ಎರಿಕ್ಸನ್ಗೆ 453 ಕೋಟಿ ಪಾವತಿ: ಅನಿಲ್ ಅಂಬಾನಿ ವಿರುದ್ಧ ಕೋರ್ಟ್ ನಿಂದನೆ ಕ್ರಮ ಇಲ್ಲ
Team Udayavani, May 1, 2019, 10:59 AM IST
ಹೊಸದಿಲ್ಲಿ : ರಿಲಯನ್ಸ್ ಕಮ್ಯುನಿಕೇಶನ್ ಅಧ್ಯಕ್ಷ ಅನಿಲ್ ಅಂಬಾನಿ ಅವರು ಎರಿಕ್ಸನ್ ಇಂಡಿಯಾ ಕಂಪೆನಿಗೆ ಬಾಕಿ ಇರಿಸಿದ್ದ 453 ಕೋಟಿ ರೂ. ಪಾವತಿಸಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಅವರ ವಿರುದ್ಧದ ಕೋರ್ಟ್ ನಿಂದನೆಯ ಕಾನೂನು ಕ್ರಮವನ್ನು ಕೈಬಿಟ್ಟಿದೆ.
ಅನಿಲ್ ಅಂಬಾನಿ ಅವರಿಗೆ ಸರಿಯಾದ ಹೊತ್ತಿನಲ್ಲಿ ಅವರ ಹಿರಿಯ ಸಹೋದರ ಮುಕೇಶ್ ಅಂಬಾನಿ ಅವರು ನೆರವಾದ ಕಾರಣ ಕಳೆದ ಮಾರ್ಚ್ನಲ್ಲಿ ಅನಿಲ್ ಅವರು ಎರಿಕ್ಸನ್ ಕಂಪೆನಿಗೆ 453 ಕೋಟಿ ರೂ. ಬಾಕಿಯನ್ನು ಸಂದಾಯ ಮಾಡುವುದು ಸಾಧ್ಯವಾಗಿತ್ತು.
ರಿಲಯನ್ಸ್ ಕಮ್ಯುನಿಕೇಶನ್ ಕಂಪೆನಿ ತನ್ನ ಸೊತ್ತುಗಳನ್ನು ರಿಲಯನ್ಸ್ ಜಿಯೋ ಕಂಪೆನಿಗೆ ಮಾರಿದ ಬಳಿಕವೂ ಕೋರ್ಟ್ ಆದೇಶದ ಪ್ರಕಾರ ಬಾಕಿ ಮೊತ್ತ 550 ಕೋಟಿ ರೂ. ತನಗೆ ಪಾವತಿಸಿಲ್ಲ ಎಂದು ದೂರಿ ಎರಿಕ್ಸನ್ ಕಂಪೆನಿಯು ಅನಿಲ್ ಅಂಬಾನಿ ವಿರುದ್ಧ ಮಾತ್ರವಲ್ಲದೆ ರಿಲಯನ್ಸ್ ಟೆಲಿಕಾಂ ಅಧ್ಯಕ್ಷ ಸತೀಶ್ ಸೇಥ್ ಮತ್ತುರಿಲಯನ್ಸ್ ಇನ್ಫ್ರಾಟೆಲ್ ಅಧ್ಯಕ್ಷ ಛಾಯಾ ವೀರಾನಿ ವಿರುದ್ಧವೂ ಕೋರ್ಟ್ ನಿಂದನೆ ದಾವೆಯನ್ನು ದಾಖಲಿಸಿತ್ತು.