ಮನೆಗ್ ಹೋಗೋಲ್ವಂತೆ ಶರಣ್: ಮಾಸ್ ಸಾಂಗ್ ವೀಕ್ಷಿಸಿ
Team Udayavani, Oct 15, 2018, 5:19 PM IST
“ರ್ಯಾಂಬೋ’ 2 ಚಿತ್ರದ ನಂತರ ನಟ ಶರಣ್ ಅಭಿನಯದ “ವಿಕ್ಟರಿ 2′ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ನಾವ್ ಮನೆಗ್ ಹೋಗೋದಿಲ್ಲ’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ. ಹಾಡಿಗೆ ಯೋಗರಾಜ್ ಭಟ್ಟರು ಸಾಹಿತ್ಯವನ್ನು ರಚಿಸಿದ್ದಾರೆ. ಅಂದ ಹಾಗೆ ಯೋಗರಾಜ್ ಭಟ್ಟರು ಈವರೆಗೆ ಸಾಕಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲೂ ಕುಡಿತದ ಕುರಿತಾಗಿಯೂ ಒಂದಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಕೆಲವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ತರಹ ಸದ್ದು ಮಾಡಿದ ಹಾಡಲ್ಲಿ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು’ ಹಾಡು ಕೂಡಾ ಒಂದು. ಶರಣ್ ನಾಯಕರಾಗಿರುವ “ವಿಕ್ಟರಿ’ ಚಿತ್ರದ ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಈಗ “ವಿಕ್ಟರಿ-2′ ಬರುತ್ತಿದೆ. ಸಹಜವಾಗಿಯೇ ಒಂದು ಚಿತ್ರದ ಹಾಡು ಹಿಟ್ ಆಗಿರುವಾಗ, ಅದರ ಮುಂದುವರಿದ ಭಾಗದಲ್ಲೂ ಆ ತರಹದ ಹಾಡನ್ನು ಜನ ನಿರೀಕ್ಷಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ “ವಿಕ್ಟರಿ-2′ ತಂಡ ಆ ತರಹದ ಒಂದು ಮಾಸ್ ಸಾಂಗ್ ಅನ್ನು ಮಾಡಿದೆ. “ನಾವ್ ಮನೇಗ್ ಹೋಗೋದಿಲ್ಲ..’ ಎಂದು ಆರಂಭವಾಗುವ ಈ ಹಾಡನ್ನು ವಿಜಯ್ ಪ್ರಕಾಶ್ ತಮ್ಮ ಎಂದಿನ ಧ್ವನಿಗಿಂತ ವಿಭಿನ್ನವಾಗಿ ಹಾಡಿದ್ದಾರೆ. ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಪುನೀತ್ ರಾಜ್ಕುಮಾರ್, ಶ್ರೀನಗರ ಕಿಟ್ಟಿ, ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್, ಯೋಗಿ, ರಿಷಭ್ ಶೆಟ್ಟಿ, ಉಪೇಂದ್ರ, ಚಿರಂಜೀವಿ ಸರ್ಜಾ, ಶ್ರೀ ಮುರಳಿ, ಯಶ್, ಅಜಯ್ ರಾವ್, ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಇನ್ನಿತರರು ಈ ಹಾಡನ್ನು ಕೇಳಿ ಫಿದಾ ಆಗಿದ್ದಾರೆ. ಅಲ್ಲದೇ ಈ ಹಾಡು ಹಳೆಯ ಹಾಡುಗಳ ದಾಖಲೆಯನ್ನು ಮುರಿಯುವುದು ಗ್ಯಾರಂಟಿ ಎಂದು ಎಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಮಾಸ್ ಸಾಂಗ್ ವೀಕ್ಷಿಸಿ.