18ರ ಹುಡುಗಿಯನ್ನು ಸುಟ್ಟು ಕೊಂದ ಅಪರಿಚಿತ ದುಷ್ಕರ್ಮಿಗಳು
Team Udayavani, Feb 23, 2018, 11:57 AM IST
ಉನ್ನಾವೋ, ಉತ್ತರ ಪ್ರದೇಶ : ಉನ್ನಾವೋದ ಸಾತ್ನಿ ಬಾಲ ಖೇಡಾ ಎಂಬ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಹದಿನೆಂಟರ ಹರೆಯದ ಹುಡುಗಿಗೆ ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟು ಕೊಂದಿರುವ ಅತ್ಯಮಾನುಷ ಘಟನೆ ವರದಿಯಾಗಿದೆ.
ಹುಡುಗಿಯು ಮನೆಗೆ ಅಗತ್ಯವಿರುವ ಸಾಮಾನು ತರಲೆಂದು ಸೈಕಲಿನಲ್ಲಿ ಮಾರ್ಕೇಟಿಗೆ ಹೋಗಿದ್ದಾಗ ಅಪರಿಚಿತ ದುಷ್ಕರ್ಮಿಗಳು ಯಾವುದೋ ಜ್ವಲನಶೀಲ ದ್ರಾವಣವನ್ನು ಆಕೆಯ ಮೇಲೆ ಎರಚಿ ಬೆಂಕಿ ಹಚ್ಚಿ ಸುಟ್ಟು ಕೊಂದರೆಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯರ ಮನೆಯವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿರುವ ಪ್ರಕಾರಣ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಭಾರ ಠಾಣಾಧಿಕಾರಿ ಉತ್ತರ ಸಿಂಗ್ ರಾಠೊಡ್ ತಿಳಿಸಿದ್ದಾರೆ.
ಹುಡುಗಿಯನ್ನು ಅಪರಿಚಿತ ದುಷ್ಕರ್ಮಿಗಳು ಯಾಕಾಗಿ ಸುಟ್ಟು ಕೊಂದರು ಎಂಬ ವಿಷಯ ಈ ವರೆಗೂ ನಿಗೂಢವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.