72 ತಾಸು ಪ್ರಚಾರ ನಿಷೇಧ ಉಲ್ಲಂಘನೆ ಆರೋಪ: ಪ್ರಜ್ಞಾಗೆ ಚು.ಆಯೋಗ ಕ್ಲೀನ್‌ ಚಿಟ್‌

Team Udayavani, May 8, 2019, 11:17 AM IST

ಹೊಸದಿಲ್ಲಿ : ಬಿಜೆಪಿಯ ಭೋಪಾಲ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಠಾಕೂರ್‌ ಅವರು ಚುನಾವಣಾ ಆಯೋಗ ತನಗೆ ಹೇರಿದ್ದ 72 ತಾಸುಗಳ ಪ್ರಚಾರ ನಿಷೇಧದ ಅವಧಿಯಲ್ಲಿ ದೇವಳಗಳಿಗೆ ಭೇಟಿ ನೀಡಿ ಅಲ್ಲಿ ಭಾರೀ ಸಂಖ್ಯೆಯ ಜನರನ್ನು ಉದ್ದೇಶಿಸಿ ಮಾತನಾಡುವ ಮೂಲಕ ನಿಷೇಧಾದೇಶದ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾಂಗ್ರೆಸ್‌ ದೂರಿನ ವಿಚಾರದಲ್ಲಿ ಚುನಾವಣಾ ಆಯೋಗ ಪ್ರಜ್ಞಾಗೆ ಕ್ಲೀನ್‌ ಚಿಟ್‌ ನೀಡಿದೆ.

ಪ್ರಜ್ಞಾ ಅವರು ದೇವಳಗಳಿಗೆ ಭೇಟಿ ಕೊಟ್ಟು ಅಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಜನರನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ ಅಲ್ಲಿ ತಮ್ಮ ಹೋರಾಟದ ಕರಪತ್ರಗಳನ್ನೂ ಹಂಚಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಪ್ರಜ್ಞಾಗೆ ನೊಟೀಸ್‌ ಜಾರಿ ಮಾಡಿದ್ದರು.

ಅದಕ್ಕೆ ಉತ್ತರವಾಗಿ ಪ್ರಜ್ಞಾ, ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರಲ್ಲದೆ ತಮ್ಮ ಕುರಿತ ಕರಪತ್ರಗಳನ್ನು ಯಾರು ಹಂಚಿದರು ಎಂಬುದು ತನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಎಟಿಎಸ್‌ ಮುಖ್ಯಸ್ಥ ಹೇಮಂತ ಕಡ್ಕಡೆ ಮತ್ತು ಬಾಬರಿ ಮಸೀದಿ ಧ್ವಂಸ ಕುರಿತಾಗಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗಾಗಿ ಚುನಾವಣಾ ಆಯೋಗ 2008ರ ಮಾಲೇಗಾಂವ್‌ ಬ್ಲಾಸ್ಟ್‌ ಆರೋಪಿ ಪ್ರಜ್ಞಾ ಠಾಕೂರ್‌ಗೆ 72 ತಾಸುಗಳ ಚುನಾವಣಾ ಪ್ರಚಾರ ನಿಷೇಧ ಹೇರಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ