CONNECT WITH US  

ಬೀದಿ ಮಕ್ಕಳ ಶಿಕ್ಷಣಕ್ಕೆ ಕಾರಣವಾದ ಕಿರುಚಿತ್ರ

ಸರ್‌ ವಾಟ್ಸಾಪ್‌ ಗ್ರೂಪ್‌ನಲ್ಲಿ ಒಮ್ಮೆ ಹೀಗೆಂದು ಕೇಳಿದ್ರು, ನಿಗದಿತ ದಿನದಂದು ಒಂದೆಡೆ ಲೀಡರ್‌ಶಿಪ್‌ ಕ್ಯಾಂಪ್‌ ಇದೆ, ಯಾರಿಗೆ ಅದರಲ್ಲಿ ಭಾಗವಹಿಸಲು ಸಾಧ್ಯವೋ ಅವರೆಲ್ಲ ಬರಬಹುದು... ಆ ಹೊತ್ತಿಗೆ ನಮ್ಮ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಎಕ್ಸಾಮ್ ಮುಗಿದಿತ್ತು. ಆದರೆ, ನಮ್ಮ ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿಗಳ ಎಕ್ಸಾಮ್ ಆಗಿರಲಿಲ್ಲ. ಆದ್ದರಿಂದ ನಮ್ಮ ಕ್ಲಾಸಿಂದ ಯಾರೂ ಪ್ರತಿಕ್ರಿಯೆ ಕೊಡಲಿಲ್ಲ. ಆದ್ರೆ ನಾನು ಅಂತಹ ಮುಂದಾಲೋಚನೆಗೆ ಕೈಹಾಕಿದವನಲ್ಲ . ಯಾಕಂದರೆ ನಮ್ಮದು ಏನಿದ್ರೂ ಎಕ್ಸಾಮ… ಹಿಂದಿನ ದಿನ ಪುಸ್ತಕ ಎಲ್ಲಿದೆ ಅಂತಾ ಹುಡುಕಾಡೋ ಜಾಯಮಾನ. ಹಾಗಂತ ಬಹಳ ಬುದ್ಧಿವಂತ ಅಂದ್ಕೋಬೇಡಿ. 

ಹಾಗೆ ಕ್ಯಾಂಪ್‌ ಶುರುವಾಯಿತು. ಪ್ರಥಮ ದಿನವೇ ತುಂಬಾ ಅದ್ಭುತವಾಗಿ ಮೂಡಿತ್ತು- ಕೊಹಿನೂರು ವಜ್ರದಂಥ ಬೆಲೆಬಾಳುವ ಸ್ಫೂರ್ತಿದಾಯಕ  ಮಾತುಗಳು. ಕ್ಯಾಂಪ್‌ ನಡೆಸುತ್ತಿದ್ದ ರೋಟರಿ  ತಂಡದವರು ಪ್ರತಿಯೊಂದನ್ನು ಅತ್ಯದ್ಭುತವಾಗಿ ನಿರ್ವಹಿಸುತ್ತಿದ್ದರು. ಆರು ದಿನಗಳಲ್ಲಿ ಪ್ರತಿಯೊಂದು ಚಟುವಟಿಕೆಗಳನ್ನು ಕೊಟ್ಟು ನಮ್ಮನ್ನು  ಬೌದ್ಧಿಕವಾಗಿ ಕ್ರಿಯಾಶೀಲರನ್ನಾಗಿ ಮಾಡಿಸುತ್ತಿದ್ದದ್ದು ಸುಳ್ಳಲ್ಲ .

ಹಾಗೆ ಕ್ಯಾಂಪ್‌ ಮುಗಿಯಲು ಕೊನೆಯ ಎರಡು ದಿನ‌ ಇತ್ತು. ಆವತ್ತು ಅವರು ಪ್ರತಿಯೊಂದು ತಂಡವನ್ನು ಕರೆದು ಚೀಟಿ ತೆಗೆದು ಆ ಚೀಟಿಯಲ್ಲಿದ್ದ ವಿಷಯದ ಮೇಲೆ ನಮಗೆ ಮೂರು ನಿಮಿಷದ ಕಿರುಚಿತ್ರ ಮಾಡಲು ಸೂಚಿಸಿದರು. ಅದಕ್ಕಾಗಿ ಒಂದು ದಿನ ಸಮಯ ಕೊಟ್ಟಿದ್ದರು. ಆ ದಿನ ನಮಗೆ ಸಿಕ್ಕಿದ ಟಾಪಿಕ್‌ "ಸ್ಕೂಲ್ ಫಾರ್‌ ಬೆಗ್ಗರ್ಸ್‌' ಎನ್ನುವುದಾಗಿತ್ತು. ಈ ಟಾಪಿಕ್‌ನಿಂದಾಗಿ ನಮಗೆ ಸ್ವಲ್ಪ ಚಂಚಲ ಮತ್ತು ಗೊಂದಲವಾಯಿತು. ನಾವು ಯಾವ ರೀತಿಯಲ್ಲಿ ಇದನ್ನು ತೋರಿಸಬೇಕು ಎಂದು ಕೇಳಲು ಹೋದಾಗ ಅವರು ಭಿಕ್ಷುಕರಿಗೆ ಸ್ಕೂಲ… ಅನ್ನುತ್ತಾ ಸ್ವಲ್ಪ ವಿವರಣೆ ಕೊಟ್ಟರು. ನಾನು ಓಕೆ ಅಂತಾ ಹೇಳಿ ಆ ಟಾಪಿಕ್‌ ಅನ್ನು ಪ್ರಸೆಂಟ್ ಮಾಡುವುದೆಂದು ನಿರ್ಧಾರವಾಯಿತು. ಆವತ್ತು ಎಲ್ಲರ ಐಡಿಯಾಗಳು ಸಮ್ಮಿಲನಗೊಂಡು  ಮರುದಿನ ಶೂಟಿಂಗ್‌ ಮಾಡುವುದೆಂದು ಪಕ್ಕಾ ಆಯ್ತು. ಆ ದಿನ ರಾತ್ರಿ ಸಡನ್ನಾಗಿ ಒಬ್ಬಳು ಹತ್ತೈದು ಮೆಸೇಜ… ಮಾಡುತ್ತಾ ವಾಟ್ಸಾಪ್‌ ಗ್ರೂಪ್‌ನಲ್ಲಿ "ನಾವು ಸ್ಕೂಲ… ಫಾರ್‌ ಬೆಗ್ಗರ್ಸ್‌ ಅಂತ ಕಿರುಚಿತ್ರ ತೋರಿಸಿದರೆ ತಪ್ಪು ಸಂದೇಶ ಹೋಗುತ್ತದೆ' ಎಂದು ಹೇಳಿದ್ದಳು. ಅದಕ್ಕೊಬ್ಬ "ಈಗ ನಾವು ಕೊಡೋ ಸಂದೇಶದಿಂದ ಸಮಾಜ ಏನಾದ್ರೂ ಬದಲಾಗುತ್ತಾ?' ಎಂದ.

ಕೊನೆಗೆ ವಾದ-ಪ್ರತಿವಾದಗಳ ನಂತರ ಎಲ್ಲರೂ ಒಂದು ನಿರ್ಧಾರಕ್ಕೆ ಬಂದುಬಿಟ್ಟೆವು. ಸರಿ ಏನ್ಮಾಡೋದು? ನಾಳೆ ನೋಡೋಣ ಅಂತಾ ಹೊರಟೆವು. ಮರುದಿನ ನಮಗೆ ಕೊಟ್ಟಿದ್ದ ಸಂಜೆಯ ಅರ್ಧಗಂಟೆಯಲ್ಲಿ ಕಿರುಚಿತ್ರದ ಶೂಟಿಂಗ್‌ ಮುಗಿಯಬೇಕಾಗಿತ್ತು. ಬೇರೆ ಎಲ್ಲಾ ತಂಡಗಳು ಶೂಟಿಂಗ್‌ ಮಾಡುತ್ತಿದ್ದರೆ ನಮ್ಮ ತಂಡ ಇನ್ನೂ ಕಥೆಯ ಆಯ್ಕೆಯಲ್ಲಿತ್ತು ಅನ್ನೋದೆ ತಮಾಷೆಯ ವಿಚಾರ. ನಮ್ಮ ತಂಡದ ಕೆಲವರು ದೂರದ ಊರಿನವರಾಗಿದ್ದರಿಂದ ಬೇಗ ಮಾಡಿ ಮುಗಿಸಬೇಕಾಗಿತ್ತು. ಕೊನೆಗೆ ನನ್ನ ತಲೆಯಲ್ಲಿ ಏನೇನೋ ಓಡಾಡಿ ಕೇವಲ ಇಪ್ಪತ್ತು ನಿಮಿಷದ ಸಣ್ಣ ಅವಧಿಯಲ್ಲಿ ತಂಡದ ಸದಸ್ಯರನ್ನು ಒಟ್ಟುಗೂಡಿಸಿ ಕಿರುಚಿತ್ರ ಶೂಟಿಂಗ್‌ ಮಾಡಿ ಮುಗಿಸಿಯಾಯ್ತು. ಇನ್ನಿರುವುದು ಎಡಿಟಿಂಗ್‌ ಕೆಲಸ. ಏನ್ಮಾಡೋದು? ನಂಗೆ ಮರುದಿನ ಪತ್ರಿಕೋದ್ಯಮ ಎಕ್ಸಾಮ… ಬೇರೆ. ವಿಡಿಯೋ ಎಡಿಟಿಂಗ್‌ ಮಾಡಿ ಸಮಯದ ಗಡಿಯೊಳಗಡೆ ಕೊಡಬೇಕಿತ್ತು. ರಾತ್ರಿ ನಮ್ಮ ತಂಡದ ವಿದ್ಯಾರ್ಥಿಯೊಬ್ಬನು ಎರಡು ಗಂಟೆ ಕೂತು ಎಡಿಟಿಂಗ್‌ ಮಾಡಿದ. ಆದರೆ ಸೇವ್‌ ಮಾಡದೇ ಮಲಗಿದ್ದರಿಂದ ಅಷ್ಟು ಹೊತ್ತಿನ ಪ್ರಯತ್ನ ವಿಫ‌ಲವಾಗಿತ್ತು. ಬೆಳಗ್ಗೆ ತಂಡದ ಎಲ್ಲರ ಮುಖವೂ ಮಂಕಾಗಿತ್ತು. ನಂಗೆ ಎಕ್ಸಾಮ… ಆದ್ದರಿಂದ ಏನ್ಮಾಡೋದು ಅಂತಾ ಗೊತ್ತಾಗದೆ "ನೀವೆಲ್ಲ ಏನಾದ್ರೂ ಮಾಡಿ' ಅಂತಾ ತಂಡದವರಿಗೆ ಹೇಳಿ ನಾನು ಎಕ್ಸಾಮ… ಬರೆಯೋಕೆ ಹೋದೆ. ಕೊನೆಗೆ  ನಮ್ಮ ತಂಡದ ಹುಡುಗಿಯೊಬ್ಬಳು ಭಾಷಣದ ಮಧ್ಯದಲ್ಲಿ ವಿಡಿಯೋ ಎಡಿಟಿಂಗ್‌ ಮಾಡಿ ಸಮಯದ ಗಡಿಯೊಳಗೆ  ತಲುಪಿಸಿದ್ದಾಯಿತು. ಗೂಗ್ಲಿಯ ಅಸಿಸ್ಟೆಂಟ್ ಡೈರೆಕ್ಟರ್‌ ಎಲ್ಲರ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಸಂತೋಷದ ವಿಚಾರವೆಂದರೆ, ನಮ್ಮ ಶಾರ್ಟ್‌ಫಿಲ್ಮ… ಎಲ್ಲರ ಮೆಚ್ಚುಗೆ ಒಳಪಟ್ಟಿತ್ತು. ಮನೆಗೆ ಹೋಗಿ ವಾಟ್ಸಾಪ್‌ ಸ್ಟೇಟಸ್‌ ಅಂತಾ  ಬಿಡಿಬಿಡಿಯಾಗಿ ಹಾಕಿದೆ. ಅದಕ್ಕೆ ತಕ್ಷಣ ಬಂದ ಪ್ರತಿಕ್ರಿಯೆಗಳು ಒಂದಕ್ಕೊಂದು ವಿಭಿನ್ನವಾಗಿತ್ತು. ಸ್ಟೇಟಸ್‌ ಅಳಿಸಿ ಯುಟ್ಯೂಬ್ ಖಾತೆಯಲ್ಲೇ ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಅಲ್ಲೂ ಒಂದಕ್ಕೊಂದು ಕಮೆಂಟ್ ಗಳು ಬಂದವು. ಕೆಲವು ಲೈಕ್‌, ಕಮೆಂಟ್ ಶೇರ್‌ ಮಾಡಿದ್ರೆ ಇವರೆಲ್ಲರಿಗಿಂತಲೂ ಈ ಕಿರುಚಿತ್ರ ನೋಡಿ ಒಬ್ಬ ಮಾಡಿದ ಕೆಲಸಕ್ಕೆ ಇಷ್ಟು ದೊಡ್ಡ ಕಥೆನೇ ಹೇಳಬೇಕಾಗಿ ಬಂತು.

ಹೌದು ಅದೇನಪ್ಪಾ ದೊಡ್ಡ ಕಥೆ ಅಂತಾ ಅಂದುಕೊಂಡಿರಾ... ನಮ್ಮ ಕಿರುಚಿತ್ರದ  ಮುಖ್ಯ ವಿಷಯ ಬೀದಿಬದಿಯ ಭಿಕ್ಷುಕರಿಗೆ ಶಿಕ್ಷಣ ಕೊಟ್ಟು  ಸಮಾಜದಲ್ಲಿ ಮುಂದೆ ಬರುವ ಪ್ರಯತ್ನ ಮಾಡುವುದಾಗಿತ್ತು. ಈ ಕಿರುಚಿತ್ರ ನೋಡಿದ ಗೆಳೆಯ ಸಿದ್ದಿಕ್‌ ಏನಾದ್ರೂ ಮಾಡ್ಬೇಕಾಗಿ ಅಂದುಕೊಂಡು ಅವನು ಬೀದಿ ಬದಿ ಕಂಡ ಶಿಕ್ಷಣವಂಚಿತ ಭಿಕ್ಷುಕ ಮಕ್ಕಳನ್ನು ಅದಕ್ಕೆ ಸಂಬಂಧ‌ಪಟ್ಟ ಅಧಿಕಾರಿಗಳ ಜೊತೆ ಮಾತಾಡಿ ಅವರಿಗೆ ಶಿಕ್ಷಣದ ವ್ಯವಸ್ಥೆಗೆ ಬೇಕಾದ ಎಲ್ಲವೂ ವ್ಯವಸ್ಥೆ ಮಾಡಲು ಸಾಧ್ಯವಾಯಿತು. ಒಟ್ಟು ಆರು ಮಕ್ಕಳಿಗೆ ಶಿಕ್ಷಣ ಸಿಕ್ಕಿತೆಂದಾಗ ಮತ್ತು ಇದಕ್ಕೆ ನಿಮ್ಮ ಕಿರುಚಿತ್ರವೇ ಕಾರಣವೆಂದಾಗ ನಾನು ಮಾತುಬಾರದ ಮೂಗನಂತಾಗಿದ್ದೆ. ಒಂದು ಚಿಕ್ಕ ಪ್ರಯತ್ನ ಎಷ್ಟು ದೊಡ್ಡ ಸಂದೇಶ ಸಮಾಜಕ್ಕೆ ಕೊಟ್ಟಿತು ಎನ್ನುವ ಸಾರ್ಥಕತೆಯ ಭಾವ ನಮ್ಮ ತಂಡದ್ದಾಯಿತು.

ವಿಶ್ವಾಸ್‌ ಅಡ್ಯಾರ್‌, ಪತ್ರಿಕೋದ್ಯಮ ವಿಭಾಗ ವಿವಿ ಕಾಲೇಜು, ಮಂಗಳೂರು

Trending videos

Back to Top