ತೆರಿಗೆ ಸೋರಿಕೆ ತಡೆಯಲು ಶೇ. 5 ಜಿಎಸ್ಟಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Team Udayavani, Jul 20, 2022, 6:45 AM IST
ನವದೆಹಲಿ: ಪ್ಯಾಕ್ ಮಾಡಲಾದ ಆಹಾರ ಧಾನ್ಯಗಳ ಮಾರಾಟದಲ್ಲಿ ಆಗುತ್ತಿದ್ದ ತೆರಿಗೆ ಸೋರಿಕೆ ತಡೆಯಲು ಅವುಗಳ ಮೇಲೆ ಶೇ. 5ರಷ್ಟು ಜಿಎಸ್ಟಿ ಹೇರಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಜು. 18ರಿಂದ ಅನ್ವಯವಾಗುವಂತೆ ಪ್ಯಾಕ್ಡ್ ಧಾನ್ಯಗಳ ಮೇಲೆ ಶೇ. 5ರಷ್ಟು ಜಿಎಸ್ಟಿ ವಿಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ದೇಶಾದ್ಯಂತ ವರ್ತಕರು ಹಾಗೂ ಜನಸಾಮಾನ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು, “ಧಾನ್ಯಗಳ ಮೇಲಿನ ತೆರಿಗೆ ಪದ್ಧತಿ ಹಿಂದೆಯೂ ಚಾಲ್ತಿಯಲ್ಲಿತ್ತು. ಜಿಎಸ್ಟಿ ಜಾರಿಯಾಗುವುದಕ್ಕೂ ಮುನ್ನ ರಾಜ್ಯ ಸರ್ಕಾರಗಳು ವ್ಯಾಟ್ ರೂಪದಲ್ಲಿ ಜಾರಿಗೊಳಿಸುತ್ತಿದ್ದವು” ಎಂದರು.
“ಜೂ. 28ರಂದು ನಡೆದಿದ್ದ ಜಿಎಸ್ಟಿ ಕೌನ್ಸಿಲ್ನ ಸಭೆಯಲ್ಲಿ ಈ ಪ್ರಸ್ತಾವನೆಗೆ ಕರ್ನಾಟಕ, ಉತ್ತರ ಪ್ರದೇಶ, ಗೋವಾ, ಬಿಹಾರ ರಾಜ್ಯಗಳಲ್ಲದೆ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಾದ ಛತ್ತೀಸ್ಗಡ, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳೂ ಈ ಪ್ರಸ್ತಾವನೆಗೆ ಬೆಂಬಲ ಕೊಟ್ಟಿವೆ” ಎಂದೂ ವಿವರಿಸಿದರು. ಜತೆಗೆ, ಪ್ಯಾಕ್ ಮಾಡದೇ ಲೂಸ್ ಆಗಿ ಮಾರಾಟವಾಗುವ ವಸ್ತುಗಳಿಗೆ ಶೇ.5ರ ಜಿಎಸ್ಟಿ ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.