CONNECT WITH US  

ನೂಪುರ ಶೃಂಗಾರ

ಗೆಜ್ಜೆಯೆಂದರೆ ಯಾರಿಗಿಷ್ಟ ಇಲ್ಲ. ಮಹಿಳೆಯರಂತೂ ಗೆಜ್ಜೆಯಿಲ್ಲದೆ ಹಸೆಮಣೆ ಏರಲಾರರು. ಅದು ಹಿಂದೂ ಸಂಸ್ಕೃತಿ ಕೂಡ. ಮದುವೆಯಲ್ಲಿ ಗೆಜ್ಜೆ , ಮೂಗುತಿ ಏಲ್ಲಾ  ಹೆಣ್ಣಿಗೆ ಶೃಂಗಾರ. ಈ ಆಭರಣಗಳಿಂದ ಹೆಣ್ಣು  ಇನ್ನೂ ಶೃಂಗಾರಗೊಳ್ಳುತ್ತಾಳೆ. ಪ್ರತಿ ಹೆಣ್ಣಿಗೂ ನಾನು ಗೆಜ್ಜೆ ತೊಡಬೇಕು ಇಡೀ ಮನೆಯೆಲ್ಲಾ  ನನ್ನ ಗೆಜ್ಜೆ ಸದ್ದು ಕೇಳಬೇಕು- ಹೀಗೆಲ್ಲಾ  ಆಸೆ ಇರುತ್ತದೆ. ಗೆಜ್ಜೆ ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಇದು ಮನ, ಮನೆಯ ಸಂಭ್ರಮದ ಸಂಕೇತ. ಸೊಬಗಿನ ಶೃಂಗಾರಕ್ಕೆ ಕಾಲ್ಗೆಜ್ಜೆಯ ಪಾತ್ರ ಮಹತ್ವದ್ದು. ಆದರೆ, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಅದರಲ್ಲೂ ನಗರದಲ್ಲಿ ವಾಸಿಸುವ ಹೆಣ್ಣುಮಕ್ಕಳಿಗೆ ಗೆಜ್ಜೆಯನ್ನು ತೊಡುವುದೆಂದರೆ ಒಂದು ಅಭಾಸಕರ ವಿಷಯ. ಮದುವೆಯಲ್ಲಿ ಗೆಜ್ಜೆ ತೊಟ್ಟರೆ ಅದುವೆ ಒಂದು ದೊಡ್ಡ ಸಂಗತಿ. ನಮ್ಮ ದೇಶದಲ್ಲಿ  ಪ್ರತಿಯೊಂದು ಧರ್ಮದವರೂ ಅವರದ್ದೇ ಆದ ಆಭರಣಗಳನ್ನು ಧರಿಸುತ್ತಾರೆ.

ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಗೆಜ್ಜೆಯೆಂದರೆ ಅದಕ್ಕೆ ಅದರದ್ದೇ ರೀತಿಯ ಒಂದು ಸ್ಥಾನಮಾನವಿದೆ. ಆ ಗೆಜ್ಜೆಯ ಶಬ್ದಕ್ಕೆ  ಇಡೀ ಸಂಭ್ರಮದ ವಾತಾವರಣವೇ ನಿರ್ಮಾಣವಾಗಿರುತ್ತದೆ. ಗೆಜ್ಜೆಯಲ್ಲೂ ಈಗ ನಾನಾ ತರದ ಗೆಜ್ಜೆಗಳು ಇವೆ. ಕೆಲವು ಹೆಣ್ಣುಮಕ್ಕಳು ಶಬ್ದವನ್ನು ಇಷ್ಟಪಡುವುದಿಲ್ಲ. ಬದಲಾಗಿ ಝಲ್‌ ಝಲ್‌ ಎನ್ನದ ಗೆಜ್ಜೆಯನ್ನು ತೊಡುತ್ತಾರೆ‌. ಕೆಲವರು ಗೆಜ್ಜೆಯ ಶಬ್ದ ನಮಗೆ ಇಷ್ಟವಿಲ್ಲ ಎಂದು ಅದರಲ್ಲಿ ಇರುವ ಶಬ್ದ ಮಾಡುವ ಗೆಜ್ಜೆಯನ್ನು ತೆಗೆದು ಬರೀ ಚೈನ್‌ ತೊಟ್ಟುಕೊಂಡು ಸುಮ್ಮನಾಗುತ್ತಾರೆ.

ಕಾಲಕ್ಕೆ ತಕ್ಕಂತೆ ನಮ್ಮ ಬದುಕುವ ಶೈಲಿ, ಭಾಷಾಶೈಲಿ, ನಾವು ಧರಿಸುವ ಬಟ್ಟೆಯ ಶೈಲಿ ಎಲ್ಲವೂ ಬದಲಾಗುತ್ತದೆ. ಅದಕ್ಕೆ ಗೆಜ್ಜೆಯೂ ಹೊರತಲ್ಲ. ಗೆಜ್ಜೆ ನಮ್ಮ ಅಂದಕ್ಕೊಂದು ಮೆರುಗು ತರುವ ಆಭರಣ. ಕುತ್ತಿಗೆಗೆ ಸರ, ಹಣೆಯ ಶೃಂಗಾರಕ್ಕೆ ನೆತ್ತಿ ಬಕ್ತಲೆ, ಕೈಗೆ ಕೈಬಳೆ, ಕಾಲಿಗೆ ಕಾಲುಂಗುರ ಹಾಗೆಯೇ ಗೆಜ್ಜೆ ಕೂಡ ಹೆಣ್ಣಿಗೆ ಅಂದ. ಸಾಮಾನ್ಯವಾಗಿ ಹೆಣ್ಣು ತನ್ನ ಮನೆಬಿಟ್ಟು ಗಂಡನ ಮನೆಗೆ ಹೋಗುವಾಗ ಆಭರಣ ಕೊಡುವುದು ವಾಡಿಕೆ. ಹಾಗೆಯೆ ಈ ಗೆಜ್ಜೆಯನ್ನು ಕೂಡ ಕೊಡುವುದು ಸಂಪ್ರದಾಯವಾಯಿತು.

ಈಗ ಮಾರುಕಟ್ಟೆಯಲ್ಲಿಯೂ ತರಹೇವಾರಿ ಗೆಜ್ಜೆಗಳು ಬಂದಿವೆ. ಮಕ್ಕಳಿಂದ ಹಿಡಿದ ದೊಡ್ಡವರವರೆಗೂ ಸಾಕಷ್ಟು ಆಯ್ಕೆಯೂ ಇರುತ್ತದೆ.        ಇನ್ನು ಸಿನೆಮಾ ತಾರೆಯರು ವಿಧ ವಿಧವಾದ ಗೆಜ್ಜೆಯನ್ನು  ತೊಟ್ಟಿರುತ್ತಾರೆ. ನಮ್ಮ ನಗರದ ಮಹಿಳೆಯರು ಅವರಿಂದ ಪ್ರೇರಿತರಾಗಿ ಅದೇ ತರಹದ ಗೆಜ್ಜೆ ಬೇಕೆಂದು ಪಟ್ಟುಹಿಡಿದು ಕೂರುತ್ತಾರೆ.

ಗೆಜ್ಜೆ ಯಾವುದೇ ರೀತಿಯದ್ದಾಗಿದ್ದರೂ ಅದರಲ್ಲಿ ಗೆಜ್ಜೆ ಇರಲೇಬೇಕು. ಆಗಲೇ ಅದಕ್ಕೊಂದು ಮೆರುಗು. ಇತ್ತೀಚಿನ ದಿನಗಳಲ್ಲಿ ಆಭರಣಗಳ ಅಸಲಿ ರೂಪವನ್ನೇ ಬದಲಾಯಿಸಲಾಗುತ್ತದೆ. ಹೀಗಾಗಿ ಯಾವ ತರದ ಗೆಜ್ಜೆಯನ್ನು ಖರೀದಿಸಬೇಕೆಂದು ಮೊದಲೇ ತಿಳಿದುಕೊಂಡರೆ ಸೂಕ್ತ. 
ಮಕ್ಕಳು ತೊಡುವಂತಹ ಗೆಜ್ಜೆಗಳಲ್ಲಿಯೂ ಹೆಚ್ಚಿನ ಆಯ್ಕೆ ಇದೆ. ಸರಳವಾದ ಗೆಜ್ಜೆಯಿಂದ ಹಿಡಿದು ಹೆಚ್ಚು ಝಲ್‌ ಝಲ್‌ ಎನ್ನುವ, ಹಾಗೆಯೇ ಕಡಿಮೆ ಶಬ್ಬ ಬರುವ, ಜೊತೆಗೆ ಶಬ್ದ ಬಾರದ ವಿಶಿಷ್ಟವಾದ ವಿನ್ಯಾಸಗಳಲ್ಲೂ ಹೊಸ ಹೊಸ ಬಗೆಗಳಲ್ಲಿ  ದೊರಕುತ್ತವೆ. ಆದರೆ ಯಾವುದೇ ಗೆಜ್ಜೆ ಆದರೂ ಶಬ್ದವನ್ನು ಉದ್ಭವಿಸದಿದ್ದರೆ ಅದರ ವೈಶಿಷ್ಟ್ಯವನ್ನೇ ಅದು ಕಳೆದುಕೊಂಡು ಬಿಡುತ್ತದೆ. 

ಹಿಂದೆ ಮಹಿಳೆಯರು ಮೈತುಂಬಾ ಆಭರಣವನ್ನು ತೊಡುತ್ತಿದ್ದರು. ಹೆಣ್ಣಿನ ಕಾಲ್ಗೆಜ್ಜೆಯ ನಾದ ಝಲ್‌ ಝಲ್‌ಎಂದು ಇಡೀ ಮನೆಯನ್ನು ಆವರಿಸುತ್ತಿತ್ತು. ಅದರಲ್ಲಿ ಬೆಳ್ಳಿ ಗೆಜ್ಜೆಗೆ ಹೆಚ್ಚಿನ ಮಹತ್ವವಿತ್ತು.

ಈಗ ಮೊದಲಿನಂತೆ ಹೆಣ್ಣುಮಕ್ಕಳು ಮನೆಯಲ್ಲೇ ಇರುವುದಿಲ್ಲ. ಓದು, ಉದ್ಯೋಗ ಅಂತ ಹೊರಗೆ ಹೋಗುತ್ತಾರೆ. ಅಲ್ಲದೆ ಹೆಚ್ಚು ಹೆಚ್ಚು ಓದಿ, ವಿದ್ಯಾಭ್ಯಾಸ ಪಡೆದು ನೌಕರಿಯನ್ನೂ ಗಿಟ್ಟಿಸಿಕೊಂಡಿದ್ದಾರೆ.  ಹಾಗಾಗಿ ಅವರು ಉದ್ಯೋಗ ಸ್ಥಳದ ವಾತಾವರಣಕ್ಕೆ ತಕ್ಕಂತೆ ಇರಬೇಕಾಗುತ್ತದೆ. ಮೈತುಂಬಾ ಆಭರಣಗಳನ್ನು ತೊಟ್ಟುಕೊಳ್ಳಲಾಗುವುದಿಲ್ಲ. ಸೀರೆಯ ಬದಲು ಆಧುನಿಕ ಉಡುಗೆಗಳನ್ನು ಧರಿಸಬೇಕಾಗುತ್ತದೆ. ಆದರೂ ಹೆಚ್ಚಿನ ಹೆಣ್ಣುಮಕ್ಕಳು ಕೈತುಂಬಾ ಬಳೆ ಅಲ್ಲದಿದ್ದರೂ ಕೈಗೊಂದು ಬಳೆ, ಸಿಂಧೂರದ ಬದಲು ನವನವೀನ ಬಿಂದಿ, ಸರಳವಾದ ಹೊಸ ಫ್ಯಾಷನ್ನಿನ ಕಾಲ್ಗೆಜ್ಜೆಗಳನ್ನು ತೊಟ್ಟು  ಆನಂದಿಸುತ್ತಾರೆ. ಅಂತೆಯೇ ಹಬ್ಬ-ಹರಿದಿನಗಳಲ್ಲಿ, ಮದುವೆಯಂತಹ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಸೀರೆ, ಕೈತುಂಬಾ ಬಣ್ಣಬಣ್ಣದ ಬಳೆ, ಕಾಲಿಗೆ ಗೆಜ್ಜೆ ತೊಟ್ಟು ಖುಷಿ ಪಡುತ್ತಾರೆ.

ಜ್ಯೋತಿ, ತೃತೀಯ ಪತ್ರಿಕೋದ್ಯಮ  ಎಸ್‌ಡಿಎಂಕಾಲೇಜು, ಉಜಿರೆ


Trending videos

Back to Top