ತಪ್ಪಿದ ದೊಡ್ಡ ದುರಂತ! ರಸ್ತೆಯಲ್ಲಿ ಇರಿಸಿದ್ದ 5 ಕೆಜಿ ಐಇಡಿ ಪತ್ತೆ ಹಚ್ಚಿದ ಸೇನೆ
Team Udayavani, Dec 23, 2021, 1:07 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಾನ್‌ಪೋರಾದ ಶ್ರೀನಗರ ರಸ್ತೆಯಲ್ಲಿ ಇರಿಸಲಾಗಿದ್ದ 5 ಕೆಜಿ ತೂಕದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಯನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿ ನಾಶಪಡಿಸಿದ್ದರಿಂದ ಭಾರೀ ದುರಂತವೊಂದು ತಪ್ಪಿದೆ.
ಭಯೋತ್ಪಾದಕರು ರಸ್ತೆಯಲ್ಲಿ ಐಇಡಿ ಅಳವಡಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಪುಲ್ವಾಮಾ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಬಾಂಬ್ ಪತ್ತೆಯಾದ ನಂತರ ಅದನ್ನು ನಿಯಂತ್ರಿತ ಸ್ಫೋಟದ ಮೂಲಕ ಸ್ಥಳದಲ್ಲೇ ನಾಶಪಡಿಸಲಾಯಿತು.
“ಐಇಡಿ ಸುಮಾರು 5 ಕೆಜಿ ತೂಕವಿತ್ತು ಮತ್ತು ಕಂಟೈನರ್‌ನಲ್ಲಿ ಜೋಡಿಸಲಾಗಿತ್ತು. ಪೊಲೀಸ್ ಮತ್ತು ಸೇನೆಯ ಬಾಂಬ್ ನಿಷ್ಕ್ರಿಯ ತಂಡವು ನಿಯಂತ್ರಿತ ಸ್ಫೋಟದ ಮೂಲಕ ಸ್ಥಳದಲ್ಲೇ ಐಇಡಿಯನ್ನು ನಾಶಪಡಿಸಿತು ಎಂದು ಭದ್ರತಾ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಸಿಎಂ ಬದಲಾವಣೆಗಾಗಿ ದೊಡ್ಡ ಸಂಧಾನ ಮಾಡುತ್ತಿದ್ದಾರೆ, ನನಗೂ ಆಮಿಷ ಒಡ್ಡಿದ್ದಾರೆ: ಯತ್ನಾಳ್
ಬಳಿಕ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಭದ್ರತಾ ಅಧಿಕಾರಿಗಳು ಕೆಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಮಯೋಚಿತ ಕ್ರಮದಿಂದ ದೊಡ್ಡ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.