ಜಿಎಸ್‌ಟಿ ಪರಿಹಾರ;ರಾಜ್ಯಗಳಿಗೆ ನಿರಾಸೆ: ಆಗಸ್ಟ್‌ನಲ್ಲಿ ಅಂತಿಮ ನಿರ್ಧಾರ ಎಂದ ಸಚಿವೆ ನಿರ್ಮಲಾ
ಅವಧಿ ವಿಸ್ತರಣೆ ನಿರ್ಧಾರ ಕೈಗೊಳ್ಳದ ಜಿಎಸ್‌ಟಿ ಮಂಡಳಿ
Team Udayavani, Jun 30, 2022, 7:20 AM IST
ಚಂಡೀಗಢ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅನುಷ್ಠಾನ ದಿಂದ ರಾಜ್ಯಗಳಿಗೆ ಆಗುತ್ತಿರುವ ಆದಾಯ ನಷ್ಟವನ್ನು ಭರಿಸಲು ನೀಡುವ ಪರಿಹಾರ ವನ್ನು ಇನ್ನೂ ಕೆಲವು ವರ್ಷ ವಿಸ್ತರಿಸಬೇಕು ಎಂಬ ರಾಜ್ಯಗಳ ಮನವಿಗೆ ಕೇಂದ್ರ ಸರ ಕಾರದಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ.
ಜಿಎಸ್‌ಟಿ ಪರಿಹಾರ ಅವಧಿ ವಿಸ್ತರಿಸುವಂತೆ ಕರ್ನಾಟಕ ಸಹಿತ 12 ರಾಜ್ಯಗಳು ಮನವಿ ಮಾಡಿದ್ದವಾದರೂ ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯು ಈ ಕುರಿತು ನಿರ್ಧಾರ ಕೈಗೊಳ್ಳಲಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಭೆಯಲ್ಲಿ ಸುಮಾರು 16 ರಾಜ್ಯ ಗಳು ಜಿಎಸ್‌ಟಿ ಪರಿಹಾರ ಕುರಿತು ಪ್ರಸ್ತಾವಿಸಿದವು. ಈ ಪೈಕಿ 3-4 ರಾಜ್ಯ ಗಳು ತಾವು ಪರಿಹಾರವನ್ನು ಅವಲಂಬಿ ಸುವುದಿಲ್ಲ, ನಮ್ಮ ಕಾಲ ಮೇಲೆ ನಾವೇ ನಿಲ್ಲುತ್ತೇವೆ ಎಂದಿವೆ. ಆಗಸ್ಟ್ ನಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರುತ್ತೇವೆ ಎಂದು 47ನೇ ಜಿಎಸ್‌ಟಿ ಮಂಡಳಿ ಸಭೆ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಸೀತಾ ರಾಮನ್ ತಿಳಿಸಿದ್ದಾರೆ.
2017ರ ಜು. 1ರಂದು ದೇಶಾದ್ಯಂತ ಜಿಎಸ್‌ಟಿ ಜಾರಿಯಾದಾಗ ರಾಜ್ಯಗಳ ಆದಾಯ ಖೋತಾವನ್ನು ತುಂಬಲು 5 ವರ್ಷಗಳ ಕಾಲ ಪರಿಹಾರ ಒದಗಿಸುವುದಾಗಿ ಕೇಂದ್ರ ಸರಕಾರ ಘೋಷಿಸಿತ್ತು. ಆ ಅವಧಿ ಇದೇ ಜೂ. 30ರಂದು ಮುಕ್ತಾಯವಾಗಲಿದೆ. ಕೊರೊನಾದಿಂದಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕಾರಣ ಪರಿಹಾರದ ಅವಧಿ ವಿಸ್ತರಿಸಬೇಕು ಎನ್ನುವುದು ರಾಜ್ಯಗಳ ಬೇಡಿಕೆಯಾಗಿದೆ.
ನಿರ್ಧಾರ ಮುಂದೂಡಿಕೆ
ಇದೇ ವೇಳೆ ಕ್ಯಾಸಿನೋಗಳು, ಆನ್‌ಲೈನ್ ಗೇಮಿಂಗ್, ಕುದುರೆ ರೇಸ್ ಮತ್ತು ಲಾಟರಿಗಳ ಮೇಲೆ ಶೇ. 28 ಜಿಎಸ್‌ಟಿ ವಿಧಿಸುವ ಕುರಿತ ನಿರ್ಧಾರವನ್ನೂ ಜಿಎಸ್‌ಟಿ ಮಂಡಳಿ ಮುಂದೂಡಿದೆ.
ಕಡ್ಡಾಯ ನೋಂದಣಿ ನಿಯಮ ರದ್ದು
ಸಣ್ಣ ಆನ್‌ಲೈನ್ ಮಾರಾಟಗಾರರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ಜಿಎಸ್‌ಟಿ ಮಂಡಳಿ ತೆಗೆದುಹಾಕಿದೆ. 40 ಲಕ್ಷ ರೂ.ಗಳಿಗಿಂತ ಕಡಿಮೆ ವಾರ್ಷಿಕ ವಹಿ ವಾಟು ಹೊಂದಿರುವ ಆನ್‌ಲೈನ್ ರಿಟೇಲರ್‌ಗಳು ರಾಜ್ಯದೊಳಗೆ ನಡೆಸುವ ವಹಿವಾಟಿಗೆ ಜಿಎಸ್‌ಟಿ ನೋಂದಣಿ ಮಾಡಬೇಕಾದ ಅಗತ್ಯವಿಲ್ಲ. 2023ರ ಜ. 1ರಿಂದ ಇದು ಜಾರಿಯಾಗಲಿದೆ. ಇದರಿಂದ 1.20 ಲಕ್ಷ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಪ್ರಮುಖ ನಿರ್ಧಾರಗಳು
01 ಸಣ್ಣ ಆನ್‌ಲೈನ್ ವ್ಯಾಪಾರಿಗಳ ನೋಂದಣಿ ಕಡ್ಡಾಯ ನಿಯಮ ರದ್ದು
02 ಜಿಎಸ್‌ಟಿ ಸೆಸ್ ಸಂಗ್ರಹ 2026ರ ವರೆಗೆ ಸಾಲ ಮರುಪಾವತಿಗೆ ಬಳಕೆ
03 ಕೆಲವು ಉತ್ಪನ್ನಗಳ ಜಿಎಸ್‌ಟಿ ದರ ಬದಲಾವಣೆಗೆ ಅಸ್ತು; ಜು. 18ರಿಂದ ಅನ್ವಯ
04 ದರ ಪರಿಷ್ಕರಣೆ ಪರಿಶೀಲಿಸುವ ಸಚಿವರ ಸಮಿತಿಯ ಅವಧಿ 3 ತಿಂಗಳು ವಿಸ್ತರಣೆ
05 ಕ್ಯಾಸಿನೋಗಳ ಮೇಲೆ ತೆರಿಗೆ ಕುರಿತು ಆ. 1ರ ಸಭೆಯಲ್ಲಿ ಚರ್ಚೆ
06 ರಾಜ್ಯದೊಳಗೆ ಚಿನ್ನ ಸಾಗಣೆಗೆ ಇ-ವೇ ಬಿಲ್ ಬಗ್ಗೆ ನಿರ್ಧಾರ ರಾಜ್ಯಗಳಿಗೆ ಬಿಟ್ಟದ್ದು