ಷೇರು ಮಾರುಕಟ್ಟೆ ಹಾವು ಏಣಿ ಆಟ!ಹೂಡಿಕೆದಾರರಿಗೆ 2.72 ಲಕ್ಷ ಕೋಟಿ ನಷ್ಟ
Team Udayavani, Sep 18, 2018, 6:32 PM IST
ನವದೆಹಲಿ:ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯ ಹಾಗೂ ಅಮೆರಿಕ-ಚೀನಾ ನಡುವಿನ ತೆರಿಗೆ ಗುದ್ದಾಟದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಂಬೈ ಷೇರು ಸೂಚ್ಯಂಕ ಭಾರೀ ಕುಸಿತ ಕಂಡ ಪರಿಣಾಮ ಶೇರು ಹೂಡಿಕೆದಾರರು ಬರೋಬ್ಬರಿ 2.72 ಲಕ್ಷ ಕೋಟಿ ನಷ್ಟ ಅನುಭವಿಸಿರುವುದಾಗಿ ವರದಿ ತಿಳಿಸಿದೆ.
ಮಂಗಳವಾರವೂ ಕೂಡಾ ಕಚ್ಚಾತೈಲ ಬೆಲೆ ಏರಿಕೆಯ ಪರಿಣಾಮವಾಗಿ ಷೇರು ಮಾರುಕಟ್ಟೆ ಬಿಎಸ್ ಇ ಸೆನ್ಸೆಕ್ಸ್ 295 ಅಂಕ ಕುಸಿದು 37.920.67ರಲ್ಲಿ ವಹಿವಾಟು ಅಂತ್ಯಗೊಂಡಿದೆ.
ಸೋಮವಾರವೂ ಕೂಡಾ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 505 ಅಂಕ ಕುಸಿದು 37,548ರಲ್ಲಿ ವಹಿವಾಟು ಕೊನೆಗೊಂಡಿತ್ತು. ಇದೇ ರೀತಿ ರೂಪಾಯಿ ಮೌಲ್ಯವು ಡಾಲರ್ ಎದುರು 69 ಪೈಸೆಯಷ್ಟು ಕುಸಿದು 72.55 ರೂ.ನಲ್ಲಿ ಅಂತ್ಯಗೊಂಡಿತ್ತು. ಮಂಗಳವಾರವೂ ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ.
ಎಸ್ ಬಿಐ, ಟಾಟಾ ಮೋಟಾರ್ಸ್, ಬಜಾಜ್ ಆಟೋ ಮತ್ತು ಆ್ಯಕ್ಸಿಸ್ ಬ್ಯಾಂಕ್ ಶೇರು ನಷ್ಟವನ್ನು ಅನುಭವಿಸಿದವು. ಕಳೆದ ಎರಡು ದಿನಗಳ ಷೇರು ಮಾರುಕಟ್ಟೆ ನಷ್ಟದಿಂದಾಗಿ ಷೇರುದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.