ರಕ್ಷಣಾ ಕ್ಷೇತ್ರ-ರಾಷ್ಟ್ರೀಯ ಭದ್ರತೆಗೆ ಆನೆಬಲ

Team Udayavani, Sep 11, 2019, 7:14 PM IST

ಮೋದಿ ಆಡಳಿತಕ್ಕೆ ನೂರು ದಿನ ಸಂದಿರುವ ಸಂದರ್ಭದಲ್ಲಿ ಕಣ್ಣಿಗೆ ರಾಚುವ ಸಾಧನೆ ಎನಿಸುವ ಸಾಲಿನಲ್ಲಿ ರಕ್ಷಣಾ ಕ್ಷೇತ್ರವೂ ಸೇರಿದೆ. ಪ್ರಮುಖವಾಗಿ ಮೂರು ಸೇನೆಗೆ ಸೇರಿದಂತೆ ಒಬ್ಬ ಸೇನಾ ದಂಡ ನಾಯಕನನ್ನು ನೇಮಿಸುವ ಪ್ರಸ್ತಾವವೂ ಇದೆ.

*

ನಾಗೇಂದ್ರ ತ್ರಾಸಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಮೊದಲ ಐದು ವರ್ಷಗಳ ಕಾಲ ಆಡಳಿತ ಪೂರ್ಣಗೊಳಿಸಿದ ಬಳಿಕ 2019 ರಲ್ಲಿ ನಡೆದ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ಇದೀಗ ಮೋದಿ 2ನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ನೂರು ದಿನಗಳಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತಳೆದಿದ್ದಾರೆ. ಆ ನಿಟ್ಟಿನಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವ ಹಾಗೂ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಕೈಗೊಂಡ ಕ್ರಮಗಳು ಕೆಲವಿವೆ.

ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ

ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಸೇನೆಯ ಕೇಂದ್ರ ಕಚೇರಿಗಳ ಪುನರ್ ನಿರ್ಮಾಣ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗಾಗಿ ರಕ್ಷಣಾ ಸಚಿವಾಲಯ ಶಿಫಾರಸು ಮಾಡಿದೆ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಉನ್ನತ ಮಟ್ಟದ ಪುನರ್ ಪರಿಶೀಲನಾ ಸಮಿತಿಯನ್ನೂ ನೇಮಿಸಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಮೂರು ಸೇನೆಗೂ ಅನ್ವಯವಾಗುವಂತೆ ಸಿಡಿಎಸ್ (ಸೇನಾ ದಂಡನಾಯಕ) ನೇಮಿಸುವುದಾಗಿ ಘೋಷಿಸಿದ್ದು ಮಹತ್ವದ ನಿಲುವು.

ಭೂಸೇನೆ, ವಾಯುಸೇನೆ ಹಾಗೂ ನೌಕಸೇನೆ ಜತೆ ಸಮನ್ವಯ ಅವಶ್ಯವಿರುವುದು ಸ್ಪಷ್ಟ. ಇದರ ಸಾಧನೆಗೆ ಸೇನಾ ದಂಡನಾಯಕರನ್ನು ನೇಮಿಸುವ ಮೂಲಕ ಮೂರೂ ಸೇನೆಗೆ ಸಂಬಂಧಿಸಿದ ನಿರ್ಧಾರಗಳನ್ನು ತಕ್ಷಣವೇ ತೆಗೆದುಕೊಳ್ಳಲು ಹೆಚ್ಚಿನ ಅನುಕೂಲವಾಗಲಿದೆ.

ರಕ್ಷಣೆಗೆ ಹೆಚ್ಚು ಒತ್ತು ಯಾಕೆ?

ರಕ್ಷಣಾ ವಲಯವನ್ನು ಆಧುನಿಕರಣಗೊಳಿಸುವಲ್ಲಿ ಹೆಚ್ಚಿನ ಗಮನ ಕೊಟ್ಟಿರುವುದೂ ತರ್ಕಬದ್ಧ  ನಿರ್ಧಾರ. ಚೀನಾ ಮತ್ತು ಪಾಕಿಸ್ತಾನದ ನಂಟು ತೀವ್ರಗೊಳ್ಳುತ್ತಿರುವುದು ನಮ್ಮನ್ನು ನಾವು ಕಾದುಕೊಳ್ಳಬೇಕಾದ ಅಗತ್ಯವನ್ನು ಹಿಂದಿಗಿಂತ ಹೆಚ್ಚಿಸಿದೆ. ನಮ್ಮ ಸೇನೆಯೂ ಹಿಂದೆಯೇ ಆಧುನಿಕ ಜೆಟ್, ಅತ್ಯಾಧುನಿಕ ತಂತ್ರಜ್ಞಾನ ಯುದ್ಧ ವಿಮಾನ ಖರೀದಿಗೆ ಶಿಫಾರಸು ಮಾಡಿದ್ದನ್ನು ಸ್ಮರಿಸಬಹುದು.

ಜಾಗತಿಕವಾಗಿ ಬಹುತೇಕ ದೇಶಗಳಿಗೆ ಭಯೋತ್ಪಾದನೆ ದೊಡ್ಡ ಕಂಟಕವಾಗಿದೆ. ಉಗ್ರರ ಚಟುವಟಿಕೆ ಸಂಪೂರ್ಣವಾಗಿ ನಿಗ್ರಹಿಸುವಲ್ಲಿ ಭಾರತ, ಅಮೆರಿಕ ಸೇರಿದಂತೆ ವಿಶ್ವಸಂಸ್ಥೆ ಮಟ್ಟದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿವೆ. ಆಂತರಿಕ ಭದ್ರತೆಯ ಜತೆಗೆ ಅಂತಾರಾಷ್ಟ್ರೀಯವಾಗಿಯೂ ಉಗ್ರರು, ಪ್ರತ್ಯೇಕತಾವಾದಿಗಳೊಂದಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೆಣಸುವ ಸವಾಲು ಎದುರಾಗಿದೆ.

ಈ ಎಲ್ಲಾ ನೆಲೆಯಲ್ಲಿ ಸೇನೆಯ ಆಧುನೀಕರಣ ಸದ್ಯಕ್ಕೆ ಅನಿವಾರ್ಯ. ಬೋಯಿಂಗ್, ಸ್ವೀಡನ್ ಕಂಪನಿ ಜತೆ 15 ಬಿಲಿಯನ್ ಡಾಲರ್ ವೆಚ್ಚದಲ್ಲಿ 114 ಯುದ್ಧ ವಿಮಾನ ಖರೀದಿಗಾಗಿ ಒಪ್ಪಂದ ಮಾಡಿಕೊಂಡಿರುವುದು ಇಂಥ ಕ್ರಮಗಳಲ್ಲಿ ಒಂದು. 36 ರಫೇಲ್ ಜೆಟ್ ಯುದ್ಧ ವಿಮಾನ, ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ಸ್, ತೇಜಸ್ ಯುದ್ಧ ವಿಮಾನಗಳ ಖರೀದಿಗೂ ಒಪ್ಪಂದ ಮಾಡಿಕೊಂಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಮಧ್ಯಂತರ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 4,31,011 ಲಕ್ಷ ಕೋಟಿ ರೂ. ಮೀಸಲಿರಿಸಿದ್ದರು. ಇದರಲ್ಲಿ ಸೇನೆಯ ಸಂಬಳ, ಭತ್ಯೆ ಹಾಗೂ ನಿವೃತ್ತ ಯೋಧರ(One Rank One pension) ಪಿಂಚಣಿ ಸೇರಿತ್ತು.

ರಾಷ್ಟ್ರೀಯ ಭದ್ರತೆಗೆ ಒತ್ತು:

ರಕ್ಷಣಾ ವಲಯದ ಜತೆ, ಜತೆಯಲ್ಲಿ ರಾಷ್ಟ್ರೀಯ ಭದ್ರತೆಗೂ ಗಮನವಹಿಸಲಾಗಿದೆ. ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನಕ್ಕೇರಿಸಲಾಗಿದೆ. ದೇಶದ ಆಂತರಿಕ ಭದ್ರತೆಯನ್ನು ಬಲಿಷ್ಠಗೊಳಿಸಲು ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ(ಎನ್ ಐಎ ತಿದ್ದುಪಡಿ) ಕಾಯ್ದೆ ಮಸೂದೆಯನ್ನು ಅಂಗೀಕರಿಸಲಾಯಿತು. ಇದರಿಂದಾಗಿ ಯಾವುದೇ ಭಯೋತ್ಪಾದಕ ಸಂಘಟನೆ ಅಥವಾ ಉಗ್ರನ ತನಿಖೆ ನಡೆಸಲು ಎನ್ ಐಎಗೆ ಹೆಚ್ಚಿನ ಬಲ ನೀಡಿದಂತಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ