ಪಾರ್ಲೆ, ಬ್ರಿಟಾನಿಯಾ ಬಿಸ್ಕೆಟ್‌ ಬೆಲೆ ಶೀಘ್ರ ಏರಲಿದೆ ; ಗಾತ್ರ ಕುಗ್ಗಲಿದೆ!

Team Udayavani, Nov 22, 2019, 5:18 PM IST

ಮುಂಬಯಿ: ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶೀಘ್ರ ಪಾರ್ಲೆ ಮತ್ತು ಬ್ರಿಟಾನಿಯಾ ಬಿಸ್ಕೆಟ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುವ ಈ ಬಿಸ್ಕೆಟ್‌ಗಳ ಕಚ್ಚಾವಸ್ತುಗಳ ಬೆಲೆ ಶೇ.6ರಷ್ಟು ಏರಿಕೆ ಕಂಡಿದ್ದರಿಂದ ಬೆಲೆ ಏರಿಕೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಕಂಪೆನಿಗಳು ಬಂದಿವೆ ಅಲ್ಲದೇ ಮುಂದಿನ ದಿನಗಳಲ್ಲಿ ಇವುಗಳ ಪ್ಯಾಕ್‌ಗಳ ಗಾತ್ರವೂ ಸಣ್ಣದಾಗಲಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ಕಂಪೆನಿಗಳು ತೆಗೆದುಕೊಂಡಿಲ್ಲ.

ಬಿಸ್ಕೆಟ್‌ ತಯಾರಿಕೆಗೆ ಬೇಕಾದ, ಮೈದಾ, ಸಕ್ಕರೆ, ಅಡುಗೆ ಎಣ್ಣೆ ಬೆಲೆ ಏರಿಕೆ ಕಂಡಿದೆ ಎಂದು ಮೂಲಗಳನ್ನುದ್ದೇಶಿಸಿ ಸಿಎನ್‌ಬಿಸಿ ಟಿವಿ 18 ವರದಿ ಮಾಡಿದೆ. ಮೂಲಗಳ ಪ್ರಕಾರ, ಜನವರಿ-ಮಾರ್ಚ್‌ನಿಂದ ಹೊಸ ದರಗಳು ಅನ್ವಯವಾಗಲಿವೆ. ಪಾರ್ಲೆ ಶೇ.5ರಿಂದ ಶೇ.6ರಷ್ಟು, ಬ್ರಿಟಾನಿಯಾ ಶೇ.3ರಷ್ಟು ಬೆಲೆ ಏರಿಸುವ ಇಂಗಿತವನ್ನು ಹೊಂದಿದೆ.

ಪಾರ್ಲೆ ತನ್ನ ಉತ್ಪನ್ನವಾದ ಪಾರ್ಲೆಜಿ ಮಾತ್ರವಲ್ಲದೆ ಪ್ರೀಮಿಯಂ ಬಿಸ್ಕೆಟ್‌ಗಳ ಬೆಲೆಯನ್ನೂ ಏರಿಸುವ ಉದ್ದೇಶ ಹೊಂದಿದೆ. ದೊಡ್ಡ ಪ್ಯಾಕ್‌ ಬಿಸ್ಕೆಟ್‌ಗಳಲ್ಲಿ ಬೆಲೆ ಏರಿಕೆ ದಾಖಲಾದರೆ ಸಣ್ಣ ಪ್ಯಾಕ್‌ ಬಿಸ್ಕೆಟ್‌ಗಳಿಗೆ ಬೆಲೆ ಏರಿಕೆಯೊಂದಿಗೆ ಕೆಲವು ಗ್ರಾಂ ಬಿಸ್ಕೆಟ್‌ ಕಡಿಮೆಯಾಗಲಿದೆ ಎಂದು ಕಂಪೆನಿ ಮೂಲಗಳು ಹೇಳಿವೆ.

ಈ ಮೊದಲು ಈ ಎರಡೂ ಕಂಪೆನಿಗಳು ಅತಿ ಹೆಚ್ಚಿನ ಜಿಎಸ್ಟಿ ದರದಿಂದಾಗಿ ನಷ್ಟವನ್ನು ಅನುಭವಿಸುತ್ತಿರುವುದಾಗಿ ಹೇಳಿದ್ದವು. ಜತೆಗೆ ಜಿಎಸ್‌ಟಿಯನ್ನು ಕಡಿಮೆ ಮಾಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದವು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ