ಶೇರು ಮಾರುಕಟ್ಟೆಗೆ ಕಹಿಯಾದ ಬಜೆಟ್‌: ಸೆನ್ಸೆಕ್ಸ್‌ 794, ನಿಫ್ಟಿ 253 ಅಂಕ ಕುಸಿತ

Team Udayavani, Jul 8, 2019, 4:04 PM IST

ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿ ತೋರಿ ಬಂದ ಭರಾಟೆಯ ಶೇರು ಮಾರಾಟ ವಿದ್ಯಮಾನವನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾಗಿ ದಿನದ ವಹಿವಾಟನ್ನು 792.82 ಅಂಕಗಳ ಭಾರೀ ನಷ್ಟದೊಂದಿಗೆ 38,720.57 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 252.55 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 11,558.60 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ತೀವ್ರ ಮಾರಾಟ ಒತ್ತಡ ಅನುಭವಿಸಿ ಟಾಪ್‌ ಲೂಸರ್‌ ಎನಿಸಿಕೊಂಡ ಬಜಾಜ್‌ ಫಿನಾನ್ಸ್‌, ಒಎನ್‌ಜಿಸಿ, ಹೀರೋ ಮೋಟೋ ಕಾರ್ಪ್‌, ಮಾರುತಿ, ಎಲ್‌ ಆ್ಯಂಡ್‌ ಟಿ, ಎನ್‌ಟಿಪಿಸಿ, ಎಸ್‌ಬಿಐ, ಟಾಟಾ ಮೋಟರ್‌, ಎಕ್ಸಿಸ್‌ ಬ್ಯಾಂಕ್‌ ಶೇರುಗಳು ಶೇ.9ರಷ್ಟು ಕುಸಿದವು.

ಹಾಗಿದ್ದರೂ ಎಸ್‌ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌, ಟಿಸಿಎಸ್‌, ಟೆಕ್ಕೆಮ್‌, ಮಹೀಂದ್ರ, ಇನ್‌ಫೋಸಿಸ್‌ ಶೇರುಗಳು ಶೇ.5ರ ಏರಿಕೆಯನ್ನು ಕಂಡವು.

ಕಳೆದ ಶುಕ್ರವಾರದ ವಹಿವಾಟನ್ನು ಸೆನ್ಸೆಕ್ಸ್‌ 394.67 ಅಂಕಗಳ ನಷ್ಟದಲ್ಲೂ ನಿಫ್ಟಿ 135.60 ಅಂಕಗಳ ನಷ್ಟದಲ್ಲೂ ಕೊನೆಗೊಳಿಸಿದ್ದವು.

ಡಾಲರ್‌ ಎದುರು ರೂಪಾಯಿ ಇಂದು ಒಂದೇ ದಿನ 30 ಪೈಸೆಗಳ ಕುಸಿತವನ್ನು ಕಂಡು 68.72 ರೂ. ಮಟ್ಟಕ್ಕೆ ಜಾರಿತು.

ಕಳೆದ ವಾರಾಂತ್ಯ ಕೇಂದ್ರ ಸರಕಾರ ಮಂಡಿಸಿದ್ದ 2019ರ ಬಜೆಟ್‌ ನಲ್ಲಿ ವಿದೇಶೀ ಶೇರು ಹೂಡಿಕೆದಾರರ ಮತ್ತು ಹೈ ನೆಟ್‌ವರ್ತ್‌ ವಹಿವಾಟುದಾರರ ಮೇಲೆ ಅತ್ಯಧಿಕ ತೆರಿಗೆ ಹೇರಿರುವುದು ಶೇರು ಮಾರುಕಟ್ಟೆಗೆ ಅಪಥ್ಯವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,669 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 570 ಶೇರುಗಳು ಮುನ್ನಡೆ ಸಾಧಿಸಿದವು; 1,954 ಶೇರುಗಳು ಹಿನ್ನಡೆಗೆ ಗುರಿಯಾದವು; 145 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ