‘ಮೂಲಸೌಕರ್ಯ’ಕ್ಕೆ 100 ಲಕ್ಷ ಕೋಟಿಯ ಪ್ಯಾಕೇಜ್‌

Team Udayavani, Dec 2, 2019, 7:11 AM IST

ಹೊಸದಿಲ್ಲಿ: ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಸುಮಾರು 100 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಕೇಂದ್ರ ಸರಕಾರ ಸದ್ಯದಲ್ಲೇ ಪ್ರಕಟಿಸಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಮುಂಬಯಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ವಿಷಯ ತಿಳಿಸಿದ ಅವರು, ‘ಯೋಜನೆಗಳ ರೂಪುರೇಷೆ ತಯಾರಿಕೆ ಯಲ್ಲಿ ಈಗಾಗಲೇ ಇಲಾಖೆಗಳ ಅಧಿಕಾರಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮತ್ತೂಂದೆಡೆ, ಯೋಜನೆಗಳಿಗೆ ತಗಲುವ ವೆಚ್ಚದ ಕ್ರೋಡೀಕರಣದ ಕೆಲಸವೂ ಸಾಗುತ್ತಿದೆ. ಇದೆಲ್ಲವೂ ಪೂರ್ತಿಯಾದ ಮೇಲೆ ಯೋಜನೆಗಳ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ. ಡಿ. 15ರ ಹೊತ್ತಿಗೆ, ಕನಿಷ್ಠ 10 ಯೋಜನೆಗಳನ್ನಾದರೂ ಪ್ರಕಟಿಸುವ ಇರಾದೆ ನಮ್ಮದು” ಎಂದು ಹೇಳಿದರು.

ಶುಕ್ರವಾರವಷ್ಟೇ, ಜಿಡಿಪಿಯ (ಒಟ್ಟು ರಾಷ್ಟ್ರೀಯ ಉತ್ಪನ್ನ) ಪ್ರಗತಿ ದರವನ್ನು ಕೇಂದ್ರ ಬಿಡುಗಡೆ ಮಾಡಿದ್ದು, ಶೇ. 4.5 ಎಂದು ಹೇಳಿತ್ತು. ಇದು, 2013ರ ನಂತರ ದೇಶ ಕಂಡ ಅತಿ ಕನಿಷ್ಠ ಮಟ್ಟದ ಜಿಡಿಪಿ ಎಂದು ಆರ್ಥಿಕ ತಜ್ಞರು ಬಣ್ಣಿಸಿದ್ದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರಮುಖ ಕ್ಷೇತ್ರಗಳ ಸುಧಾರಣೆಗೆ ಸರಕಾರ ಬೇಗನೇ ಮುಂದಾಗಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ, ಮೂಲಸೌಕರ್ಯ ಕ್ಷೇತ್ರಕ್ಕೆ 100 ಲಕ್ಷ ಕೋಟಿ ರೂ.ಗಳ ಉತ್ತೇಜಕ ಪ್ಯಾಕೇಜ್‌ ನೀಡಲು ಕೇಂದ್ರ ಮುಂದಾಗಿದೆ ಎಂದು ಅಂದಾಜಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ