ನಕಲಿ ವಿಮರ್ಶೆ ತಡೆಗೆ ಕೇಂದ್ರ ಸಜ್ಜು; ಶೀಘ್ರವೇ ಹೊಸ ನಿಯಮಗಳ ಘೋಷಣೆ
Team Udayavani, Sep 8, 2022, 6:40 AM IST
ನವದೆಹಲಿ: ದೇಶದಲ್ಲಿ ಇ-ಕಾಮರ್ಸ್ ಆ್ಯಪ್‌ಗ್ಳ ಬಳಕೆ ಹೆಚ್ಚಾದ ಬೆನ್ನಲ್ಲೇ, ನಕಲಿ ವಿಮರ್ಶೆಗಳ ಸಂಖ್ಯೆಯೂ ಹೆಚ್ಚಿದೆ. ಅವುಗಳನ್ನು ತಡೆಯುವ ನಿಟ್ಟಿನಲ್ಲಿ ನೂತನ ನಿಯಮಗಳ ಚೌಕಟ್ಟೊಂದನ್ನು ರಚಿಸುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಾಗಿದೆ.
“ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಮರ್ಶೆ ಹಾಕುವಂತವರ ಸಂಖ್ಯೆ ಹೆಚ್ಚಾಗಿದೆ. ಸೋಪಿನಿಂದ ಹಿಡಿದು, ಸ್ಮಾರ್ಟ್‌ಫೋನ್, ಹಾಸಿಗೆಯವರೆಗೆ ಎಲ್ಲವನ್ನೂ ಜನರು ವಿಮರ್ಶೆ ನೋಡಿಯೇ ಖರೀದಿಸುತ್ತಿದ್ದಾರೆ. ಅನೇಕರು ವಿಮರ್ಶೆಗೆ ಸಂಸ್ಥೆಯು ಅವರಿಗೆ ಹಣ ಕೊಟ್ಟಿದೆಯೇ ಇಲ್ಲವೇ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ.
ಇದರಿಂದಾಗಿ ಜನರು ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ವಿಮರ್ಶೆ ನೋಡಿ ಜನರು ಏನಾದರೂ ಖರೀದಿಸಿ ಅದರಿಂದ ಮೋಸ ಹೋದರೆ, ಅದಕ್ಕೆ ವಿಮರ್ಶೆ ಮಾಡಿದವರೇ ಹೊಣೆ ಆಗುತ್ತಾರೆ. ಈ ಬಗ್ಗೆ ಸೂಕ್ತವಾದಂತಹ ನಿಯಮಗಳ ಚೌಕಟ್ಟನ್ನು ಶೀಘ್ರವೇ ಜಾರಿಗೆ ತರಲಾಗುವುದು’ ಎಂದು ಗ್ರಾಹಕ ವ್ಯವಹಾರ ಇಲಾಖೆ ಹಿರಿಯ ಅಧಿಕಾರಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.