2000 ರೂ. ಮುದ್ರಣ ಸ್ಥಗಿತ?
Team Udayavani, Jan 4, 2019, 12:30 AM IST
ಹೊಸದಿಲ್ಲಿ: ನೋಟು ಅಮಾನ್ಯ ಘೋಷಣೆ (2016) ಮಾಡಿದ ನಂತರ ಹೊಸತಾಗಿ ಚಲಾವಣೆಗೆ ತರಲಾಗಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ಪ್ರಮಾಣವನ್ನು ಆರ್ಬಿಐ ತಗ್ಗಿಸಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೀಗಾಗಿ ನಿಧಾನವಾಗಿ ನೋಟನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ಬಿಐ, ಕಾಲ ಕಾಲಕ್ಕೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಸಂಖ್ಯೆಯನ್ನು ಅವಲಂಬಿಸಿ ನೋಟು ಮುದ್ರಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದೆ. ಆರ್ಬಿಐ ಮಾಹಿತಿ ಪ್ರಕಾರ, 2 ಸಾವಿರ ರೂ. ಮುಖಬೆಲೆಯ 3,285 ದಶಲಕ್ಷ ನೋಟುಗಳು 2017ರ ಮಾರ್ಚ್ವರೆಗೆ ಚಲಾವಣೆಯಲ್ಲಿದ್ದವು. 2017ರಲ್ಲಿ ಶೇ.50.2ರಷ್ಟಿದ್ದ 2 ಸಾವಿರ ರೂ.ಗಳ ನೋಟುಗಳ ಪ್ರಮಾಣ 2018ರ ಮಾರ್ಚ್ ವೇಳೆಗೆ ಶೇ.37.3ಕ್ಕೆ ಇಳಿಕೆಯಾದವು ಎಂದು ಹೇಳಲಾಗಿದೆ.