ರಜನಿ ಚಿತ್ರಕ್ಕೆ 350 ಕೋಟಿ ವಿಮೆ!
Team Udayavani, Feb 26, 2017, 3:50 AM IST
ಚೆನ್ನೈ: ಖ್ಯಾತ ನಟ ರಜನಿಕಾಂತ್ ಅವರ ಬಹುಕೋಟಿ ವೆಚ್ಚದ ನೂತನ ಚಿತ್ರ ಬಿಡುಗಡೆಗೆ ಮೊದಲೇ ಸುದ್ದಿ ಮಾಡಿದೆ. ಇದಕ್ಕೆ ಕಾರಣ ಚಿತ್ರಕ್ಕೆ ಮಾಡಿದ ವಿಮೆ! ಹೊಸ ಚಿತ್ರ ಎಂದಿರನ್ 3 ಅಥವಾ ರೊಬೋಟ್ 2.0ಕ್ಕೆ 350 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ವಿಮೆ ಹೊಂದಿದ ಚಿತ್ರವೆಂಬ ಹೆಸರು ಪಡೆದಿದೆ. ಒಟ್ಟು 400 ಕೋಟಿ ರೂ.ಗಳ ಅತ್ಯಧಿಕ ವೆಚ್ಚದ ಈ ಚಿತ್ರವನ್ನು ಬ್ರಿಟಿಷ್-ಶ್ರೀಲಂಕ ಮೂಲದ ಉದ್ಯಮಿ ಅಲ್ಲಿರ್ಜಾ ಸುಬಸ್ಕರನ್ ಅವರ ಲೈಕಾ ಪ್ರೊಡಕ್ಸನ್ ನಿರ್ಮಾಣ ಮಾಡುತ್ತಿದೆ. ಚಿತ್ರ ಶೂಟಿಂಗ್ ರದ್ದುಗೊಂಡರೆ, ಚಿತ್ರದ ವೇಳೆ ಅವಗಢ, ಸಿಬ್ಬಂದಿಗಳಿಗೆ, ಶೂಟಿಂಗ್ ತಾಂತ್ರಿಕ ಸಲಕರಣೆಗಳಿಗೆ ಹಾನಿಯಾದರೆ, ವಿಮೆ ಅನ್ವಯವಾಗಲಿದೆ. ಇತ್ತೀಚೆಗಷ್ಟೇ ಚಿತ್ರ ನಟ ದುನಿಯಾ ವಿಜಯ್ ಅಭಿಯನದ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರಾದ ಉದಯ್ ಮತ್ತು ಅನಿಲ್ ಅಸುನೀಗಿದಂಥ ಘಟನೆಗಳಿಗೆ ಇಂಥ ವಿಮೆ ನೆರವಾಗಲಿದೆ
ಆರು ಖಾಸಗಿ ಕಂಪನಿಗಳು ಸೇರಿದಂತೆ ಸಾರ್ವಜನಿಕ ಸ್ವಾಮ್ಯದ ನ್ಯೂ ಇಂಡಿಯಾ ಅಸ್ಸೂರೆನ್ಸ್ ಚಿತ್ರಕ್ಕೆ ವಿಮೆ ಒದಗಿಸಲಿದೆ. ಈ ಮೊದಲು ಅಮೀರ್ ಖಾನ್ ಅವರ ಪಿಕೆ ಚಿತ್ರಕ್ಕೆ 300 ಕೋಟಿ ರೂ. ವಿಮೆ ಮಾಡಿಸಲಾಗಿದ್ದು ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ವಿಮೆ ಮಾಡಿಸಲಾದ ಚಿತ್ರವಾಗಿತ್ತು.