತರಗತಿ ಪಠ್ಯಪುಸ್ತಕದಲ್ಲಿ ಈ ರೇಡಿಯೋವನ್ನು ಜಗದೀಶ್‌ಚಂದ್ರ ಬೋಸ್‌ ಮೊತ್ತಮೊದಲ ಬಾರಿಗೆ ಕಂಡುಹಿಡಿದರು ಎಂದು ಪ್ರಕಟವಾಗಿ ಕೊಂಚ ಮಟ್ಟದ ಗೊಂದಲಕ್ಕೀಡು ಮಾಡಿತ್ತು. ಮೇಲಿನವು ಊಹಾಪೋಹಗಳ್ಳೋ ಅಥವಾ ನಿಜವೋ ಗೊತ್ತಿಲ್ಲ. ಆದರೆ, ಇವೆಲ್ಲವೂ ನಮ್ಮ ನಮ್ಮ ನಂಬಿಕೆಗೆ ಬಿಟ್ಟದ್ದು. ನಂಬುವುದು ಬಿಡುವುದು ಅವರವರಿಗೆ ಬಿಟ್ಟದ್ದು. ನಾನು ಮೊದಲು ಹೇಳಿದಂತೆ 100ರಲ್ಲಿ 50ರಷ್ಟು ಶೇ. ದಷ್ಟು ಮಾತ್ರ ನಂಬಿ. ಮೊದಲು ನಾವು 100ರಲ್ಲಿ 100ರಷ್ಟು ನಮ್ಮನ್ನು ನಾವು ನಂಬಬೇಕು. ಆಗ ಮಾತ್ರ "ನಂಬಿಕೆ' ಎಂಬ ಪದಕ್ಕೆ ಅರ್ಥ. 
ಯೋಚಿಸಿ, ನಂಬುವ ಮೊದಲು !

ನಂದನ್‌ ಕುಮಾರ್‌, ಸ.ಪ.ಪೂ. ಕಾಲೇಜು, ಕುಕ್ಕುಜೆ, ಕಾರ್ಕಳ


Trending videos

Back to Top