ಬದುಕುಳಿಯಲಿ ಬಿಎಸ್‌ಎನ್‌ಎಲ್‌

Team Udayavani, Oct 11, 2019, 5:22 AM IST

ಒಂದು ವೇಳೆ ಬಂದ್‌ ಆದರೆ, ಐಟಿಎಸ್‌ ಅಧಿಕಾರಿಗಳಿಗೆ ಉಳಿದ ಸರ್ಕಾರಿ ಕಂಪನಿಗಳಲ್ಲಿ ಸ್ಥಳಾಂತರ ಮಾಡಬಹುದು. ಆದರೆ ಯಾರು ನೇರವಾಗಿ ನೇಮಕವಾಗಿದ್ದಾರೋ, ಅಂದರೆ, ಜ್ಯೂನಿಯರ್‌ ಸ್ತರದಲ್ಲಿದ್ದಾರೋ ಮತ್ತು ಯಾರ ಸಂಬಳ ಕಡಿಮೆಯಿದೆಯೋ ಅವರು ತೊಂದರೆಗೆ ಒಳಗಾಗ
ಬಹುದು . ಅವರ ಪುನಶ್ಚೇತನ ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.

ವರ್ಷಗಳಿಂದ ಆರ್ಥಿಕ ಹಿಂಜರಿತದಿಂದ ನಲುಗುತ್ತಾ, ಈಗ ನೌಕರರಿಗೆ ವೇತನ ಕೊಡುವುದಕ್ಕೂ ಸಾಧ್ಯವಾಗದಂಥ ಪರಿಸ್ಥಿತಿಯಲ್ಲಿ ಸಿಲುಕಿರುವ ಭಾರತ ಸಂಚಾರ ನಿಗಮ ಲಿಮಿಟೆಡ್‌(ಬಿಎಸ್‌ಎನ್‌ಎಲ್‌) ಮತ್ತು ಮಹಾನಗರ ಟೆಲಿಫೋನ್‌ ನಿಗಮ ಲಿಮಿಟೆಡ್‌(ಎಂಟಿಎನ್‌ಎಲ್‌)ಗಳ ಬಾಗಿಲು ಮುಚ್ಚಲಿದೆಯೇ? ಈ ಎರಡೂ ಸಂಸ್ಥೆಗಳಿಗೆ ಇತಿಶ್ರೀ ಹೇಳುವುದೇ ಸೂಕ್ತವೆಂದು ಕೇಂದ್ರ ಹಣಕಾಸು ಇಲಾಖೆ ನಿರ್ಧರಿಸಿದೆ ಎಂದು ಫೈನಾನ್ಶಿಯಲ್‌ ಎಕ್ಸ್‌ಪ್ರಸ್‌ ವರದಿ ಮಾಡಿದೆ. ಆದರೆ ಈ ವಿಚಾರದಲ್ಲಿ ಸರ್ಕಾರದಿಂದ ಅಧಿ ಕೃತವಾಗಿ ಯಾವ ಮಾಹಿತಿಯೂ ಹೊರಬಂದಿಲ್ಲ. ಸರ್ಕಾರ ಈ ಸಂಸ್ಥೆಗಳ ವಿಲೀನ ಮಾಡಲಿದೆಯೇ ಅಥವಾ ಪುನಶ್ಚೇತನ ಪ್ಯಾಕೇಜ್‌ ಘೋಷಿಸಿ ಬಲ ತುಂಬಲಿದೆಯೇ ಎನ್ನುವ ವಿಚಾರದಲ್ಲಿ ಗೊಂದಲವಂತೂ ಮುಂದುವರಿದಿದೆ.

ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳನ್ನು ಮತ್ತೆ ಹಳಿ ಏರಿಸುವುದಕ್ಕಾಗಿ 74 ಸಾವಿರ ಕೋಟಿ ರೂಪಾಯಿಯ ರಿವೈವಲ್‌ ಪ್ಯಾಕೇಜ್‌(ಆರ್ಥಿಕ ನೆರವು) ನೀಡಬೇಕೆಂದು ಡಿಪಾರ್ಟ್‌ಮೆಂಟ್‌ ಆಫ್ ಟೆಲಿಕಮ್ಯುನಿಕೇಷನ್ಸ್‌(ಡಿಓಟಿ) ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವಿಟ್ಟಿತ್ತು. ಈ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿಲ್ಲ. 74 ಸಾವಿರ ಕೋಟಿ ರೂಪಾಯಿ ಆರ್ಥಿಕ ಸಹಾಯ ನೀಡದೇ ಇದ್ದರೆ, ಈ ಸಂಸ್ಥೆಗಳು ಚೇತರಿಸಿಕೊಳ್ಳುವುದು ಕಷ್ಟ. ಈ ಕಾರಣಕ್ಕಾಗಿಯೇ, ಕೂಡಲೇ ಪುನಶ್ಚೇತನ ಪ್ಯಾಕೇಜ್‌ ಘೋಷಿಸಬೇಕೆಂದು ಈ ಸಂಸ್ಥೆಗಳ ನೌಕರರು, ನೌಕರ ಸಂಘಗಳು ಒತ್ತಾಯಿಸುತ್ತಿವೆ. ಹಲವು ತಿಂಗಳಿಂದ ಸಂಬಳವೂ ಬಂದಿಲ್ಲವಾದ್ದರಿಂದ, ಇನ್ನು ತಡಮಾಡಿದರೆ, ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡುತ್ತಿವೆ.

ನಷ್ಟದಲ್ಲೇ ದಿನದೂಡುತ್ತಿರುವ ಬಿಎಸ್‌ಎನ್‌ಎಲ್‌
2018-19ನೇ ಹಣಕಾಸು ವರ್ಷದಲ್ಲಿ ಬಿಎಸ್‌ಎನ್‌ಎಲ್‌ 14,000 ಕೋಟಿ ನಷ್ಟವನ್ನು ದಾಖಲಿಸಿತ್ತು. ಆದಾಯವು 19,308 ಕೋಟಿ ರೂಪಾಯಿಗೆ ಕುಸಿದಿದೆ. ಅದರ ಆದಾಯ 19,308 ಕೋಟಿ ರೂಪಾಯಿಯಷ್ಟು ಇದೆ. ತೀವ್ರ ನಷ್ಟದಲ್ಲಿರುವ ಬಿಎಸ್‌ಎನ್‌ಎಲ…, ಉದ್ಯೋಗಿಗಳಿಗೆ ವೇತನ ಬಿಡುಗಡೆ ಮಾಡಲೂ ಅಶಕ್ತವಾಗಿರುವುದು ದುರಂತ. ಆದಾಯ ಕುಸಿತ ಮತ್ತು ಹೆಚ್ಚುತ್ತಿರುವ ನಷ್ಟಗಳನ್ನು ಸರಿದೂಗಿಸುವ ಜತೆ ಜತೆಗೇ, ಲಕ್ಷಾಂತರ ಜನರಿಗೆ ವೇತನ ಒದಗಿಸುವ ಒತ್ತಡವೂ ಬಿಎಸ್‌ಎನ್‌ಎಲ್‌ ಮೇಲಿದೆ. 2015-16ರಲ್ಲಿ 4,859 ಕೋಟಿ, 2016-17ರಲ್ಲಿ 4,793 ಕೋಟಿ ರೂ., 2017-18ರಲ್ಲಿ 7,993 ಕೋಟಿ ರೂ. ನಷ್ಟವು ದಾಖಲಾಗಿದೆ. ಬಿಎಸ್‌ಎನ್‌ಎಲ್‌ನ ಒಟ್ಟು ಆದಾಯದ ಶೇ. 55ರಷ್ಟು ಮೊತ್ತವು ಸಿಬ್ಬಂದಿ ವೇತನ ಪಾವತಿಗೇ ವಿನಿಯೋಗವಾಗುತ್ತಿದೆ. ವಾರ್ಷಿಕವಾಗಿ ಸಂಸ್ಥೆಯ ವೇತನ ಶುಲ್ಕ 8 ಪ್ರತಿಶತದಷ್ಟು ಹೆಚ್ಚಳವಾಗುತ್ತಿದೆ. ಹೀಗಾಗಿ, ಸರ್ಕಾರದ ನೆರವಿಲ್ಲದೇ ಮತ್ತೆ ಎದ್ದು ನಿಲ್ಲಲು ಆಗದಷ್ಟು ರೋಗಗ್ರಸ್ತವಾಗಿದೆ ಈ ಸಂಸ್ಥೆ.

ನಷ್ಟಕ್ಕೆ ಕಾರಣವೇನು?
2000ನೇ ಇಸವಿಯಲ್ಲಿ ಸ್ಥಾಪನೆಯಾದ ಬಿಎಸ್‌ಎನ್‌ಎಲ್‌, ಇಡೀ ದೇಶದ ಟೆಲಿಕಾಂ ವಲಯದ ಮೇಲೆ ಏಕಸ್ವಾಮ್ಯ ಸಾಧಿಸಿತ್ತು. ಅಲ್ಲಿಂದ 2008ರವರೆಗೂ ಲಾಭದಲ್ಲೇ ಮುಂದುವರಿಯಿತು. ಈ ಸಂಸ್ಥೆ ಮೊದಲು ನಷ್ಟ ಅನುಭವಿಸಿದ್ದು 2009ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಈ ಸಂಸ್ಥೆ ನಷ್ಟದ ಹಾದಿಯಲ್ಲೇ ಸಾಗಿಬಂದಿದೆ.

ಸುಮಾರು ಹತ್ತು ವರ್ಷಗಳಿಂದ ಬಿಎಸ್‌ಎನ್‌ಎಲ್‌ ತೀವ್ರ ನಷ್ಟ ಅನುಭವಿಸುತ್ತಿದೆ. ರವಿಶಂಕರ್‌ ಪ್ರಸಾದ್‌ ದೂರಸಂಪರ್ಕ ಸಚಿವರಾಗಿ¨ªಾಗೊಮ್ಮೆ ತುಸು ಚೇತರಿಕೆಯ ಲಕ್ಷಣ ಕಂಡಿತ್ತಾದರೂ ಇದೀಗ ಮತ್ತೆ ನಷ್ಟದ ಪ್ರಮಾಣ ಹೆಚ್ಚಾಗಿದೆ. ದೂರಸಂಪರ್ಕ ಕ್ಷೇತ್ರಕ್ಕೆ ಖಾಸಗಿ ಕಂಪೆನಿಗಳ ಪ್ರವೇಶವಾದ ಬಳಿಕ ಅದರ ಸ್ಥಿತಿ ಹದಗೆಡಲಾರಂಭಿಸಿತು.

ಅದರಲ್ಲೂ ರಿಲಯನ್ಸ್ ಜಿಯೊ ಪ್ರವೇಶದ ಬಳಿಕ ಬಿಎಸ್‌ಎನ್‌ಎಲ್‌ ಮಾತ್ರವಲ್ಲದೆ ಖಾಸಗಿ ಕಂಪೆನಿಗಳ ಲಾಭಾಂಶವೂ ಕುಸಿಯಿತು. ಆದರೆ ಖಾಸಗಿ ಕಂಪೆನಿಗಳು ತಕ್ಷಣ ಎಚ್ಚೆತ್ತುಕೊಂಡು ಜಿಯೊಗೆ ತಕ್ಕ ಸ್ಪರ್ಧೆ ನೀಡುತ್ತಿವೆ.

ವೇಗದ ಅಂತರ್ಜಾಲ ಸಂಪರ್ಕ, ಸುಲಭ ಪೋರ್ಟೆಬಿಲಿಟಿ, ದರಗಳಲ್ಲಿ ಸ್ಪರ್ಧಾತ್ಮಕತೆ, ಆಕರ್ಷಕ ಟಾಕ್‌ಟೈಮ್‌ಗಳನ್ನು ಅವು ಒದಗಿಸಿವೆ. ಅಲ್ಲದೆ, ಖಾಸಗಿ ಟೆಲಿಫೋನ್‌ ಕಂಪನಿಗಳ ಗ್ರಾಹಕ ಸೇವಾ ವ್ಯವಸ್ಥೆಯಲ್ಲೂ ಶ್ಲಾಘನೀಯ ಸುಧಾರಣೆ ಕಂಡು ಬಂದಿದೆ. ಇನ್ನು ರಿಲಯನ್ಸ್‌ ಜಿಯೋ, ಏರ್‌ಟೆಲ್‌, ಓಡಾಫೋನ್‌ ಐಡಿಯಾ ಕಂಪನಿಗಳು ದೇಶದ 80 ಪ್ರತಿಶತ ಸ್ಪೆಕ್ಷ$óಮ್‌ ಮೇಲೆ ಹಿಡಿತ ಸಾಧಿಸಿವೆ. ಸರ್ಕಾರವು 5ಜಿ ಹರಾಜಿನ ಮೇಲೆ ಕೆಲಸ ಮಾಡುತ್ತಿದ್ದರೆ, ಬಿಎಸ್‌ಎನ್‌ಎಲ್‌ ಇನ್ನೂ 4ಜಿ ಸೇವೆಗಳಲ್ಲಿ ಅಂಬೆಗಾಲಿಡುತ್ತಿದೆೆ. 4ಜಿ ಯನ್ನೇ ಸರಿಯಾಗಿ ತರದೇ, ತಾನು ಅಲ್ಟ್ರಾ ಹೈ ಸ್ಪೀಡ್‌ 5ಜಿ ಸೇವೆಗಳನ್ನು ತರುತ್ತೇನೆ ಎಂದು ಹೇಳಿ ನಗೆಪಾಟಲಿಗೀಡಾಗಿದ್ದೂ ಸುಳ್ಳಲ್ಲ.

ಎಂಟಿಎನ್‌ಎಲ್‌ನಲ್ಲಿ 22 ಸಾವಿರ ನೌಕರರು
ಎಂಟಿಎನ್‌ಎಲ್‌ನಲ್ಲಿ ಸದ್ಯಕ್ಕೆ 22 ಸಾವಿರ ಉದ್ಯೋಗಿಗಳಿದ್ದು, ಈ ಕಂಪನಿ ಅಜಮಾಸು 19 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದೆ. ಈ ಕಂಪನಿಯು ತನ್ನ 75 ಪ್ರತಿಶತ ಆದಾಯವನ್ನು ಉದ್ಯೋಗಿಗಳಿಗೆ ವೇತನ ಕೊಡುವುದಕ್ಕೇ ಖರ್ಚು ಮಾಡುತ್ತದೆ!

ಕಷ್ಟದಲ್ಲಿ ಭವಿಷ್ಯ
ಬಿಎಸ್‌ಎನ್‌ಎಲ್‌ನಲ್ಲಿನ 1.76 ಲಕ್ಷ ಹಾಗೂ ಎಂಟಿಎನ್‌ಎಲ್‌ ಲಿಮಿಟೆಡ್‌ನಲ್ಲಿನ 22 ಸಾವಿರ ಉದ್ಯೋಗಿಗಳಿದ್ದಾರೆ. ಸರ್ಕಾರ ಈ ಸಂಸ್ಥೆಗಳನ್ನು ಮುಚ್ಚಬಹುದು ಎಂಬ ಸುದ್ದಿಗಳು ಹರಿದಾಡುತ್ತಿರುವುದರಿಂದ, ಸಹಜವಾಗಿಯೇ ನೌಕರರ
ಭವಿಷ್ಯದ ಬಗ್ಗೆ ಆತಂಕದ ಆರಂಭವಾಗಿದೆ.

ಬಾಗಿಲು ಮುಚ್ಚಿದರೂ ಖರ್ಚು ಹೆಚ್ಚು
ಎರಡೂ ಟೆಲಿಕಾಂ ಕಂಪನಿಗಳನ್ನು ಬಂದ್‌ ಮಾಡಿದರೂ, ಸರ್ಕಾರದ ಮೇಲಿನ ಹೊರೆಯೇನೂ ತಗ್ಗುವುದಿಲ್ಲ. ಏಕೆಂದರೆ. ವಿಆರ್‌ಎಸ್‌, ಬಾಕಿ ವೇತನ, ಸಾಲ ಮರುಪಾವತಿ ಸೇರಿದಂತೆ ಏನಿಲ್ಲವೆಂದರೂ 95 ಸಾವಿರ ಕೋಟಿ ರೂಪಾಯಿ ಖರ್ಚು ಬರುತ್ತದೆ. ಈ ಮೊತ್ತವು ಪುನಶ್ಚೇತನ ಪ್ಯಾಕೇಜ್‌ಗಿಂತಲೂ 20 ಸಾವಿರ ಕೋಟಿ ಅಧಿಕ ಎನ್ನುವುದು ಗಮನಾರ್ಹ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ