ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಸ್ಥಗಿತ

15 ಲಕ್ಷ ರೂ. ಅನುದಾನದೊಂದಿಗೆ ಚಾಲನೆ

Team Udayavani, Sep 10, 2019, 5:24 AM IST

ಆಲಂಕಾರು: ಕಡಬ ತಾಲೂಕು ಆಲಂಕಾರು ಪೇಟೆಯಲ್ಲಿ ಜಿ.ಪಂ. ಅನುದಾನದ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಸ್ಥಗಿತಗೊಂಡಿದ್ದು, ಸ್ಥಳೀಯಾಡಳಿತ ಸೂಕ್ತ ಕ್ರಮ ಕೈಗೊಳ್ಳದೆ ಹಳ್ಳ ಹಿಡಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಜಿಲ್ಲಾ ಪಂಚಾಯತ್‌ನ 15 ಲಕ್ಷ ರೂ. ಅನುದಾನದೊಂದಿಗೆ 2016ರಲ್ಲಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಘಟಕ ನಿರ್ಮಾಣಕ್ಕೆ ಸೂಚಿಸಿರುವ ಸ್ಥಳ ಸೂಕ್ತವಲ್ಲ ಎಂದು ಕಾಮಗಾರಿ ಪ್ರಾರಂಭಿಸದಂತೆ ಗುತ್ತಿಗೆದಾರ ಸಂಸ್ಥೆ ಕೆಆರ್‌ಡಿಎಲ್‌ಗೆ ಜಿ.ಪಂ. ಸೂಚನೆ ನೀಡಿತ್ತು. ಈ ನಡುವೆಯೂ ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಒಂದು ವರ್ಷದ ಬಳಿಕ ಪೂರ್ಣಗೊಂಡಿತು. ಇದೀಗ ಕಾಮಗಾರಿ ಪೂರ್ಣಗೊಂಡು ವರ್ಷ ಮೂರು ಸಂದರೂ ಶುದ್ಧ ನೀರಿನ ಘಟಕದ ಬಳಕೆ ಮರೀಚಿಕೆಯಾಗಿದೆ.

ಕಾಮಗಾರಿ ಪ್ರಗತಿಯಲ್ಲಿ…
ಪುತ್ತೂರು ತಾಲೂಕಿನ 13 ಕಡೆಗಳಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗುವುದು. ಕೆಲವೊಂದು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಮತ್ತೆ ಹಲವು ಕಡೆಗಳಲ್ಲಿ ಪ್ರಗತಿಯಲ್ಲಿದೆ. ಕೆಲವು ಘಟಕಗಳ ಕಾಮಗಾರಿ ಪೂರ್ಣ ಗೊಂಡಿದ್ದರೂ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅಂತಹ ಘಟಕಗಳನ್ನು ದುರಸ್ತಿಗೊಳಿಸಿ ಸ್ಥಳೀಯಾಡಳಿತದ ಅಧೀನಕ್ಕೆ ಒಳಪಡಿಸಲಾಗುವುದು. 5 ವರ್ಷಗಳ ಅವಧಿಯ ನಿರ್ವಹಣೆಗಾಗಿ ಟೆಂಡರ್‌ ಕರೆಯಲಾಗುವುದು ಎಂದು ಕೆಆರ್‌ಡಿಎಲ್‌ನ ಎಕ್ಸಿಕ್ಯೂಟಿವ್‌ ಎಂಜಿನಿ ಯರ್‌ ಮಹದೇವಪ್ರಸಾದ್‌ 2017ರ ಜೂನ್‌ನಲ್ಲಿ ಮಾಹಿತಿ ನೀಡಿದ್ದರು.

ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಈ ಯೋಜನೆಗಳು 3 ವರ್ಷಗಳಿಂದ ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡಿ ನಿಂತಿದ್ದು, ಒಂದೇ ಒಂದು ಹನಿ ಶುದ್ಧ ನೀರು ಹೊರಗೆ ಬಂದಿಲ್ಲ. ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ 1 ರೂಪಾಯಿಯ ನಾಣ್ಯ ಹಾಕಿದರೆ ಒಂದು ಲೀಟರ್‌ ನೀರು ಬರುತ್ತದೆ ಎಂಬ ಕಥೆ ಮಾತ್ರ ಹೇಳುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

 ಗಮನಕ್ಕೆ ತಾರದೆ ನಿರ್ಮಾಣ
ದಕ್ಷಿಣ ಕನ್ನಡ ಜಿಲ್ಲೆಗೆ ಇದು ಸೂಕ್ತ ಯೋಜನೆಯಲ್ಲ. ಈವರೆಗೆ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆ ಮಾತ್ರ ಈ ಕಾಮಗಾರಿಯನ್ನು ಸುಸೂತ್ರ ವಾಗಿ ನಿರ್ಮಿಸಿಕೊಟ್ಟಿದೆ. ಜಿಲ್ಲೆಯ 13 ಸ್ಥಳಗಳಲ್ಲಿ ಕೆಆರ್‌ಡಿಎಲ್‌ ಕಾಮಗಾರಿ ಪ್ರಾರಂಭಿಸಿದ್ದು, ಎಲ್ಲಿಯೂ ಸಮರ್ಪಕವಾಗಿ ನಿರ್ಮಿಸಿಲ್ಲ. ಆಲಂಕಾರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪವಿದ್ದ ಕಾರಣ ಕಾಮಗಾರಿಯನ್ನು ಪ್ರಾರಂಭಿಸದಂತೆ ಕೆಆರ್‌ಡಿಎಲ್‌ಗೆ ಜಿ.ಪಂ. ಸೂಚಿಸಿತ್ತು. ಜಿ.ಪಂ. ಗಮನಕ್ಕೆ ತಾರದೆ ಘಟಕ ನಿರ್ಮಿಸಲಾಗಿದೆ. ಮುಂದಿನ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸ್ಥಗಿತಗೊಂಡಿರುವ ಘಟಕದ ಕಾಮಗಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರಮೀಳಾ ಜನಾರ್ದನ್‌, ಜಿ.ಪಂ. ಸದಸ್ಯೆ

ಜಿ.ಪಂ.ಗೆ ಪತ್ರ
ಘಟಕದ ಬಗ್ಗೆ ಗ್ರಾ.ಪಂ.ಗೆ ಮಾಹಿತಿಯಿಲ್ಲ. ಘಟಕದಲ್ಲಿ ಬಾಕಿಯಿರುವ ಕಾಮಗಾರಿಯನ್ನು ಸ್ಥಳೀಯಾಡಳಿತದಿಂದ ಮುಗಿಸಲು ಅಸಾಧ್ಯ. ನೀರಿನ ಘಟಕವನ್ನು ಗ್ರಾ.ಪಂ.ಗೆ ಹಸ್ತಾಂತರಿಸುವ ಬಗ್ಗೆ ಗುತ್ತಿಗೆ ದಾರರು ಯಾವುದೇ ಮಾಹಿತಿ ನೀಡಿಲ್ಲ. ಎಲ್ಲ ಕಾಮಗಾರಿ ಯನ್ನು ಸಮರ್ಪಕವಾಗಿ ಮುಗಿಸಿ ಹಸ್ತಾಂತರಿಸಿದರೆ ಘಟಕಕ್ಕೆ ನೀರು ಸರಬರಾಜು ಮಾಡಲು ಗ್ರಾ.ಪಂ. ಉತ್ಸುಕವಾಗಿದೆ.
– ಸುನಂದಾ ಬಾರ್ಕುಲಿ, ಗ್ರಾ.ಪಂ. ಅಧ್ಯಕ್ಷೆ, ಆಲಂಕಾರು

- ಸದಾನಂದ ಆಲಂಕಾರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ