ಜಿಯೋ ಕರೆ ದರ ಕಿರಿಕಿರಿ : ಪರಸ್ಪರ ಕಾಲೆಳೆದುಕೊಳ್ಳುತ್ತಿರುವ ಮೊಬೈಲ್ ಕಂಪೆನಿಗಳು!

Team Udayavani, Oct 13, 2019, 8:00 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಭಾರತದ ದೂರಸಂಪರ್ಕ ಕ್ಷೇತ್ರ 4ಜಿ ಗೆ ತೆರೆದುಕೊಂಡಾಗಿನಿಂದ ಮೊಬೈಲ್‌ ಕಂಪೆನಿಗಳು ಡಾಟಾಗಳನ್ನು ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಾ ಬಂದಿವೆ. ತೀವ್ರ ಪೈಪೋಟಿ ಏರ್ಪಟ್ಟಾಗ ವಿಶೇಷವಾದ ಸ್ಕೀಂಗಳನ್ನು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿತ್ತು. ಆದರೆ ರಿಲಾಯನ್ಸ್ ಕಂಪೆನಿ ಜಿಯೋ ಬಂದ ಬಳಿಕ ಉಳಿದ ಮೊಬೈಲ್‌ ನೆಟ್‌ ವರ್ಕ್‌ ಪೂರೈಕೆದಾರರು ನಷ್ಟದ ಹಾದಿ ಹಿಡಿದಿದ್ದರು. ಯಾವುದೇ ಯೋಜನೆಯನ್ನು ಜಾರಿಗೆ ತಂದರೂ ಗ್ರಾಹಕರು ಮಾತ್ರ ಆಕರ್ಷಿತರಾಗುತ್ತಿರಲಿಲ್ಲ. ಇದರಿಂದ ಹೈರಾಣರಾದ ಕೆಲವು ಮೊಬೈಲ್ ಸಂಸ್ಥೆಗಳು ಜತೆಗೂಡಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದರೆ, ಕೆಲವು ನೆಟ್‌ವರ್ಕ್‌ ಪೂರೈಕೆದಾರರು ಗ್ರಾಹಕರಿಗಾಗಿ ಮತ್ತೂ ಅಗ್ಗದ ಯೋಜನೆಗಳನ್ನು ನೀಡಲಾರಂಭಿಸಿದ್ದರು.

ಜಿಯೋ ನೆಟ್ ವರ್ಕ್ ಇದೀಗ ಅಕ್ಟೋಬರ್‌ ತಿಂಗಳ 9ರ ಬಳಿಕ ರಿಚಾರ್ಚ್‌ ಮಾಡಿಕೊಳ್ಳುವವರಿಗೆ ಯೋಜನೆಯನ್ನು ಬದಲಾಯಿಸಿದೆ. ಜಿಯೋ ಸಂಖ್ಯೆ ಹೊರತುಪಡಿಸಿದ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡಿದರೆ 6 ಪೈಸೆಯನ್ನು ಚಾರ್ಜ್‌ ಮಾಡಲಾಗುತ್ತದೆ. ಇದು ಪರೋಕ್ಷವಾಗಿ ಜಿಯೋ ಟು ಜಿಯೋ ಗ್ರಾಹಕರಿಗೆ ಮಾತ್ರ ಅನುಕೂಲಮಾಡಿಕೊಡುತ್ತದೆ.

ಜಿಯೋದ ಈ ಹೊಸ ನಿಯಮ ಸದ್ಯ ಗ್ರಾಹಕರಿಗೆ ಕಿರಿಕಿರಿ ಉಂಟುಮಾಡಿದೆ. ಇದರ ಜತೆಗೆ ಉಳಿದ ನೆಟ್‌ವರ್ಕ್‌ ಪೂರೈಕೆದಾರರು ಕೊಂಚ ನಿರಾಳರಾಗಿರುವಂತಯೆ ಕಂಡುಬರುತ್ತಿದ್ದಾರೆ. ಜಿಯೋದ ಈ ಒಂದು ನಡೆಯನ್ನು ಏರ್‌ಟೆಲ್‌, ವಡಪೋನ್‌ ಹಾಗೂ ಐಡಿಯಾ ಪರಸ್ಪರ ಟ್ರೋಲ್‌ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ. ಯಾವ ನೆಟ್‌ವರ್ಕ್‌ ಬಳಸಿ ಜನರು ಮನರಂಜನೆಗಾಗಿ ಸಮಾಜದ ಹಾಗು ಹೋಗುಗಳನ್ನು ಟ್ರೋಲ್‌ ಮಾಡಲು ಆರಂಭಿಸಿದರೋ, ಇಂದು ನೆಟ್‌ ವರ್ಕ್‌ಗಳು ಮತ್ತೂಂದು ನೆಟ್‌ವರ್ಕ್‌ ಅನ್ನು ಟ್ರೋಲ್‌ ಮೂಲಕ ಟಾಂಗ್‌ ಕೊಡುತ್ತಿದೆ.

ಏರ್‌ ಟೆಲ್‌ ಏನು ಹೇಳಿತು?
ಏರ್‌ಟೆಲ್‌ ಹೊಸ ಮಾರ್ಕೆಟಿಂಗ್‌ ಯೋಜನೆ ಹಾಕಿಕೊಂಡಿದ್ದು ಪರೋಕ್ಷವಾಗಿ ಜಿಯೋದ ಕಾಲೆಳೆದಿದೆ. “ಕೆಲವರಿಗೆ ಅನಿಯಮಿತ ಎಂದರೆ ಬೇರೇನೋ ಅರ್ಥ ಇದ್ದಂತಿದೆ. ಆದರೆ ನಮಗೆ (ಏರ್‌ಟೆಲ್‌) “ಅನ್‌ಲಿಮಿಟೆಡ್‌ ವಾಯ್ಸ ಕಾಲ್‌’ ಎಂದರೆ ಗ್ರಾಹಕರು ಯಾವುದೇ ಸಂಖ್ಯೆಗೆ ಉಚಿತವಾಗಿ ಕರೆ ಮಾಡುವುದೇ ಆಗಿದೆ. ಏರ್‌ಟೆಲ್‌ಗೆ ಬದಲಾಯಿಸಿಕೊಳ್ಳಿ’ ಎಂದು ಹೇಳಿದೆ.


ವೊಡಾಫೋನ್‌ ಏನಂದಿತು?
“ರಿಲ್ಯಾಕ್ಸ್‌, ನಮ್ಮ ಕಡೆಯಿಂದ ಅನ್‌ ಲಿಮಿಡೆಟ್‌ ಕರೆಗಳು ಯಾವುದೇ ಷರತ್ತಿಲ್ಲದೆ ಮುಂದುವರಿಯಲಿದೆ. ನಾವೂ ಈಗಾಗಲೇ ನೀಡಿದ ಭರವಸೆಯಂತೆ ಅದನ್ನು ಅನುಭವಿಸಿ’ ಎಂದು ವೊಡಾಪೋನ್‌ ಹೇಳಿದೆ.

ತಾನು ಈಗಾಗಲೇ ಜಾರಿಗೊಳಿಸಿದ ಪರಿಷ್ಕೃತ ಯೋಜನೆಯನ್ನು ಜಿಯೋ ಸಮರ್ಥಿಸಿ ಟ್ವೀಟ್‌ ಮಾಡಿದೆ. ನಿಮಿಷಕ್ಕೆ 6 ಪೈಸೆಯನ್ನು “ಏರ್‌ ಟೋಲ್‌’ ಎಂದು ಅದು ಹೇಳಿದೆ. ಬೇರೆ ನೆಟ್‌ ವರ್ಕ್‌ಗಳಿಗೆ ಮಾಡುವ ಕರೆಗೆ ಟ್ರಾಯ್‌ ನಿಯಮದಂತೆ “ಇಂಟರ್‌ ಕನೆಕ್ಟ್ ಯೂಸೇಜ್‌ ಚಾರ್ಜ್‌’ (ಐಯುಸಿ) ವಿಧಿಸಬಹುದಾಗಿದೆ ಎಂದು ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ