ಮಾರುತಿ ಸುಜುಕಿಯ ನೂತನ ಸಿಯಾಝ್ ಝೇಟಾ, ಆಲ್ಫಾ ಕಾರುಗಳು ವಾಪಸ್
Team Udayavani, Nov 12, 2018, 3:58 PM IST
ನವದೆಹಲಿ: ದೇಶದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ನೂತನ ಸಿಯಾಝ್ ಡೀಸೆಲ್ ಕಾರುಗಳಲ್ಲಿನ ಸ್ಪೀಡೋಮೀಟರ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಪಸ್ ಪಡೆಯುವುದಾಗಿ ಸೋಮವಾರ ತಿಳಿಸಿದೆ.
2018ರ ಆಗಸ್ಟ್ 1ರಿಂದ ಸೆಪ್ಟೆಂಬರ್ 21ರವರೆಗೆ ತಯಾರಿಸಲ್ಪಟ್ಟ ಸಿಯಾಝ್ ಡೀಸೆಲ್ ಝೇಟಾ ಮತ್ತು ಸಿಯಾಝ್ ಆಲ್ಫಾ ವೆರಿಯಂಟ್ ನ ಕಾರುಗಳನ್ನು ವಾಪಸ್ ಪಡೆಯುವುದಾಗಿ ಮಾರುತಿ ಸುಜುಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಸಿಯಾಝ್ ಡೀಸೆಲ್ ಝೇಟಾ ಮತ್ತು ಆಲ್ಫಾ ಕಾರುಗಳ ಸ್ಪೀಡೋ ಮೀಟರ್ ಅನ್ನು ಪರಿಶೀಲಿಸಿ, ದೋಷ ಕಂಡು ಬಂದರೆ ಅದನ್ನು ಉಚಿತವಾಗಿ ಬದಲಾಯಿಸಿಕೊಡುವುದಾಗಿ ಘೋಷಿಸಿದೆ.
ಸಿಯಾಝ್ ಕಾರುಗಳ ಸ್ಪೀಡೋಮೆಟ್ರೋದ ದೋಷದ ಕುರಿತು ಸುಮಾರು 800 ಯೂನಿಟ್ ಗಳಲ್ಲಿ ಮಾರುತಿ ಕಂಪನಿ ಅಕ್ಟೋಬರ್ 29ರಿಂದ ಗ್ರಾಹಕರಿಗೆ ಮಾಹಿತಿ ಕೊಡುವ ಕಾರ್ಯಕ್ರಮ ಆರಂಭಿಸಿತ್ತು.
ಮಾರುತಿ ಬಹು ನಿರೀಕ್ಷಿತ ಸಿಯಾಝ್ ಕಾರುಗಳನ್ನು ಪರಿಚಯಿಸಿತ್ತು. ಜನಪ್ರಿಯ ಮಧ್ಯಮ ಗಾತ್ರದ ಸೆಡಾನ್ ಕಾರಿನ ನೂತನ ಆವೃತ್ತಿಯ ಸಿಯಾಝ್ ಮತ್ತು ಆಲ್ಫಾ ಕಾರುಗಳನ್ನು ಬಿಡುಗಡೆಗೊಳಿಸಿದಾಗ ಭರ್ಜರಿ ಮಾರಾಟ ಕಂಡಿತ್ತು.