ಇ.ಡಿ.ಗಂತೂ ಸದ್ಯಕ್ಕೆ ಕೈ ತುಂಬ ಕೆಲಸ!

Team Udayavani, Sep 11, 2019, 11:39 PM IST

ಈ ನೂರು ದಿನಗಳಲ್ಲಿ ಸಾಕಷ್ಟು ಮುನ್ನೆಲೆಗೆ ಬಂದಿರುವುದು ಇಡಿ (ಎನ್‌ಫೋರ್ಸ್‌ಮೆಂಟ್‌ ಡೈರೆಕ್ಟೋರೇಟ್‌). ಎಲ್ಲರೂ ರಾಜಕೀಯ ದ್ವೇಷಕ್ಕಾಗಿ ಇಂಥ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ವಿಪಕ್ಷಗಳಿಂದ ಕೇಳಿಬರುತ್ತಿದೆ. ಆದರೂ ಒಂದು ಸಂಸ್ಥೆ ಇದೆ ಎಂದು ಗೊತ್ತಾದದ್ದೇ ಈಗ. ಒಟ್ಟು ಈಗಲಂತೂ ಈ ಸಂಸ್ಥೆಗೆ ಕೈ ತುಂಬಾ ಕೆಲಸ !
*
– ಈಶ

ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಬಾರಿ ಆಡಳಿತಕ್ಕೆ ಬಂದ ಬಳಿಕ ಕೇಂದ್ರೀಯ ತನಿಖಾ ಸಂಸ್ಥೆಗಳು ವ್ಯಾಪಕ ದಾಳಿಗಳನ್ನು ಸಂಘಟಿಸುತ್ತಿವೆ. ತನಿಖೆಗಳನ್ನು ಕೈಗೊಳ್ಳುತ್ತಿವೆ. ಇದು ವಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದ್ದು, ವಿಪಕ್ಷಗಳ ನೇತಾರರೇ ಬಂಧನ ಭೀತಿ, ತನಿಖೆಯ ಉರುಳಿಗೆ ಸಿಕ್ಕಿಬಿದ್ದಿದ್ದಾರೆ. ಮೋದಿ ಅವರು ಈ ಸಂಸ್ಥೆಗಳ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಲಸು ಪ್ರಯತ್ನಿಸುತ್ತಿದ್ದಾರೆ ಎಂಬುದು ಕೇಳಿಬರುತ್ತಿರುವ ಆರೋಪ. ವಿಚಿತ್ರವೆಂದರೆ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಲವು ದಾಳಿ, ತನಿಖೆಗಳನ್ನು ಸಂಘಟಿಸಿ ಹಲವರನ್ನು ಬಂಧಿಸಿವೆ. ಮೋದಿ ಅವರು 2014ರಲ್ಲಿ ಆಡಳಿತಕ್ಕೆ ಬಂದ ಬಳಿಕ ಸಿಬಿಐ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ದಾಳಿ ನಡೆಸಿದ್ದು, ತದನಂತರದಿಂದ ಕೇಂದ್ರ ಸರಕಾರ ತನಿಖಾ ಸಂಸ್ಥೆಗಳಿಂದ ವಿಪಕ್ಷ ನಾಯಕರಿಗೆ ನಿದ್ದೆ ಇಲ್ಲದಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು.

ತೀವ್ರಗೊಂಡ ತನಿಖೆಗಳು
ಕೇಂದ್ರದ ಮಾಜಿ ಗೃಹಸಚಿವ ಪಿ. ಚಿದಂಬರಂ ಅವರು ಇತ್ತೀಚಿನ ದಿನಗಳಲ್ಲಿ ಬಂಧನಕ್ಕೊಳಗಾದ ಅತಿ ದೊಡ್ಡ ರಾಜಕಾರಣಿ. ಐಎನ್‌ಎಕ್ಸ್‌ ಹಗರಣದಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದೆ. 2007ರಲ್ಲಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್‌ ಮೀಡಿಯಾಕ್ಕೆ 305 ಕೋಟಿ ರೂ. ವಿದೇಶಿ ದೇಣಿಗೆ ಪಡೆಯಲು ಅಕ್ರಮ ಅನುಮತಿ ನೀಡಿದ್ದರು ಎನ್ನುವುದು ಅವರ ಮೇಲಿನ ಆರೋಪ. ಈ ಕುರಿತಂತೆ ಅವರು ಸಿಬಿಐ, ಇಡಿ ಎರಡಕ್ಕೂ ಬೇಕಾದವರಾಗಿದ್ದರು.

ಎರಡನೆಯದಾಗಿ ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಅವರ ವಿರುದ್ಧ ಕೇಸು ದಾಖಲಾಗಿದ್ದು, ಇತ್ತೀಚಿಗೆ ಇ.ಡಿ. ಅವರನ್ನು ಬಂಧಿಸಿದೆ. ಈ ಪ್ರಕರಣ 2017ರದ್ದಾದರೂ ಆ ಹೊತ್ತಿನಲ್ಲಿ ತೆರಿಗೆ ಇಲಾಖೆ ಅಧಿಕಾಗಳು ಮೊದಲ ಬಾರಿಗೆ ವಿವಿಧೆಡೆ ಅವರ ನಿವಾಸ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. 2018 ಸೆಪ್ಟೆಂಬರ್‌ನಲ್ಲಿ ಇ.ಡಿ. ಕೇಸು ದಾಖಲಿಸಿದ್ದು, ಬಳಿಕ ತನಿಖೆ ಪ್ರಗತಿಯಲ್ಲಿತ್ತು. 2019 ಸೆ.3ರಂದು ಅಕ್ರಮ ಹಣ ವರ್ಗಾವಣೆ ಮತ್ತು ಆದಾಯ ತೆರಿಗೆ ಪ್ರಕರಣದ ಅನ್ವಯ ಅವರನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ಕೊಹಿನೂರ್‌ ಕಟ್ಟಡ ನಿರ್ಮಾಣ ಯೋಜನೆಯಲ್ಲಿ 421 ಕೋಟಿ ರೂ. ವಂಚನೆ ಎದುರಿಸುತ್ತಿದ್ದಾರೆ. ಇವರ ವಿರುದ್ಧ ಇ.ಡಿ. ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದೆ. ಠಾಕ್ರೆಯವರೊಂದಿಗೆ ಷೇರುದಾರರಾದ ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ ಜೋಷಿ ಮತ್ತು ಅವರ ಪುತ್ರ ಉನ್ಮೆàಶ್‌ ಜೋಷಿ ಅವರ ಹೆಸರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಅಳಿಯ ರತುಲ್‌ ಪುರಿ ವಿರುದ್ಧದ ವಿಚಾರಣೆಯೂ ತೀವ್ರಗೊಂಡಿದೆ. ಇತ್ತೀಚಿಗೆ ಅವರನ್ನು ಇ.ಡಿ. ಬಂಧಿಸಿದೆ. ಬ್ಯಾಂಕ್‌ಗೆ 354 ಕೋಟಿ ರೂ. ವಂಚನೆ ಎಸಗಿದ ಆರೋಪ ಅವರ ಮೇಲಿದೆ. ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ದಾಳಿ ಕೂಡ ನಡೆಸಿತ್ತು.

ಇದರೊಂದಿಗೆ ದೇಶಾದ್ಯಂತ ಹಲವು ವಂಚನೆ ಪ್ರಕರಣಗಳನ್ನು ಇ.ಡಿ. ದಾಖಲಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ 2018ರ ಒಂದೇ ವರ್ಷದಲ್ಲಿ ಅದು ಅತಿ ಹೆಚ್ಚು ಅಂದರೆ 881 ಅಕ್ರಮ ಹಣಕಾಸು ವರ್ಗಾವಣೆ ಕುರಿತ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಇದೇ ವೇಳೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 29468.31 ಕೋಟಿ ರೂ. ಮೌಲ್ಯದ 973 ಆಸ್ತಿಗಳನ್ನು ಅದು ಮುಟ್ಟುಗೋಲು ಹಾಕಿಕೊಂಡಿತ್ತು.

ಹಾಗೆಯೇ ಇದೇ ಅವಧಿಯಲ್ಲಿ ವಿದೇಶಿ ದೇಣಿಗೆಯಲ್ಲಿ ನಡೆಸಿದ ವಂಚನೆ ಕುರಿತಾಗಿ 6275ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ದಾಖಲಾಗಿರುವ ಕೇಸುಗಳ ಈ ಪ್ರಮಾಣ ಕಳೆದ 14 ವರ್ಷಗಳಲ್ಲೇ ಅತ್ಯಧಿಕವಾಗಿದೆ. ಇ.ಡಿ ಯ ಈ ಕ್ಷಿಪ್ರಗತಿ ಕೊಂಚ ವಿವಾದಕ್ಕೀಡಾಗಿದೆ. ಇಲ್ಲಿಯವರೆಗೆ ಏನು ನಿದ್ರೆ ಮಾಡುತಿತ್ತಾ ಎಂಬ ಅಭಿಪ್ರಾಯವೂ ಕೇಳಿಬಂದಿರುವುದು ಸ್ಪಷ್ಟ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ