ಭಾರತ-ಚೀನ ಹೊಸ ಶಕೆ: ಪ್ರಧಾನಿ ನರೇಂದ್ರ ಮೋದಿ ಆಶಾಭಾವ

ಉಭಯ ದೇಶಗಳ ಬಾಂಧವ್ಯ ಕಾಪಾಡುವುದಾಗಿ ಚೀನ ಅಧ್ಯಕ್ಷರ ಭರವಸೆ

Team Udayavani, Oct 13, 2019, 6:06 AM IST

ಮಹಾಬಲಿಪುರಂ: “ಚೆನ್ನೈಯ ಸಾಗರ ತೀರದಲ್ಲಿ ಎರಡು ದಿನ ನಡೆದ ಭಾರತ ಮತ್ತು ಚೀನ ನಡುವಿನ ಅನೌಪ ಚಾರಿಕ ಶೃಂಗಸಭೆಯು ಎರಡೂ ದೇಶಗಳ ಬಾಂಧವ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಗಿನ ಸಂವಾದವನ್ನು “ಹೃದಯದಿಂದ ಹೃದಯದ ನಡುವಿನ ಸಂವಾದ’ ಎಂದು ಅವರು ಬಣ್ಣಿಸಿದ್ದಾರೆ.

ಶೃಂಗಸಭೆಯ 2ನೇ ದಿನದಂದು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದ ವಿವಿಧ ನಿಯೋಗಗಳೊಂದಿಗೆ ಪ್ರತ್ಯೇಕ ವಾಗಿ ಮಾತುಕತೆ ನಡೆಸಿದ ಬಳಿಕ ಮೋದಿ, “2018ರ ಎಪ್ರಿಲ್‌ನಲ್ಲಿ ಚೀನದ ವುಹಾನ್‌ನಲ್ಲಿ ನಡೆದಿದ್ದ ಎರಡೂ ದೇಶಗಳ ನಡುವಿನ ಮೊದಲ ಅನೌಪಚಾರಿಕ ಸಭೆಯು ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ಶಕ್ತಿ ತುಂಬಿತ್ತು. ಈಗ ಮಹಾಬಲಿಪುರಂ ಶೃಂಗಸಭೆಯು ಆ ಬಾಂಧವ್ಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಎರಡೂ ದೇಶಗಳು ತಮ್ಮ ನಡುವಿನ ಭಿನ್ನಮತಗಳು ವಿವಾದಗಳಾಗಿ ಮಾರ್ಪಾಡಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ನಿರ್ಧರಿಸಿವೆ. ಪರಸ್ಪರರ ಕಾಳಜಿಗೆ ಬೆಲೆ ನೀಡುವುದು, ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹಾಗೂ ಪ್ರಾಂತೀಯ ಮಟ್ಟದಲ್ಲಿ ಶಾಂತಿ, ಸೌಹಾರ್ದ ಸಾಧಿಸಿ ಅದನ್ನು ವಿಶ್ವಮಟ್ಟಕ್ಕೂ ವೃದ್ಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಇನ್ನು ಮುಂದೆ ನಡೆದುಕೊಳ್ಳಲಿವೆ’ ಎಂದು ಅವರು ತಿಳಿಸಿದ್ದಾರೆ.

2,000 ವರ್ಷಗಳ ಹಿಂದೆ ಭಾರತ ಮತ್ತು ಚೀನ ದೇಶಗಳು ವಿಶ್ವದ ಪ್ರಬಲ ಆರ್ಥಿಕ ದೇಶಗಳೆಂದೇ ಗುರುತಿಸಿಕೊಂಡಿದ್ದವು. ಈ ಶತಮಾನ ದಲ್ಲಿ ಎರಡೂ ದೇಶಗಳು ಪರಸ್ಪರ ಕೈ ಜೋಡಿಸಿ ಶತಮಾನಗಳ ಹಿಂದೆ ಗಳಿಸಿದ್ದ ಹೆಗ್ಗಳಿಕೆಯನ್ನು ಮತ್ತೆ ಪಡೆಯಲಿವೆ ಎಂಬ ಆಶಾಭಾವವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಬಾಂಧವ್ಯ ಕಾಪಾಡುವೆವು: ಜಿನ್‌ಪಿಂಗ್‌
ಜಿನ್‌ಪಿಂಗ್‌ ಅವರೂ ಶೃಂಗಸಭೆಯ ಫ‌ಲಶ್ರುತಿ ಉತ್ತಮವಾಗಿದೆ. ಸಭೆಯಲ್ಲಿ ಮೋದಿಯವರ ಜತೆಗೆ ಸ್ನೇಹಿತನಂತೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ. “ಅನೌಪಚಾರಿಕ ಶೃಂಗಸಭೆ ಯಿಂದಾಗಿ, ಭಾರತ-ಚೀನ ನಡುವಿನ ಸ್ನೇಹ ಮತ್ತಷ್ಟು ಗಾಢ ವಾಗಿದೆ. ಈ ಸ್ನೇಹವನ್ನು, ಮತ್ತಷ್ಟು ಬಲಗೊಳಿಸಿ ಬಾಂಧವ್ಯವನ್ನು ಕಾಪಾಡಿಕೊಂಡು ಹೋಗುವುದೇ ನನ್ನ ಸರಕಾರದ ಮೊದಲ ಆದ್ಯತೆ ಯಾಗಲಿದೆ’ ಎಂದಿದ್ದಾರೆ. 2 ದಿನಗಳಲ್ಲಿ ಪ್ರಧಾನಿ ಮೋದಿ ಹಾಗೂ ಜಿನ್‌ಪಿಂಗ್‌ ನಡುವೆ ಸುಮಾರು ಐದೂವರೆ ಗಂಟೆಗಳ ಮಾತುಕತೆ ನಡೆದಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ