CONNECT WITH US  

ಎನ್‌ಎಸ್‌ಎಸ್‌ ಎಂಬ ಸಾಂಸ್ಕೃತಿಕ ಪಠ್ಯ

ನಾವು  ಕಾಲೇಜಿಗೆ ಹೋಗುತ್ತಿದಾಗ ಎನ್‌ಎಸ್‌ಎಸ್‌, ಎನ್‌ಸಿಸಿ ಯಾವುದಕ್ಕೂ ಸೇರುತ್ತಿರಲಿಲ್ಲ. ಒಂದಷ್ಟು ಹಾಡುವುದು, ಓದು -ಬರಹ ಬಿಟ್ಟರೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಅಷ್ಟೇನೂ ಇರಲಿಲ್ಲ. ಹೆಣ್ಣುಮಕ್ಕಳು ಕತ್ತಲಾಗುವ ಮೊದಲು ಮನೆ ಸೇರಬೇಕು ಎನ್ನುವುದೇ ಆದ್ಯತೆಯಾಗಿತ್ತು. ಹೀಗಾಗಿ, ರಾಷ್ಟ್ರೀಯ ಸ್ವಯಂಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ.  

ಇತ್ತೀಚೆಗೆ ಮಂಗಳೂರಿನ ರಥಬೀದಿ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಮಂಗಳೂರಿನ ಕೊಣಾಜೆ ಬಳಿಯ ಹತ್ತು ಎಕರೆ ಹಡಿಲು ಭೂಮಿಯನ್ನು  ಕೃಷಿಕರಿಂದ ಪಡೆದು ಅದನ್ನು ಅನುಭವಸ್ಥರ ಸಹಕಾರದೊಂದಿಗೆ ಹದಗೊಳಿಸಿ, ನೇಜಿ ನೆಟ್ಟು, ಮಧ್ಯಾಹ್ನದ ಬಿಸಿಯೂಟಕ್ಕೆ  ಬೇಕಾಗುವಷ್ಟು  ಅಕ್ಕಿಯನ್ನು ತಾವೇ ಬೆಳೆಯುವ ಹುಮ್ಮಸ್ಸು. ಈ ರೀತಿಯ ಕಮ್ಯುನಿಟಿ ಕೆಲಸಗಳಲ್ಲಿ  ಭಾಗವಹಿಸುವ ವಿದ್ಯಾರ್ಥಿಗಳಲ್ಲಿನ ಲವಲವಿಕೆ, ತಾವೂ ಏನಾದರೂ ಸಾಧಿಸಬಲ್ಲೆವು ಎಂಬ ಕನಸು, ಒಗ್ಗಟ್ಟಿನಿಂದ ಜತೆಯಾಗಿ ಸಮಸ್ಯೆಗಳನ್ನು ನಿಭಾಯಿಸುತ್ತ, ಸಣ್ಣಪುಟ್ಟ ಕಲಹಗಳನ್ನು ತಾವೇ ಬಗೆಹರಿಸಿಕೊಳ್ಳುತ್ತ ಹೋಗುವ ಪರಿ ನಿಜಕ್ಕೂ ಸೊಗಸು. 

ಈಗ ಎಲ್ಲಾ ಪದವಿ ಕಾಲೇಜುಗಳಲ್ಲಿಯೂ ಪಠ್ಯೇತರ  ಚಟುವಟಿಕೆಗಳು ಕಡ್ಡಾಯವಾಗಿದ್ದು ಅವುಗಳಿಗೆ ಅಂಕವೂ ಇರುವ ಕಾರಣ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸುತ್ತಿರುತ್ತಾರೆ. ಎನ್‌ಎಸ್‌ ಎಸ್‌ ದೃಢವಾಗಿ ಕಲಿಸುವುದು "ಸೇವೆ'ಯ ಮಹತ್ವವನ್ನು. ಮೈ ಬಗ್ಗಿಸಿ ಮಾಡುವ ಯಾವ ಕೆಲಸವೂ  ಕೀಳಲ್ಲ ಎಂಬ ತತ್ವವನ್ನು; ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕುವುದರಲ್ಲಿನ, ಸಮೂಹದ ಕಷ್ಟನಷ್ಟಗಳಲ್ಲಿ ಭಾಗವಹಿಸುವಿಕೆಯಲ್ಲಿನ ಆನಂದವನ್ನು. ಸಾಧಾರಣವಾಗಿ ಎನ್‌ಎಸ್‌ ಎಸ್‌ನ ಶಿಬಿರಗಳನ್ನು ಕುಗ್ರಾಮಗಳಲ್ಲೋ ಪ್ರಾಥಮಿಕ ಆವಶ್ಯಕತೆಗಳು ಕಡಿಮೆ ಇರುವ  ಕಡೆಗಳಲ್ಲೋ ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ "ಕಷ್ಟ'ದ ಅನುಭವವಾಗುತ್ತದೆ. 

ಇನ್ನು ತುಮಕೂರು ಬಳಿ "ಕುರಿಹಟ್ಟಿ' ಎನ್ನುವ ಕಡೆ ಎನ್‌ಎಸ್‌ಎಸ್‌ನ  ಶಿಬಿರವಂತೂ ಮರೆಯಲಾರದ ಅನುಭವ. ಈಗಲೂ ಅಲ್ಲಿನ ಅನೇಕ ಮನೆಗಳಲ್ಲಿ ಶೌಚಾಲಯವಿಲ್ಲವೆಂದು ವಿದ್ಯಾರ್ಥಿಗಳು ಸರ್ವೆಯಿಂದ ಕಂಡುಕೊಂಡರು. ನಾಟಿ ವೈದ್ಯ, ಆಕಾಶ ವೀಕ್ಷಣೆ, ಸುಗ್ಗಿ ಹಾಡು, ಕುಣಿತ ಎಂದೆಲ್ಲ  ಹಳ್ಳಿಯ ಮಕ್ಕಳ ಲೀಡರ್‌ಶಿಪ್‌ ಕ್ವಾಲಿಟಿಗಳು, ಅವರಲ್ಲಿನ ಅಪರಿಮಿತ ಪ್ರತಿಭೆ ಇವೆಲ್ಲ ಬೆಳಕಿಗೆ ಬಂದವು.

1969ರಲ್ಲಿ  ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ  (ಮಹಾತ್ಮಾ ಗಾಂಧಿಯವರ ಜನ್ಮ ಶತಾಬ್ದಿಯಂದು) ಇದೀಗ ದೇಶದ ಎಲ್ಲಾ ಪದವಿ ಕಾಲೇಜುಗಳಲ್ಲಿ ಇದೆ ಹಾಗೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿ¨ªಾರೆ ಕೂಡ. ಯಾವುದೇ ಸಮಾರಂಭ ಇರಲಿ, ಕಾರ್ಯಕ್ರಮ ಇರಲಿ, ಹೂ ಮಾಲೆಗಳನ್ನು ಜೋಡಿಸುವುದರಿಂದ ಹಿಡಿದು  ಬೆಂಚು-ಕುರ್ಚಿಗಳನ್ನು ತೆಗೆದಿಡುವವರೆಗೆ "ಸ್ವಯಂ ಸೇವೆ'ಯ ಉತ್ಸಾಹ. 

ಸೃಷ್ಟಿ-ಸ್ಥಿತಿ-ಲಯವನ್ನು ಪ್ರತಿನಿಧಿಸುವ ಚಕ್ರ, ಎನ್‌ಎಸ್‌ಎಸ್‌ನ ಚಿಹ್ನೆ.  ಜನರ ಜೀವನ ಶೈಲಿಯ ಸುಧಾರಣೆ ಎನ್‌ಎಸ್‌ಎಸ್‌ನ ಮೂಲೋದ್ದೇಶ. ಶಾಲೆಗಳ ಅವರಣಗಳನ್ನು, ಗ್ರಾಮಗಳನ್ನು ಸ್ವತ್ಛಗೊಳಿಸುವುದು,  ಆರೋಗ್ಯ ತಪಾಸಣೆ, ಗಿಡ ನೆಡುವುದು, ಸಾಂಸ್ಕೃತಿಕ  ಕಾರ್ಯಕ್ರಮಗಳು, ಉಪನ್ಯಾಸಗಳು- ಎನ್‌ಎನ್‌ಎಸ್‌ನ ಅವಿಭಾಜ್ಯ ಅಂಗಗಳೇ ಆಗಿವೆ. ಇನ್ನು ಸರ್ಟಿಫಿಕೇಟ್‌ ಸಿಗುವುದು ಹೌದಾದರೂ, ಇದಕ್ಕೆ ಮೀರಿದ ಲವಲವಿಕೆ, ಚೈತನ್ಯವನ್ನು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಹೌದು. ಗುಜರಾತ್‌ ಭೂಕಂಪದಂತಹ ಘಟನೆಯಿರಲಿ, ಸುನಾಮಿಯ ಸಂದರ್ಭ ಇರಲಿ ಎನ್‌ಎಸ್‌ಎಸ್‌ನ  ಸ್ವಯಂಸೇವಕರ ಪಾತ್ರ ಮಹತ್ತರವಾಗಿಯೇ  ಇತ್ತು.  

ರಕ್ತದಾನ ಶಿಬಿರಗಳು, ಕೆರೆಗಳ ಹೂಳೆತ್ತುವಿಕೆ, ಪ್ರಾಜೆಕ್ಟ್ಗಳ ಮುಖಾಂತರ ಮಾರಕ ರೋಗಗಳ ಬಗ್ಗೆ ತಿಳುವಳಿಕೆ ಕೊಡುವುದು, ಕೆರಿಯರ್‌ ಗೈಡೆನ್ಸ್‌- ಹೀಗೆ ಎನ್‌ಎಸ್‌ಎಸ್‌ನ ಸಾಧ್ಯತೆಗಳು ಅಪಾರ. ಇನ್ನು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೂ ಎನ್‌ಎಸ್‌ಎಸ್‌ ಅವಕಾಶ ಕೊಡುವುದರಿಂದ (ಭಾಷಣ, ಮಿಮಿಕ್ರಿ, ನೃತ್ಯ, ಚಿತ್ರಕಲೆ ಹೀಗೆ) ಅವರಿಗೆ ತಮ್ಮ ಮೇಲೆ ವಿಶ್ವಾಸ ವೃದ್ಧಿಸಿ ಅವರ ಕಲಿಕೆಗೂ ಸಹಾಯವಾಗುತ್ತದೆ.  

ಫಿಲ್ಮ್ ಗಳು, ವಸ್ತು ಪ್ರದರ್ಶನಗಳು, ಬೀದಿ ನಾಟಕಗಳು, ಸ್ಲೋಗನ್‌, ರಂಗೋಲಿ, ಪೋಸ್ಟರ್‌ಗಳು- ಹೀಗೆ ಅದು ವಿದ್ಯಾರ್ಥಿಗಳನ್ನು ಸದಾ ಚುರುಕಾಗಿ ಇರಿಸುತ್ತದೆ, ಇನ್ನು  ಸಾಹಿತ್ಯ ಸಮ್ಮೇಳನನವಿರಲಿ, ಇನ್ನಿತರ  ದೊಡ್ಡ ಸಮಾರಂಭಗಳಿರಲಿ, ಎನ್‌ಎಸ್‌ಎಸ್‌ ಅದರಂತೆಯೇ ಇರುವ ಯುವ ಸಂಘಟನೆಗಳ ಪಾತ್ರ ಅಪಾರ. ರಸ್ತೆ ಸುರಕ್ಷೆ, ಮಾದಕ ದ್ರವ್ಯಗಳ ಬಗ್ಗೆ, ಕುಡಿತದಂತಹ ದುಶ್ಚಟಗಳ ಬಗ್ಗೆ , ಹದಿಹರೆಯದ ಸಮಸ್ಯೆಗಳು... ಇನ್ನೂ ಹತ್ತು ಹಲವು ಸಮಸ್ಯೆಗಳ ಬಗ್ಗೆ , ಕಡು ನೀಲಿ ಬಣ್ಣದ, ಬಿಳಿ ಚಕ್ರವಿರುವ ಎನ್‌ಎಸ್‌ಎಸ್‌ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನವಿದ್ದಲ್ಲಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದನ್ನು ಗಮನಿಸುತ್ತಲೇ ಇರುತ್ತೇವೆ. 

ಇನ್ನು ಎಳೆ ಹರೆಯದ ಮಕ್ಕಳು ಪ್ರಬುದ್ಧರಾದ ಹಳ್ಳಿಗರು, ಊರಿನ ಮುಖ್ಯಸ್ಥರು, ಸಂಘಟಕರು ಇವರೊಡನೆ ಒಡನಾಡುವುದರಿಂದ ಅವರ "ಸೋಶಿಯಲ್‌ ಸ್ಕಿಲ್ಸ್‌'  ಅಭಿವೃದ್ಧಿ ಹೊಂದಿ ಅವರು  ಸಮಾಜಮುಖೀ ಚಿಂತನೆ ಹೊಂದಿದ ಪ್ರಬುದ್ಧ ವ್ಯಕ್ತಿತ್ವದ, ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳುಳ್ಳ ಸತøಜೆಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ,  ಅದೆಷ್ಟೋ ಹಳ್ಳಿಗರು ಶಿಬಿರದ ಕೊನೆಗೆ ಆತ್ಮೀಯ  ಬಂಧವನ್ನು ಬೆಳೆಸಿಕೊಂಡು ಭಾವುಕರಾಗುವುದಿದೆ. ಇನ್ನು ಪತ್ರಿಕೆಗಳು,  ಟಿ.ವಿ. ಮಾಧ್ಯಮಗಳು ಎನ್‌ಎಸ್‌ಎಸ್‌ನ ಸಮಾಜಮುಖೀ ಸೇವೆಯನ್ನು ಗುರುತಿಸಿರುವುದು ಎಳೆಯರಿಗೆ  ದೊಡ್ಡ ಪ್ರೋತ್ಸಾಹವೆ.   

ನಮ್ಮ ದೇಶದ ಪಂಚವಾರ್ಷಿಕ ಯೋಜನೆಗಳ ಆದರ್ಶಗಳಾದ ಸಾಕ್ಷರತೆ, ಸ್ವತ್ಛತೆ, ಗ್ರಾಮಗಳ ಉದ್ಧಾರ, ಆರೋಗ್ಯ... ಹೀಗೆ ಎನ್‌ಎಸ್‌ಎಸ್‌ನದ್ದು  ಸದ್ದಿಲ್ಲದೆ ಸಾಂಸ್ಕೃತಿಕ, ಸಾಮಾಜಿಕ, ಆಯಾಮವೂ ಇದೆ. ಭೂಮಿಯಲ್ಲಿ ಹಸಿರು ಅರಳಿಸುವ,  ಸಮಾಜದಲ್ಲಿ ಸ್ವಾಸ್ಥ್ಯ ಹರಡುವ, ರಾಷ್ಟ್ರ ಕಟ್ಟುವ ಈ ಕಾಯಕ ಹೀಗೆಯೇ ಮುಂದುವರಿಯಲಿ ಎಂದು ಹಾರೈಕೆ. 

ಜಯಶ್ರೀ ಬಿ. ಕದ್ರಿ
ಸರಕಾರಿ ಪ್ರಥಮದರ್ಜೆ ಕಾಲೇಜು, ಮಂಗಳೂರು


Trending videos

Back to Top