ದೂರದೃಷ್ಟಿ, ಪ್ರಗತಿಗಾಮಿ ವಿದೇಶಾಂಗ ನೀತಿ

Team Udayavani, Sep 12, 2019, 1:55 PM IST

ನೂರು ದಿನಗಳಲ್ಲಿ ಮುಂದುವರಿದಿರುವುದು ಹಿಂದಿನ 5 ವರ್ಷಗಳಲ್ಲಿನ ವಿದೇಶಾಂಗ ನೀತಿಯೇ ಎಂಬುದು ಸ್ಪಷ್ಟ. ಈ ಬಾರಿ ವಿದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧದ ಬಲವರ್ಧನೆಯ ಜತೆ ಜತೆ ಭಾರತ ಆರ್ಥಿಕವಾಗಿ ಸದೃಢತೆಯನ್ನು ಸಾಧಿಸುವ ನಿಟ್ಟಿನಲ್ಲೂ ಕೆಲವೊಂದು ಉಪಕ್ರಮಗಳಿಗೆ ಮುಂದಾಗುತ್ತಿರುವುದು ವಿಶೇಷ.
*ಹರೀಶ್‌ ಕೊಕ್ಕಡ

ಮೊದಲ ಅವಧಿಯಲ್ಲೇ ಯಶಸ್ವಿ
2014ರಲ್ಲಿ ನರೇಂದ್ರ ಮೋದಿ ಪ್ರಮಾಣ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್‌ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ಥಾನದ ಪ್ರಧಾನಿಯಾಗಿದ್ದ ನವಾಜ್‌ ಶರೀಫ್ ಅವರಿಗೂ ಆಹ್ವಾನ ನೀಡಿ ನೆರೆ ರಾಷ್ಟ್ರದ ಜತೆ ಸ್ನೇಹಹಸ್ತ ಚಾಚಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶರೀಫ್ ಅವರೂ ಉಭಯ ದೇಶಗಳ ನಡುವೆ ಶಾಂತಿ ಪುನರ್‌ ಸ್ಥಾಪಿಸುವ ವಾಗ್ಧಾನವಿತ್ತಿದ್ದರಾದರೂ ಆ ಬಳಿಕದ ಬೆಳವಣಿಗೆಗಳೆಲ್ಲವೂ ಅದಕ್ಕೆ ತದ್ವಿರುದ್ಧವಾಗಿತ್ತು.

ಮೊದಲ ಅವಧಿ ಮುಗಿಯುವ ವೇಳೆಗೆ ಪಾಕಿಸ್ಥಾನದ ಕುತಂತ್ರ, ಕುಕೃತ್ಯಗಳು ಮಿತಿಮೀರಿ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ತಲೆದೋರಿದ್ದು ಈಗ ಇತಿಹಾಸ. ಉಳಿದಂತೆ ಪ್ರಧಾನಿ ಮೋದಿ ಮತ್ತು ಆಗಿನ ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪ್ರತಿಯೊಂದೂ ರಾಜತಾಂತ್ರಿಕ ನಡೆಗಳು ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಮೋದಿ ಅವರು ಪದೇಪದೇ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತಾದರೂ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಉಗ್ರರ ತಾಣಗಳ ಮೇಲೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌, ವೈಮಾನಿಕ ದಾಳಿಯ ಸಂದರ್ಭದಲ್ಲಿ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯವಾಗಿ ಮೂಲೆಗುಂಪು ಮಾಡುವಲ್ಲಿ ಇದು ಸಹಕಾರಿಯಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

*ಸ್ವಾವಲಂಬನೆ, ಆರ್ಥಿಕ ಸಶಕ್ತೀಕರಣದ ಮಹತ್ವಾಕಾಂಕ್ಷೆ
*ವಿಶ್ವದ ಎದುರು ಪಾಕಿಸ್ಥಾನವನ್ನು ಬೆತ್ತಲಾಗಿಸಿದ ಮೋದಿ ಸರಕಾರ
*ಬಿಮ್‌ಸ್ಟೆಕ್‌ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿ; ಚೀನದೊಂದಿಗೆ ಪೈಪೋಟಿ

ಬಿಮ್‌ಸ್ಟೆಕ್‌ ದೇಶಗಳಿಗೆ ಆದ್ಯತೆ
ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಮೋದಿ ಅವರು ಬಿಮ್‌ಸ್ಟೆಕ್‌ ದೇಶಗಳ ನಾಯಕರಿಗೆ ಆಹ್ವಾನ ನೀಡಿದ್ದರು. ಅಲ್ಲದೆ ಮಾರಿಷಸ್‌ ಮತ್ತು ಕಿರ್ಗಿಝ್ಸ್ಥಾನ್‌ನ ನಾಯಕರೂ ಪಾಲ್ಗೊಂಡಿದ್ದರು. ಮೋದಿ ಅವರ ಈ ನಡೆ ರಾಜಕೀಯವಾಗಿ ಒಂದಿಷ್ಟು ಕುತೂಹಲಕ್ಕೆ ಕಾರಣವಾಗಿತ್ತಾದರೂ ಕಾಲಕ್ರಮೇಣ ಅದಕ್ಕೆ ಉತ್ತರ ಸಿಕ್ಕಿದೆ.

ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ವೃದ್ಧಿಯ ಜತೆಜತೆ ಏಷ್ಯಾದಲ್ಲಿ ಆರ್ಥಿಕವಾಗಿ ಸದೃಢಗೊಂಡು ಚೀನಾದ ಜತೆ ಪೈಪೋಟಿಗಿಳಿಯುವ ಮಹತ್ವಾಕಾಂಕ್ಷೆ ಮೋದಿಯವರದ್ದು. ಬಿಮ್‌ಸ್ಟೆಕ್‌ ರಾಷ್ಟ್ರಗಳ ಜತೆ ವ್ಯಾಪಾರ ವೃದ್ಧಿಯ ಜತೆ ಸಾಗರ ಮಾರ್ಗವನ್ನು ಬಳಸಿ ಮಾದಕ ವಸ್ತುಗಳ ಸಾಗಾಟ, ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕುವ ಲೆಕ್ಕಾಚಾರವೂ ಮೋದಿ ನಡೆಯಲ್ಲಿದೆ. ಸಹಜವಾಗಿಯೇ ಭಾರತದ ಈ ರಾಜತಾಂತ್ರಿಕ ನಡೆ ಚೀನದ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಕಳೆದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌ ಅವರು ಅನಾರೋಗ್ಯದ ಕಾರಣದಿಂದಾಗಿ ಚುನಾವಣ ಸ್ಪರ್ಧೆಯಿಂದ ದೂರ ಉಳಿದಿದ್ದರು. ಹಾಗಾಗಿ ಈ ಹೊಣೆಗಾರಿಕೆ ಯಾರ ಪಾಲಾಗುತ್ತದೆಂಬ ಕುತೂಹಲ ಜನರಲ್ಲಿತ್ತು. ಸುಷ್ಮಾ ಸ್ವರಾಜ್‌ ಅವಧಿಯಲ್ಲಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸುಬ್ರಹ್ಮಣ್ಯಂ ಜೈಶಂಕರ್‌ ಅವರಿಗೆ ಈ ಹೊಣೆ ಕೊಡುವ ಮೂಲಕ ರಾಜತಾಂತ್ರಿಕ ಅನುಭವಿಯೊಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಿ ತಮ್ಮ ಸರಕಾರದ ಆದ್ಯತೆಯನ್ನು ಮನದಟ್ಟು ಮಾಡಿದರು.

ಮುಂದುವರಿದ ವಿದೇಶ ಪ್ರವಾಸದ ಸರಣಿ
ಎರಡನೇ ಅವಧಿಯ ನೂರು ದಿನಗಳಲ್ಲಿ ಮೋದಿ ಅವರು ಏಳು ದೇಶಗಳಿಗೆ ಪ್ರವಾಸ ಕೈಗೊಂಡಿದ್ದು ಪಾಕ್‌, ಚೀನ ಹೊರತುಪಡಿಸಿದಂತೆ ಉಳಿದೆಲ್ಲ ನೆರೆಯ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಪಣ ತೊಟ್ಟಿದ್ದಾರೆ. ಮಾಲ್ದೀವ್ಸ್‌, ಶ್ರೀಲಂಕಾ, ಭೂತಾನ್‌, ಯುಎಇ, ಬಹ್ರೈನ್‌, ಫ್ರಾನ್ಸ್‌ ಮತ್ತು ವಾರದ ಹಿಂದೆಯಷ್ಟೇ ರಷ್ಯಾಕ್ಕೆ ಭೇಟಿ ನೀಡಿ ಕೆಲವು ಮಹತ್ತರ ವಾಣಿಜ್ಯ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರೆ. ಬಹ್ರೈನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಬಂಗಾಳ ಕೊಲ್ಲಿ ತೀರದ ರಾಷ್ಟ್ರಗಳಲ್ಲಿನ ತೈಲ ಮತ್ತು ಖನಿಜ ಸಂಪತ್ತನ್ನು ಆಮದು ಮಾಡಿಕೊಳ್ಳುವ ಹಾಗೂ ಭಾರತದಿಂದ ಆ ರಾಷ್ಟ್ರಗಳಿಗೆ ಅಗತ್ಯ ವಸ್ತುಗಳನ್ನು ರಫ್ತು ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿದ್ದು ಇದರಿಂದ ಭಾರತಕ್ಕೆ ಬಹಳಷ್ಟು ಪ್ರಯೋಜನವಾಗಲಿದೆ. ಭೂತಾನ್‌ನೊಂದಿಗೆ ವಿದ್ಯುತ್‌ ಉತ್ಪಾದನೆ, ರಷ್ಯಾದೊಂದಿಗೆ ಗಗನಯಾನ ಮತ್ತು ರಕ್ಷಣೆಗೆ ಸಂಬಂಧಿಸಿದ ಮಹತ್ವದ ಒಪ್ಪಂದ ಮಾಡಿಕೊಳ್ಳುವ ಮೂಲಕ ಮೋದಿ ಸರಕಾರ, ಅಮೆರಿಕದ ಡಾಲರ್‌ ಎದುರು ರೂಪಾಯಿಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ.

ಈ ಒಪ್ಪಂದಗಳಲ್ಲಿ ರಫ್ತು ಅಥವಾ ಆಮದು ಮಾಡಿಕೊಳ್ಳಲಾಗುವ ವಸ್ತುಗಳಿಗೆ ಡಾಲರ್‌ ಬದಲಾಗಿ ರೂಪಾಯಿಯನ್ನೇ ನೀಡುವ ನಿರ್ಧಾರ ಈ ನಿಟ್ಟಿನಲ್ಲಿ ಬಹಳ ಮಹತ್ವದ್ದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಇನ್ನಷ್ಟು ಜೀವ ಬರಬಹುದೆಂಬ ನಿರೀಕ್ಷೆಯಿದೆ. ಜಗತ್ತಿನ ಇನ್ನೊಂದು ಪ್ರಮುಖ ದಿಗ್ಗಜ ರಾಷ್ಟ್ರವಾದ ಫ್ರಾನ್ಸ್‌ನೊಂದಿಗೆ ರಕ್ಷಣೆ ಮತ್ತು ಕೈಗಾರಿಕೆಗೆ ಸಂಬಂಧಿಸಿದಂತೆ ಮಹತ್ತರ ಒಡಂಬಡಿಕೆಗಳಿಗೆ ಸಹಿ ಹಾಕಿರುವುದು ದೇಶದ ಭದ್ರತೆ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಪರಿಣಾಮಕಾರಿ.

ವಿಶ್ವ ನಾಯಕರಿಗೆ ಪಾಕ್‌ನ ಕುತಂತ್ರದ ಮನವರಿಕೆ
ಜಪಾನ್‌ನಲ್ಲಿ ನಡೆದ ಜಿ-20 ಶೃಂಗ ಸಭೆ ಮತ್ತು ಫಾನ್ಸ್‌ನಲ್ಲಿ ನಡೆದ ಜಿ-7 ರಾಷ್ಟ್ರಗಳ ಸಮಾವೇಶದಲ್ಲೂ ಪಾಲ್ಗೊಂಡಿದ್ದ ಮೋದಿ ಅವರು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಈ ಸಮಾವೇಶಗಳ ಪಾರ್ಶ್ವದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಕಾಶ್ಮೀರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಉಗ್ರರಿಗೆ ಪಾಕ್‌ ಅಶ್ರಯತಾಣವಾದ ಕುರಿತಂತೆ ಆ ನಾಯಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫ‌ಲರಾಗಿದ್ದರು.

ಜಾಧವ್‌ ವಿಚಾರದಲ್ಲಿ ಭಾಗಶಃ ಯಶಸ್ಸು
ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಾಕಿಸ್ಥಾನದಿಂದ 2016ರ ಮಾ.25ರಂದು ಬಂಧಿತರಾದ ಕುಲಭೂಷಣ್‌ ಜಾಧವ್‌ಗೆ ಅಲ್ಲಿನ ಕೋರ್ಟ್‌ ವಿಧಿಸಿದ್ದ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಅಂತಾರಾಷ್ಟ್ರೀಯ ಕೋರ್ಟ್‌ ಆಫ್ ಜಸ್ಟೀಸ್‌ ಶಿಕ್ಷೆಯ ಜಾರಿಗೆ ತಡೆ ವಿಧಿಸಿತ್ತಲ್ಲದೆ ಜಾಧವ್‌ ಭೇಟಿಗೆ ಅವರ ಕುಟುಂಬದ ಸದಸ್ಯರು ಮತ್ತು ಭಾರತೀಯ ರಾಜತಾಂತ್ರಿಕರಿಗೆ ಅವಕಾಶ ನೀಡುವಂತೆ ಪಾಕಿಸ್ಥಾನ ಸರಕಾರಕ್ಕೆ ಆದೇಶಿಸಿತ್ತು. ಈ ಬೆಳವಣಿಗೆಯನ್ನು ಭಾರತದ ರಾಜತಾಂತ್ರಿಕ ನಿಲುವಿಗೆ ಸಂದ ಜಯ ಎಂದು ವಿಶ್ಲೇಷಿಸಲಾಯಿತು.

ಕಾಶ್ಮೀರ ವಿಚಾರದಲ್ಲಿ ಪಾಕ್‌ ಒಬ್ಬಂಟಿ
ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಪಾಕಿಸ್ಥಾನ ತನ್ನ ನರಿಬುದ್ಧಿಯನ್ನು ಮುಂದುವರಿಸಿದ್ದು ಪದೇಪದೇ ಗಡಿಯಲ್ಲಿ ಕದನವಿರಾಮವನ್ನು ಉಲ್ಲಂ ಸಿ ಭಾರತೀಯ ಯೋಧರು ಮತ್ತು ನಾಗರಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಲೇ ಬಂದಿದೆ. ಇದಕ್ಕೆ ಭಾರತೀಯ ಪಡೆಗಳ ಯೋಧರು ಸೂಕ್ತ ಪ್ರತ್ಯುತ್ತರವನ್ನು ನೀಡುತ್ತಲೇ ಬಂದಿದ್ದು ಪಾಕಿಸ್ಥಾನಿ ಯೋಧರು ಮತ್ತು ಕಾಶ್ಮೀರದಲ್ಲಿರುವ ಪಾಕ್‌ ಪ್ರೇರಿತ ಉಗ್ರಗಾಮಿ ಸಂಘಟನೆಗಳ ಪ್ರಮುಖ ನಾಯಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.

ಭಾರತ ಸರಕಾರ ಆ. 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ ಬಳಿಕ ಪಾಕಿಸ್ಥಾನ ಸರಕಾರಕ್ಕೆ ನಿದ್ರೆಯೇ ಇಲ್ಲದಂತಾಗಿದೆ. ಈ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ದೊಡ್ಡ ವಿವಾದವನ್ನಾಗಿಸಲು ಪಟ್ಟ ಪ್ರಯತ್ನವೆಲ್ಲವೂ ವಿಫ‌ಲವಾಗಿದೆ. ಅಮೆರಿಕ, ರಷ್ಯ, ಬ್ರಿಟನ್‌ ಸಹಿತ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲದೆ ವಿಶ್ವಸಂಸ್ಥೆಯ ಕದ ತಟ್ಟಿತಾದರೂ ಫ‌ಲ ನೀಡಲಿಲ್ಲ. ಆದರೂ ತನ್ನ ಪ್ರಯತ್ನವನ್ನು ನಿಲ್ಲಿಸಿಲ್ಲ.

5 ವರ್ಷಗಳ ಒಟ್ಟಾರೆ ಅಧಿಕಾರವಧಿಯಲ್ಲಿ 100 ದಿನಗಳು ಕೇವಲ ಅಲ್ಪ ಸಮಯವಾಗಿದ್ದು ಇಷ್ಟೊಂದು ಕನಿಷ್ಠ ಸಮಯದಲ್ಲಿ ಸರಕಾರದ ವಿದೇಶಾಂಗ ನಿಲುವಿನ ಸಾಧ್ಯಾಸಾಧ್ಯತೆಗಳನ್ನು ಸ್ಪಷ್ಟವಾಗಿ ದೇಶ ಮಾತ್ರವಲ್ಲದೆ ವಿಶ್ವದ ಮುಂದೆ ತೆರೆದಿಟ್ಟಿದೆ. ಸದ್ಯ ದೇಶ ಎದುರಿಸುತ್ತಿರುವ ಆರ್ಥಿಕ ಹಿನ್ನಡೆಯಿಂದ ಬಚಾವಾಗಲು ಮೋದಿ ಅವರ ಈ ವಿದೇಶಾಂಗ ನೀತಿ ಎಷ್ಟು ಸಹಕಾರಿಯಾಗಲಿದೆ ಎಂಬ ಸಹಜ ಕುತೂಹಲ ದೇಶದ ಜನತೆಯಲ್ಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ