CONNECT WITH US  

ಶಿಕ್ಷಣ ಎಂಬುದು ಪರೀಕ್ಷೆ ಬರೆಯೋದಷ್ಟೇ ಅಲ್ಲ...

ಸಾಂದರ್ಭಿಕ ಚಿತ್ರ

ಶಿಕ್ಷಣ ನನಗೆ ಪರೀಕ್ಷೆ ಬರೆಯೋದನ್ನ ಬಿಟ್ಟು ಬೇರೇನನ್ನ ಕಲಿಸಿದೆ?- ಇಂತಹ ಒಂದು ವಿಚಿತ್ರ ಪ್ರಶ್ನೆ ನನ್ನಲ್ಲಿ ಹುಟ್ಟಿದ್ದು ಎಂಕಾಂ ಮೊದಲನೆ ವರ್ಷದ ಮೊದಲನೇ ಲೆಕ್ಕಶಾಸ್ತ್ರದ (ಎಕೌಂಟೆನ್ಸಿ) ತರಗತಿಯಲ್ಲಿ. ಬಹಳ ಸಿಂಪಲ್‌ ಆಗಿದ್ದ ಒಬ್ಬ ವ್ಯಕ್ತಿ ನಮ್ಮೆದುರು ಬಂದು ನಿಂತಾಗ ಅವರು ಒಬ್ಬ ಪ್ರೊಫೆಸರ್‌ ಅನ್ನೋದನ್ನ ನಂಬಲು ಕಷ್ಟವಾಗಿತ್ತು. ಆದರೆ, ನಂಬಲೇಬೇಕಾಗಿತ್ತು. ಅವರು ಬಂದ ಕೂಡಲೇ ಮೊದಲ ಕ್ಲಾಸ್‌ನಲ್ಲಿ ಏನು ಹೇಳಬೇಕೋ ಅವೆಲ್ಲವನ್ನು ಹೇಳಿದ್ದರು. ಆದರೆ, ಅದ್ಯಾವುದೂ ನನಗೆ ನೆನಪಿಲ್ಲ. ನನ್ನ ನೆನಪಿನಲ್ಲಿ ಉಳಿದಿರೋದು ಬಹುಶಃ ಎಂದೂ ಮರೆಯಲಾಗದ ಆ ಒಂದು ಮಾತು ಮಾತ್ರ.

"ನಿಮ್ಗೆ ಎಷ್ಟು ಮಾರ್ಕ್ಸ್ ಬಂದಿದೆ ಅನ್ನೋದು ನನಗೆ ಬೇಡ. ನಿಮ್ಗೆ ನಿಜವಾಗಿ ಎಷ್ಟು ಗೊತ್ತಿದೆ ಅನ್ನೋದನ್ನ ಹೇಳಿ'- ಈ ಮಾತಿಗೆ ಹೊರನೋಟಕ್ಕೆ ನಾನೂ ಎಲ್ಲರೊಡನೆ ನಕ್ಕಿದ್ದೆ. ಆದರೆ ಒಳಗೆ ಒಂದು ಸಣ್ಣ ಸಿಡಿಲು ಬಡಿದಂತಾಗಿತ್ತು. ಅದಕ್ಕೆ ಕಾರಣವೂ ಇತ್ತು. ಅಧ್ಯಾಪಕರು ಎಲ್ಲರ ಅಂಕ ಕೇಳಬಹುದು ಮತ್ತು ಜಾಸ್ತಿ ಅಂಕ ಪಡೆದವರ ಮೇಲೆ ಅವರಿಗೆೆ ಒಂದು ಒಳ್ಳೆ ಇಂಪ್ರಷನ್‌ ಬರಬಹುದು ಅಂತ ನಾನು ಅಂದುಕೊಂಡಿದ್ದೆ. ಆದರೆ ಅವರು ಕೇಳಿದ ಆ ಪ್ರಶ್ನೆ, ನನ್ನ ಅಂಕಗಳ ಮೇಲೆ ನನಗೇ ಅನುಮಾನ ಹುಟ್ಟುವಂತೆ ಮಾಡಿತ್ತು.

ನಾನು ನನಗೆಷ್ಟು ಗೊತ್ತಿದೆ ಅಂತ ಒಂದು ಸಾರಿ ಯೋಚಿಸಿದೆ. ಒಬ್ಬ ಎಂಕಾಂ ವಿದ್ಯಾರ್ಥಿಗೆ ಗೊತ್ತಿರಬೇಕಾದಷ್ಟು ಖಂಡಿತ ನನಗೆ ಗೊತ್ತಿರಲಿಲ್ಲ. ನಿಜಹೇಳಬೇಕಂದ್ರೆ ನನಗೆ ಏನೇನೂ ಗೊತ್ತಿರಲಿಲ್ಲ. ಹಾಗಾದರೆ, ನಾನು ಇಷ್ಟು ವರ್ಷ ಕಲಿತದ್ದೇನು? ಎಂಬ ದುಗುಡ ಆವತ್ತು ನನ್ನೊಳಗೆ ಹುಟ್ಟಿತ್ತು. ನನ್ನ ಅಂಕಗಳ ಬಗ್ಗೆ ನನಗಿದ್ದ ಹೆಮ್ಮೆ ಅಥವಾ ಅಹಂಕಾರ ಆವತ್ತು ಇಳಿದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಏನೊಂದೂ ಗೊತ್ತಿಲ್ಲದವನು ಕೂಡ ಒಳ್ಳೆಯ ಅಂಕಗಳನ್ನು ಗಳಿಸಬಹುದು ಅನ್ನೋ ಸತ್ಯ ತಡವಾಗಿಯಾದರೂ ಅರಿವಿಗೆ ಬಂದಿತ್ತು.

ಹಾಗಾದರೆ, ನಾನು ಕಲಿತದ್ದೇನು? ಹೌದು! ಪರೀಕ್ಷೆ ಬರೆದು ತೇರ್ಗಡೆಯಾಗೋದು ಒಂದನ್ನು ಬಿಟ್ಟು ಬೇರೇನನ್ನು ಕೂಡ ಕಲಿತಿಲ್ಲ. ಪರೀಕ್ಷೆ ಇದ್ದಾಗ ಬರಿ ಇಂಪಾರ್ಟೆಂಟ್‌ ಪ್ರಶ್ನೆಗಳನ್ನು ಬಾಯಿಪಾಠ ಮಾಡಿ, ಎಕ್ಸಾಮ್‌ ಹಾಲ್‌ನಲ್ಲಿ ನೆನಪಾದ ಉತ್ತರಗಳಿಗೆ ಸ್ವಲ್ಪ$ನನ್ನದೂ ಒಗ್ಗರಣೆ ಕೊಟ್ಟು, ಕೊನೆಗೆ ಬರೆದಿದ್ದನ್ನೇ ಬರೆದು ಪುಟ ತುಂಬಿಸಿದರೆ ಆ ಸೆಮಿಸ್ಟರ್‌ನಲ್ಲಿ ಕಲಿತದ್ದೆಲ್ಲವನ್ನು ಮರೆತು ಮುಂದಿನ ಸೆಮಿಷ್ಟರ್‌ ಬಗ್ಗೆ ಕನಸು ಕಾಣುತ್ತ ಕೂರೋಕೆ ಪರವಾನಗಿ ದೊರೆತಂತೆ !

ಈಗ ಅದೆಷ್ಟೋ ಸೆಮಿಸ್ಟರ್‌ಗಳನ್ನು ಅದೇ ರೀತಿ ಪಾಸ್‌ ಮಾಡಿ ಕೊನೆಗೆ ಎರಡೇ ಎರಡು ಸೆಮಿಸ್ಟರ್‌ಗಳು ಬಾಕಿ ಇದೆ ಎನ್ನುವಾಗ, ಅದು ಮುಗಿದ ಮೇಲೆ ನಾನು ಕೈಯಲ್ಲಿ 90 ಶೇ. ಇರುವ ಅಂಕಪಟ್ಟಿ ಹಿಡಿದುಕೊಂಡು ತಲೆಯಲ್ಲಿ ಬರೇ ಸೊನ್ನೆ ತುಂಬಿಕೊಂಡು ಈ ವಿದ್ಯಾರ್ಥಿಜೀವನದಿಂದ ಹೊರಬಂದು ಈ ಸ್ಪರ್ಧಾತ್ಮಕ ಜಗತ್ತಿನ ಜೊತೆ ಸೆಣಸಾಡಬೇಕು ಎನ್ನುವಾಗ ನಾನು ನಿಜಕ್ಕೂ ಕಲಿತದ್ದೇನು ಅನ್ನುವ ಪ್ರಶ್ನೆ ಪದೇ ಪದೇ ಕಾಡುತ್ತದೆ.

ಕೆಲವೊಮ್ಮೆ ಹಿಂದಿನ ಸೆಮಿಸ್ಟರ್‌ನಲ್ಲಿ ಕಲಿತದ್ದಕ್ಕೂ ಈ ಸೆಮಿಸ್ಟರ್‌ನಲ್ಲಿ  ಕಲಿಯುತ್ತಿರೋದಕ್ಕೂ ಸಂಬಂಧವೇ ಇರುವುದಿಲ್ಲ.ಇದ್ದರೂ ಅದು ನಮಗೆ ನೆನಪಿರುವುದಿಲ್ಲ. ಅದನ್ನು ಶಿಕ್ಷಕರೇ ನೆನಪಿಸಬೇಕು. ಶಿಕ್ಷಕರಿಗೆ ಕಲಿಸೋದಕ್ಕೆ ಬೇಕಾದಷ್ಟಿರುತ್ತದೆ. ಆದರೆ, ಅವೆಲ್ಲವನ್ನು ಕಲಿಸಲು ಸೆಮಿಸ್ಟರ್‌ ನೀಡುವ ಕಾಲಾವಕಾಶ ಏನಕ್ಕೂ ಸಾಲುವುದಿಲ್ಲ. ಕಲಿಸಿದರೂ ಕೆಲವೊಮ್ಮೆ ಕಲಿಯೋ ಮನಸ್ಸು ನಮಗಿರೋದಿಲ್ಲ. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಸೆಮಿಸ್ಟರ್‌ ಮುಗಿದು ಎಕ್ಸಾಮ್‌ ಬಂದಿರುತ್ತದೆ. ಅಲ್ಲಿ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಯಲ್ಲಿದ್ದ ಕೆಲವಾದರೂ ಪ್ರಶ್ನೆಗಳು ಪುನರಾವರ್ತನೆಯಾಗಿರುತ್ತವೆ. ಹಾಗಾಗಿ, ಪಾಸಾಗೋದು ಕಷ್ಟವೇನಲ್ಲ. ಇನ್ನು ನಾವು ಕಲಿಯೋದು ಏನನ್ನು? ಅದೇ ಓಬೀರಾಯನ ಕಾಲದ ಸಿಲೆಬಸ್‌. 

ಹಾಗಾದ್ರೆ, ಈ ಶಿಕ್ಷಣ ವ್ಯವಸ್ಥೆ ನನಗೆ ಏನನ್ನ ಕಲಿಸಿದೆ?
ಒಂದು ಸಿಲೆಬಸ್‌ ನಿಗದಿಮಾಡಿ, ನೋಟ್ಸ್‌ ಕೊಟ್ಟು, ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವನೀಯ ಇಂಪಾರ್ಟೆಂಟ್‌ ಪ್ರಶ್ನೆಗಳನ್ನು ಹೇಳಿ, ಅದೇ ಸಿಲೆಬಸ್‌ನೊಳಗೆ ಒಂದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ಕೊಟ್ಟರೆ, ಅದರಲ್ಲಿ ಕೆಲವು ಮೊದಲೇ ಹೇಳಿದ ಕೆಲ ಇಂಪಾರ್ಟೆಂಟ್‌ ಪ್ರಶ್ನೆಗಳಿದ್ದರೆ ಹಾಗೋಹೀಗೋ ಪಾಸ್‌ ಆಗುವ ಕಲೆಯನ್ನು ಚೆನ್ನಾಗಿ ಕಲಿಸಿಕೊಟ್ಟಿದೆ.

ಅಥಿಕ್‌ ಕುಮಾರ್‌, ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ

Trending videos

Back to Top