ಅಮೆರಿಕ ಫೆಡ್‌ ಯಥಾವತ್‌ ನಿಲುವಿನಿಂದ ಜಾಗತಿಕ ತೇಜಿ: ಸೆನ್ಸೆಕ್ಸ್‌ 489 ಅಂಕ ಜಿಗಿತ

Team Udayavani, Jun 20, 2019, 5:32 PM IST

ಮುಂಬಯಿ : ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ತನ್ನ ಪ್ರಮುಖ ಬಡ್ಡಿ ದರಗಳನ್ನು ಯಥಾವತ್‌ ಉಳಿಸಿಕೊಂಡಿರುವ ಕಾರಣ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೇಜಿ ಕಂಡು ಬಂದಿದೆ.

ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ  489.89 ಅಂಕಗಳ ಭಾರೀ ಜಿಗಿತದೊಂದಿಗೆ 39,601.63 ಅಂಕಗಳ ಮಟ್ಟದಲ್ಲಿ ಇಂದು ಗುರುವಾರದ ವಹಿವಾಟನ್ನು ಕೊನೆಗೊಳಿಸಿದೆ.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 140.30 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 140.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಡಾಲರ್‌ ಎದರು ರೂಪಾಯಿ ಇಂದು ಗುರುವಾರ 11 ಪೈಸೆಗಳ ಜಿಗಿತವನ್ನು ದಾಖಲಿಸಿ 63.47 ರೂ ಮಟ್ಟಕ್ಕೇರಿರುವುದು ಕೂಡ ಶೇರು ಮಾರುಕಟ್ಟೆಗೆ ವಿಶೇಷ ಹುರುಪು ನೀಡಿತು.

ಇಂದಿನ ವಹಿವಾಟಿನಲ್ಲಿ ಶೇ.10.94 ಏರಿಕೆಯನ್ನು ಕಂಡ ಎಸ್‌ ಬ್ಯಾಂಕ್‌ ಶೇರು ಅತೀ ದೊಡ್ಡ ಗೇನರ್‌ ಎನಿಸಿಕೊಂಡಿತು.

ಉಳಿದಂತೆ ಸನ್‌ ಫಾರ್ಮಾ, ಇಂಡಸ್‌ ಇಂಡ್‌ ಬ್ಯಾಂಕ್‌, ಎಲ್‌ ಆ್ಯಂಡ್‌ ಟಿ, ಐಸಿಐಸಿಐ ಬ್ಯಾಂಕ್‌, ಮಾರುತಿ, ಬಜಾಜ್‌ ಆಟೋ, ಟಾಟಾ ಮೋಟರ್‌ ಮತ್ತು ಒಎನ್‌ಜಿಸಿ ಶೇರುಗಳು ಶೇ.4.01ರ ಏರಿಕೆಯನ್ನು ಕಂಡವು.

ಹಾಗಿದ್ದರೂ ಎಚ್‌ಯುಎಲ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಐಟಿಸಿ, ಎನ್‌ಟಿಪಿಸಿ ಶೇರುಗಳು ಶೇ.0.26ರ ಇಳಿಕೆಯನ್ನು ಕಂಡವು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,680 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,507 ಶೇರುಗಳು ಮುನ್ನಡೆ ಸಾಧಿಸಿದವು; 1,306 ಶೇರುಗಳು ಹಿನ್ನಡೆಗೆ ಗುರಿಯಾದವು; 137 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ