CONNECT WITH US  

ಅನಾಮಿಕ ಹೆಣ್ಣಿನ ಸತ್ಯಕತೆ

ಆಕೆ ಎಳವೆಯಿಂದಲೂ ಸಮಾಜದ ಮಾತುಗಳಿಗೆ ತುತ್ತಾದಳು. ಸಮಾಜ ಇರಲಿ, ಮನೆಯಲ್ಲಿ ತನ್ನ ಹೆತ್ತವರ ಮುದ್ದಿನ ಮಗಳಾಗಿದ್ದರೂ ಅಣ್ಣನಿಗೆ ಮಾತ್ರ ಆಕೆ ಶುದ್ಧ ವೈರಿಯಂತೆ. ತಂಗಿಯ ಮುಖ ಕಂಡರೆ ಅಣ್ಣನಿಗೆ ಆಗುತ್ತಿರಲಿಲ್ಲ. ಆಕೆಯ ತಂದೆ-ತಾಯಿ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದರು. ಅವರುಗಳ ಮಧ್ಯೆ ಹೆಣ್ಣು -ಗಂಡೆಂಬ ಭೇದಭಾವದ ಸಂಬಂಧ ಇರಲೇ ಇಲ್ಲ. ಮಗಳ ಖುಷಿಗಾಗಿ ಸ್ಪಂದಿಸುತ್ತಿದ್ದರು. ಆದರೆ, ಅಣ್ಣ ಮನೆಗೆ ಬಂದ ನಂತರ ಆಕೆಗೆ ನರಕ ಸದೃಶ ಬದುಕು. ಆತ ಆಕೆಗೆ ತುಂಬಾ ಕಟ್ಟುನಿಟ್ಟಾದ ನಿಯಮ ವಿಧಿಸುತ್ತಿದ್ದ. ತನ್ನ ಕುಟುಂಬದ ಸದಸ್ಯರೊಡನೆಯೂ ಖುಷಿಯಾಗಿ ನಗುತ್ತ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಆಕೆಯನ್ನು ದಿಟ್ಟಿಸಿ ನೋಡುತ್ತ ಭಯದಲ್ಲಿ ಮುಳುಗಿಸಿಬಿಟ್ಟಿದ್ದ. ಇನ್ನು ಬೇರೆ ಹುಡುಗರ ಬಳಿ ಮಾತನಾಡುವುದು ಬಿಡಿ, ಹುಡುಗಿಯರ ಜೊತೆಯೂ  ಆಕೆ ಓಡಾಡುವಂತಿರಲಿಲ್ಲ. ತನಗಿಷ್ಟ ಬಂದ ಬಟ್ಟೆ ತೊಡುವಂತಿಲ್ಲ, ಒಟ್ಟಾರೆ ಖುಷಿ ಎಂಬುದರ ಅರಿವೇ ಇಲ್ಲದೆ, ಪಂಜರದೊಳಗೆ ಬಂಧಿಸಲ್ಪಟ್ಟ ಮುಗ್ಧ ಗಿಣಿ ಆಕೆ. ರೆಕ್ಕೆ ಬಿಚ್ಚಿ ಹಾರಲು ಮನಸಿದ್ದರೂ ತುಂಡರಿಸಿದಂತಾಗಿತ್ತು, ಸಂತಸದ ಸ್ವತಂತ್ರ ಗೂಡು ಸೇರಲು ತನ್ನ ರೆಕ್ಕೆಗೆ ತ್ರಾಣವಿಲ್ಲ ಎಂಬಂತಾಗಿತ್ತು ಆಕೆಯ ಪರಿಸ್ಥಿತಿ. 

ಆಕೆಗೆ ಶಾಲೆ-ಕಾಲೇಜಿನಲ್ಲಿ ತನ್ನ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶ ಇತ್ತು ಎಂಬುದೇ ಒಂದು ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣವಾದ ಒಂದಂಶ. ಆಕೆ ಬಹುಮುಖ ಪ್ರತಿಭೆಯವಳು. ಹಲವಾರು ಕಡೆ ಗುರುತಿಸಿಕೊಂಡಿದ್ದಳು. ಸ್ಪರ್ಧೆ ಎದುರಿಸಲು ಸಮರ್ಥಳಾಗಿದ್ದ ಆಕೆ ಅಣ್ಣನನ್ನು ಎದುರಿಸಲಾಗದೆ ಆತನನ್ನು ಕಂಡಾಗಲೆಲ್ಲ ಭಯಭೀತಳಾಗುತ್ತಿದ್ದಳು. ಹೀಗೆಯೇ ಆಕೆಯ ಶಿಕ್ಷಣ ಮುಂದುವರೆಯುತ್ತ ಆಕೆ ಬೆಳೆದಂತೆ ಗೆಳೆಯ - ಗೆಳತಿಯರೊಡನೆ ಒಡನಾಡಿಯಾದಳು. ಸ್ನೇಹ ಬಯಸಿದಳು. ನಿಜವಾದ ಸ್ನೇಹದ ಅರ್ಥವನ್ನು ಅರಿತಳು. ಹುಡುಗ-ಹುಡುಗಿಯರೆಂಬ ಯಾವುದೇ ತಾರತಮ್ಯವಿಲ್ಲದೆ ಎಲ್ಲರೊಂದಿಗೆ ಖುಷಿಯಾಗಿ ಬೆರೆಯುತ್ತಿದ್ದಳು. ಆಕೆಯ ಆ ಖುಷಿಗೂ ಬೇಲಿ ಮೂಡಿತು. ಬೇರೆಯವರ ಮಾತುಗಳನ್ನು ಕೇಳಿ ಅಣ್ಣ ಕೂಡಾ ಆಕೆಗೆ ಇಲ್ಲ-ಸಲ್ಲದ ಮಾತುಗಳನ್ನಾಡಿದ. ಆಕೆಯ ಗೆಳೆತನಕ್ಕೆ "ಪ್ರೀತಿ'ಯ ಪಟ್ಟವನ್ನು ಕಟ್ಟಿ ಬಿಟ್ಟ. ಪ್ರೀತಿ ಮಾಡುವುದು ತಪ್ಪಂತೂ ಖಂಡಿತ ಅಲ್ಲ. ಆದರೆ ಅಣ್ಣನ ಬಾಯಿಗೆ, ಸಮಾಜದ ಬಾಯಿಗೆ ಪ್ರೀತಿ ಎಂಬುದು ಅವಮಾನ ಎಂಬ ಭಾವ. 

ಸಮಾಜ "ಇಲಿ ಹೋದರೆ ಹುಲಿ ಹೋಯಿತು'  ಎಂಬ ಮಾತುಗಳನ್ನಾಡುತ್ತದೆ. ಆ ಮಾತುಗಳನ್ನೇ ಕೇಳುವ ಶತಮೂರ್ಖರು ಇಂದಿಗೂ ಮುಂದುವರೆದ ದೇಶದಲ್ಲಿ ಅಲ್ಲಲ್ಲಿ ಕೆಲವೊಂದೆಡೆ ಕಂಡುಬರುತ್ತಿ¨ªಾರೆ ಎಂದರೆ ನಿಜಕ್ಕೂ ಕಣ್ಣಾಲಿಗಳು ತೇವವಾಗುತ್ತವೆ. ಹೆಣ್ಣು ಒಬ್ಬನೊಡನೆ ನಕ್ಕರೂ ಅದು ಮರುದಿನ ವಿಶೇಷ ಸುದ್ದಿ. ಹೆಣ್ಣೊಬ್ಬಳು ಸ್ನೇಹಿತನೊಡನೆ ಮಾತನಾಡಿದರೆ ಅದು ಸಮಾಜದ ದೃಷ್ಟಿಯಲ್ಲಿ ಪ್ರೀತಿ-ಪ್ರೇಮ ಎಂದು ಬಿಂಬಿತವಾಗಿ ಅನುಮಾನದ ಸುಳಿಯಲ್ಲಿ ಸಿಲುಕಿ ನರಳಾಡಿ ನಲುಗುವ ಸ್ಥಿತಿ ಎದುರಾಗುತ್ತದೆ. ಹೆಣ್ಣು-ಗಂಡು ಜೊತೆಯಾಗಿ ಹೋದರೆ ಅವರು ಗೆಳೆಯರೋ ಅಥವಾ ಸಂಬಂಧಿಕರೋ ಎಂದು ಸ್ವಲ್ಪವೂ ಯೋಚಿಸದೆ ಆತುರಪಟ್ಟು "ಪ್ರೇಮಿಗಳು' ಎಂದು ಬಹುತೇಕ ಪಟ್ಟಕಟ್ಟುವವರೇ ಹೆಚ್ಚು . ಊರಿನ ತುಂಬ ಹುಡುಗಿಯ ವ್ಯಕ್ತಿತ್ವವನ್ನು ಬಯಲು ಮಾಡಿ ಡಂಗುರ ಸಾರುವವರೇ ಹೆಚ್ಚು. ಆದರೆ, ಎಲ್ಲಿಯೂ ಗಂಡಿನ ಉಲ್ಲೇಖವಿಲ್ಲ.ಎಲ್ಲ ತಪ್ಪುಗಳ ಹೊರೆಯನ್ನು ಹೊತ್ತುಕೊಳ್ಳುವವಳು ಹೆಣ್ಣು. ತನ್ನ ಕ್ಷಮಾಗುಣ, ಪ್ರೀತಿ-ಮಮತೆಯ ಗುಣ ಕ್ಷಣ ಕ್ಷಣಕ್ಕೂ ಮಾರಕವಾಗಿ ಪರಿಣಮಿಸುತ್ತಿರುವುದು ಕೂಡಾ ಹೆಣ್ಣಿನ ಪಾಲಿಗೆ. 

ಗಂಡು ಏನು ಮಾಡಿದರೂ ಸರಿ, ಹೇಗಿದ್ದರೂ ಸರಿ. ಆತ ಅದೆಷ್ಟು ನಡುರಾತ್ರಿಯಲ್ಲಿ ಬಂದರೂ ಆತನಿಗೆ ಹೇಳುವವರಿಲ್ಲ. ಹೇಳಿದರೂ ಕೇಳುವ ತಾಳ್ಮೆ ಆತನಲಿಲ್ಲ. ಆದರೆ, ಎಲ್ಲ ಮಾತುಗಳನ್ನು ಹೆಣ್ಣು ಅದೆಷ್ಟೇ ಪಾಲಿಸಿದರೂ ಆಕೆಯ ಪಾಲಿಗೆ ಕಷ್ಟ ಅಂತೂ ತಪ್ಪಿದ್ದಲ್ಲ. ಈಗಲೂ ಹಳ್ಳಿಗಳಲ್ಲಿ ಹೆಣ್ಣನ್ನು ಸಂಪ್ರದಾಯ-ಆಚಾರಗಳ ನಡುವೆ ಬಂಧಿಸಿಟ್ಟಿರುವ ಸ್ಥಿತಿಗಳು ಗಮನಕ್ಕೆ ಬಂದಿವೆ. ಒಂದು ವೇಳೆ ಹೆಣ್ಣೇನಾದರೂ ನಡುರಾತ್ರಿ ಅಥವಾ ಸಂಜೆ ಸುಮಾರು ಎಂಟು ಗಂಟೆಯ ಸುಮಾರಿಗೆ ನಡೆದರೆ ಏನಾಗಬಹುದು? ಊಹಿಸಿ. 

ಪ್ರಜ್ಞಾ ಬಿ.
ದ್ವಿತೀಯ  ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಮ್‌ಸಿ, ಉಜಿರೆ 


Trending videos

Back to Top