CONNECT WITH US  

ಏನೆಂದು ಹೆಸರಿಡಲಿ ಈ ಚಂದದ ಅನುಭವಕೆ !

ಸಾಂದರ್ಭಿಕ ಚಿತ್ರ

ಅಂದು ನಾನು ಮತ್ತು ನನ್ನ ಸ್ನೇಹಿತರೆಲ್ಲ ಸೇರಿ ಪ್ರವಾಸ ಹೊರಟಿದ್ದೆವು. ನಾವು ಭೇಟಿ ನೀಡುವ ಸ್ಥಳಕ್ಕೆ ಎಷ್ಟು ಹೊತ್ತಿಗೆ ತಲುಪುವೆವೊ ಎಂದು ನಮ್ಮ ಪಾದಗಳು ತವಕಿಸುತ್ತಿದ್ದವು. ಜತೆಗೆ, ನಮ್ಮ ಮನಸ್ಸೂ ಕುಣಿದಾಡಲು ಕ್ಷಣಗಳನ್ನು ಎಣಿಸುತ್ತಿತ್ತು. ಇದಕ್ಕೆ ಕಾರಣ ಎಂದರೆ, ನಾವು ಪ್ರವಾಸ ಹೋಗಲು ಆಯ್ಕೆಮಾಡಿಕೊಂಡ ಸ್ಥಳ. ಅದು ಮೌಂಟ್‌ ಎವರೆಸ್ಟ್‌ಗೂ ಕಮ್ಮಿ ಇಲ್ಲದ, ಸಹ್ಯಾದ್ರಿ ಮಲೆಗೂ ಸ್ಪರ್ಧೆ ನೀಡುವಂತಹ ತಾಣವಾಗಿತ್ತು!

ನಮ್ಮ ಕಾಲೇಜಿನಿಂದ ಸರಿಸುಮಾರು ಅರ್ಧ ಗಂಟೆಯಲ್ಲಿ ಸಿಗುವ ದಾರಿಯಲ್ಲಿ ನನ್ನ ಸ್ನೇಹಿತರ ಪೀಜಿ ಇತ್ತು. ನಾನು ಮತ್ತು ನನ್ನ ಪೀಜಿಯಲ್ಲಿರುವ ಸ್ನೇಹಿತರೆಲ್ಲರೂ ನನ್ನೊಂದಿಗಿದ್ದರು. ಅವರಲ್ಲಿ ಯಾವಾಗಲೂ ನಗುವನ್ನು ತನ್ನ ಅಧರದಲ್ಲಿ ಅವಿತಿಡುತ್ತಿದ್ದವಳು ಎಂದರೆ ರೀಮಾ, ಕಲಾಕಾರನ ಕುಂಚವನ್ನು ತನ್ನ ಕೈಯಲ್ಲಿ ಹಿಡಿದಿರುವ ರಶ್ಮಿತಾ, ಜೊತೆಗೆ ಮುದ್ದಾದ ಮಾತುಗಳಿಂದ ಭಾರೀ ಫೇಮಸ್‌ ಆಗಿರೋ ರಜತಾ ಇವರೆಲ್ಲರ ಸಾಥ್‌ ನನಗೆ ತುಂಬಾ ಖುಷಿ ಕೊಡುತ್ತಿತ್ತು.

ಅಯ್ಯೋ... ಇಷ್ಟೆಲ್ಲ ಪೀಠಿಕೆ ಕೊಟ್ಟ ನಾನು ನಾವು ಹೋಗೋ ಜಾಗದ ಹೆಸರು ಹೇಳುವುದನ್ನೇ ಮರೆತಿದ್ದೆ. ಹೌದು, ನಾವು ಹೊರಟಿದ್ದದ್ದು ಅಂತಿಂಥ ಸ್ಥಳವಲ್ಲ. ಅದು "ಕೆನರಾ ಪಾಯಿಂಟ್‌' ಎಂಬ ಸುಂದರ ಪ್ರಕೃತಿವೆತ್ತ ಹಸಿರು ಹಿಮಾಲಯ! ನಾವು ಅಲ್ಲಿಗೆ ಹೋದ ಸಮಯದಲ್ಲಿ ಈ ಕೆನರಾ ಪಾಯಿಂಟ್‌ ಎಂಬ ಪುಟ್ಟ ಪರ್ವತವು ಹಸಿರು ಸೀರೆ ಉಟ್ಟು ವೃಕ್ಷಮಾಲೆಯನ್ನು ಧರಿಸಿಕೊಂಡು ಸಿಂಗಾರಗೊಂಡಿದ್ದಳು. ಅಲ್ಲದೆ ಮೇಘರಾಜನ ಪ್ರೇಮನಿವೇದನೆಯೂ ಅದೇ ವೇಳೆಗೆ ಭೂಮಿಯ ಬಳಿ ನಡೆಯುತ್ತಿತ್ತು!

ನಾವು ಅಲ್ಲಿಗೆ ಹೋದ ಮೊತ್ತ ಮೊದಲಿಗೆ, ಹೋದ ನೆನಪಿಗೋಸ್ಕರ ಫೋಟೋ ಶೂಟ್‌ ಪ್ರಾರಂಭಿಸಿದೆವು. ಫೋಟೋ ಶೂಟ್‌ನ ಆರಂಭವಾದದ್ದೇ ನಾನು, ರೀಮಾ ಮತ್ತು ರಜತಾಳಿಂದ- ಆಕಾಶಕ್ಕೆ ಜಿಗಿಯುವ ಮೂಲಕ. ರಶ್ಮಿ ಇದನ್ನು ಸೆರೆಹಿಡಿದಳು. ನಂತರ ಅವಳ ಸರದಿ. ಆ ಹಸಿರಿನ ನಡುವೆ ಆಕೆ ಒಬ್ಬೊಬ್ಬರನ್ನೂ ನಿಲ್ಲಿಸಿ ಸೆಲ್ಫಿಗೆ ಫೋಸ್‌ ನೀಡಿದಳು.

ಅಷ್ಟರಲ್ಲಿ ಮಳೆರಾಯನ ಆಗಮನವಾಯಿತು. ಮಳೆರಾಯ ನಮ್ಮನ್ನು ಮುತ್ತಿಕ್ಕಲು ನಾವು ಕೊಂಡುಹೋಗಿದ್ದ ಛತ್ರಿ ಬಿಡಿಸಿದೆವು. ಅಲ್ಲೂ ಒಂದು ಚಿತ್ರಪಟವೇರ್ಪಟ್ಟಿತು. ಛತ್ರಿಯೊಂದಿಗೆ ಹಲವಾರು ಫೋಸ್‌ಗಳನ್ನು ನೀಡಲು ಶುರುಹಚ್ಚಿದೆವು. ಸ್ನೇಹಿತೆ ರಶ್ಮಿ ಮತ್ತು ರೀಮಾ ನೃತ್ಯ ಮಾಡಿದರು. ನನ್ನದೋ ಆಸ್ಕರ್‌ ಅವಾರ್ಡ್‌ ವಿಜೇತ ಫೋಟೋಗ್ರಾಫ‌ರ್‌ ಭಂಗಿಗಳು. ಆದರೆ, ಅದರಿಂದ ಬಂದ ಫೋಟೋಗಳ ಬಗ್ಗೆ ಸಮಾಧಾನವಾಗದೆ, ಕೊನೆಗೆ ನಿಲ್ಲುವ ಭಂಗಿಗಳ ಬಗ್ಗೆ ಅನುಮಾನ ಬಂದು ಗೂಗಲ್‌ನಲ್ಲಿ ಸರ್ಚ್‌ ಮಾಡಿದೆವು. ಅದರಲ್ಲಿ ಹಲವಾರು ಭಂಗಿಗಳು ದೊರಕಿದವು. ಮತ್ತೆ ಕೇಳಬೇಕೆ? ನಮ್ಮ ಚೇಷ್ಟೆಗೆ ಮಿತಿಯೇ ಇರಲಿಲ್ಲ. ಮುಂದೆ ಮುಂದೆ ಸಾಗಿದೆವು. ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡೆವು. ಇನ್ನೂ ಮುಂದೆ ಸಾಗಿದರೆ ಹಿಂದೆ ಬರಲು ಧೈರ್ಯ ಸಾಲದು ಎಂದುಕೊಂಡು ಅಲ್ಲೇ ಫೋಟೋಗಳನ್ನು ಕ್ಲಿಕ್ಕಿಸಿದೆವು. ರಜತಾ ಮತ್ತು ರೀಮಾ ಮುಂದೆ ಸಾಗಲಾಗದೆ ನಡುಗಲು ಶುರುಮಾಡಿದರು. ನಾನು ರಶ್ಮಿಯ ಕೈಹಿಡಿದೆ. ಅವಳು ನನ್ನ ಕೈಹಿಡಿದು ನಡೆಸುವಾಗ ನನ್ನ  ಮನಸ್ಸಿನಲ್ಲಿ  ಮುದ್ದು ಕಂದಮ್ಮನನ್ನು ಅಮ್ಮ ಬೆಚ್ಚಗಿನ ಭರವಸೆ ನೀಡಿ ನಡೆಯಲು ಕಲಿಸುವ ಭಾವನೆ ಮೂಡಿತು.

 ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಸಾಗಿದ ನಾವು ಬರೀ ಸಂತೋಷದ ಸಮಯವನ್ನು ಹೊತ್ತುಕೊಂಡು ಮನೆ ತಲುಪಿದೆವು. ನಂತರ ನಮ್ಮಲ್ಲಿ ನಾವು ತೆಗೆದ ಫೋಟೋಗಳ ವಿನಿಯಮ ಆರಂಭವಾಯಿತು. ಫೊಟೋಗಳನ್ನು ಕಂಡು ಆದ ಆನಂದ ಮತ್ತು ಪುಳಕ ಮಾತ್ರ ಹೇಳಲಾಗದು. ಒಟ್ಟಿನಲ್ಲಿ ಹೇಳಬೇಕೆಂದರೆ, ಇದಕ್ಕೆಲ್ಲ ಒಂದು ಹೊಸರಾಗ ಮೂಡಿತು ಎನ್ನಬಹುದು. ಆ ಹೊಸರಾಗವೇ  "ಏನೆಂದು ಹೆಸರಿಡಲಿ ಈ ಚಂದದ ಅನುಭವಕೆ'

ಯಶಸ್ವಿನಿ ಶಂಕರ್‌
 ಬಿಇ ಸೆಮಿಸ್ಟರ್‌ ಕೆನರಾ ಇಂಜಿನಿಯರಿಂಗ್‌ ಕಾಲೇಜು, ಬೆಂಜನಪದವು


Trending videos

Back to Top