ಬ್ಲ್ಯಾಕ್‌ಬೆಲ್ಟ್ ಸಂಸದ ಯಾರು? ರಾಹುಲ್ ಕುರಿತ ಪ್ರಶ್ನೆಗೆ ತೇಜಸ್ವಿ ಸೂರ್ಯ ಟ್ವೀಟ್
Team Udayavani, Nov 2, 2019, 8:37 PM IST
ನವದೆಹಲಿ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡುತ್ತಿರುವ “ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಕೇಳಲಾಗಿದ್ದ ಪ್ರಶ್ನೆಯೊಂದು ದೇಶದ ಗಮನ ಸೆಳೆದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಟ್ವೀಟರ್‌ನಲ್ಲಿ ಅದಕ್ಕೆ ನೀಡಿದ ಉತ್ತರವೂ ಮೆಚ್ಚುಗೆ ಗಳಿಸಿದೆ.
ಉತ್ತರ ಪ್ರದೇಶದ ಮಥುರಾ ನಿವಾಸಿ ನರೇಂದ್ರ ಕುಮಾರ್ 6.40 ಲಕ್ಷ ರೂ. ಗೆಲ್ಲಲಿದ್ದ ಪ್ರಶ್ನೆಯೊಂದನ್ನು ಅಮಿತಾಭ್ ಕೇಳಿದ್ದರು. “17ನೇ ಲೋಕಸಭಾ ಸದಸ್ಯರ ಪೈಕಿ ಜಪಾನ್‌ನ ಸಮರ ಕಲೆಯಾಗಿರುವ ಅಕಿಡೋದಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದವರು ಯಾರು?’ ಎಂಬುದೇ ಆ ಪ್ರಶ್ನೆಯಾಗಿತ್ತು. ಅದಕ್ಕೆ ಗೌತಮ್ ಗಂಭೀರ್, ರಾಹುಲ್ ಗಾಂಧಿ, ಅನುರಾಗ್ ಠಾಕೂಕ್ ಮತ್ತು ತೇಜಸ್ವಿ ಸೂರ್ಯ ಎಂಬ ನಾಲ್ಕು ಉತ್ತರಗಳ ಆಯ್ಕೆ ನೀಡಲಾಗಿತ್ತು.
ನರೇಂದ್ರ ಕುಮಾರ್ ಅವರು ಈ ಪ್ರಶ್ನೆಗೆ “ತೇಜಸ್ವಿ ಸೂರ್ಯ’ ಎಂದು ಉತ್ತರಿಸಿದ್ದರು. ಆದರೆ, ನಿಜವಾಗಿ ಸಮರ ಕಲೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದದ್ದು ರಾಹುಲ್ ಗಾಂಧಿ. ಕಾರ್ಯಕ್ರಮ ವೀಕ್ಷಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ, “ಸಹೋದರನೇ ನಿನ್ನ ಬಗ್ಗೆ ಕನಿಕರ ಮೂಡುತ್ತಿದೆ. ನಾನೇ ನಿಜವಾಗಿ ಅಕಿಡೋದಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆಯಬೇಕಾಗಿತ್ತು. ಆಗ ನೀನು ಈ ಹೊತ್ತಿಗೆ ಶ್ರೀಮಂತನಾಗಿರುತ್ತಿದ್ದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅನೇಕರು ಟ್ವಿಟರ್‌ನಲ್ಲಿ ಸಂಸದರ ಹಾಸ್ಯ ಪ್ರಜ್ಞೆ ಮೆಚ್ಚಿಕೊಂಡಿದ್ದಾರೆ.