ಗುಜರಾತ್: ಕೈಗಾರಿಕಾ, ಮೆಡಿಕಲ್ ಗ್ಯಾಸ್ ತಯಾರಿಕಾ ಪ್ಲ್ಯಾಂಟ್ ನಲ್ಲಿ ಸ್ಫೋಟ; ಐವರು ಸಾವು
ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳ ತೊಡಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
Team Udayavani, Jan 11, 2020, 4:11 PM IST
ವಡೋದರಾ: ಕೈಗಾರಿಕಾ ಮತ್ತು ಮೆಡಿಕಲ್ ಗ್ಯಾಸ್ ತಯಾರಿಕಾ ಕಂಪನಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ಗುಜರಾತ್ ನ ವಡೋದರಾದಲ್ಲಿ ಶನಿವಾರ ನಡೆದಿದೆ.
ಇಂದು ಮಧ್ಯಾಹ್ನ ಏಮ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಸ್ಫೋಟ ಸಂಭವಿಸಿರುವುದಾಗಿ ಪೊಲೀಸರು ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ. ಪಾದ್ರಾದಲ್ಲಿರುವ ಕಂಪನಿ ಕೈಗಾರಿಕೆ ಮತ್ತು ಮೆಡಿಕಲ್ ಗೆ ಬೇಕಾಗುವ ಆಕ್ಸಿಜನ್, ನೈಟ್ರೋಜನ್, ಕಾರ್ಬೊನ್ ಡೈ ಆಕ್ಸೈಡ್ ಸೇರಿದಂತೆ ವಿವಿಧ ಶ್ರೇಣಿಯ ಗ್ಯಾಸ್ ತಯಾರಿಸುತ್ತದೆ ಎಂದು ವರದಿ ವಿವರಿಸಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.