ಟೆರರ್ ಫಂಡಿಂಗ್ ಕೇಸ್; ಉಗ್ರ ಹಿಜ್ಬುಲ್ ಮಗ ಯೂಸೂಫ್ ಅರೆಸ್ಟ್

Team Udayavani, Oct 24, 2017, 1:47 PM IST

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ 2011ರ ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ, ಜಮ್ಮು, ಕಾಶ್ಮೀರದ ಸರ್ಕಾರಿ ನೌಕರ ಸೈಯದ್ ಶಾಹಿದ್ ಯೂಸೂಫ್ ನನ್ನು ಬಂಧಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ತನಿಖಾ ತಂಡ ಯೂಸೂಫ್ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ. ಅಕ್ಟೋಬರ್ 16ರಂದು ಯೂಸೂಫ್ ಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು. ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗೆ ಉತ್ತರದ ಅಗತ್ಯವಿದೆ ಎಂದು ಎನ್ಐಎ ಹೇಳಿತ್ತು.

ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ನ ಮೂರನೇ ಪುತ್ರನೇ ಶಾಹಿದ್ ಯೂಸೂಫ್. ಈತ ಬುಡ್ಗಾಮ್ ಸೋಯಿಬುಗ್ ನ ನಿವಾಸಿ. ಕೃಷಿ ಪದವಿ ಪಡೆದಿರುವ ಯೂಸೂಫ್ ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಕೃಷಿ ಇಲಾಖೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ವಿವರಿಸಿದೆ.

ಯೂಸೂಫ್ ಸೌದಿ ಅರೇಬಿಯಾ ಮೂಲದ ಹಿಜ್ಬುಲ್ ಮುಜಾಹಿದೀನ್ ಸಂಘಟಕ ಇಜಾಜ್ ಅಹ್ಮದ್ ಬಟ್ ಜತೆ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಟೆರರ್ ಫಂಡಿಂಗ್ ಪ್ರಕರಣದಲ್ಲಿ ಯೂಸೂಫ್ ಕೂಡಾ ಆರೋಪಿ ಎಂದು ವರದಿ ಹೇಳಿದೆ. ಯೂಸೂಫ್ ಹವಾಲಾ ಮೂಲಕ ಹಣವನ್ನು ಸ್ವೀಕರಿಸಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ನೀಡಿರುವುದಾಗಿ ವರದಿ ಆರೋಪಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ