ಕಾರ್ಗಿಲ್ ವೀರರಿಗೆ ಹೆಮ್ಮೆಯ ನಮನ

Team Udayavani, Jul 27, 2019, 6:06 AM IST

ಕಾರ್ಗಿಲ್ ಯುದ್ಧ ಮುಗಿದು, ಪಾಕಿಸ್ಥಾನದ ಕೈಯಿಂದ ಭಾರತೀಯ ಸೇನೆಯು ನಮ್ಮ ನೆಲವನ್ನು ವಶಪಡಿಸಿಕೊಂಡು ಶುಕ್ರವಾರಕ್ಕೆ 20 ವರ್ಷಗಳು ಪೂರ್ಣಗೊಂಡಿವೆ. ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ಹುತಾತ್ಮರ ಶ್ರದ್ಧಾಂಜಲಿ ಸಭೆಗಳಲ್ಲಿ ಜನರು ಹುತಾತ್ಮರಿಗೆ ಭಾವಪೂರ್ಣ ನಮನ ಸಲ್ಲಿಸುವ ಮೂಲಕ ಈ ವಿಜಯೋತ್ಸವದಲ್ಲಿ ಭಾಗಿಯಾದರು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಕೇಂದ್ರ ಸಚಿವರೂ ಸಹ ಕೆಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಕೋವಿಂದ್‌ ಅವರು ಶ್ರೀನಗರದ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

ಮತ್ತೂಮ್ಮೆ ದಾಳಿ ಮಾಡಿದರೆ ಮತ್ತಷ್ಟು ನಷ್ಟ: ಜ| ರಾವತ್‌

‘ನಮ್ಮ ಮೇಲೆ ಮತ್ತೂಮ್ಮೆ ದಾಳಿ ಮಾಡಿದರೆ ಹಿಂದೆ ಆದ ನಷ್ಟಕ್ಕಿಂತ ಹೆಚ್ಚಿನ ನಷ್ಟ ಅನುಭವಿಸಲಿದ್ದೀರಿ’. ಹೀಗೆಂದು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದು ಭೂಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌. ದ್ರಾಸ್‌ನಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಪ್ರಯುಕ್ತ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಅರ್ಪಿಸಿದ ಬಳಿಕ ಅವರು ಮಾತನಾಡಿದರು. ಉಗ್ರ ಸಂಘಟನೆ, ಅವುಗಳ ಸಂಪರ್ಕ ಜಾಲದ ವಿರುದ್ಧ ಪಾಕಿಸ್ಥಾನ ಕ್ರಮ ಕೈಗೊಳ್ಳುವ ವಾಗ್ಧಾನ ಮಾಡಿದೆ. ಆದರೆ, ವಾಗ್ಧಾನ ಮತ್ತು ಅನುಷ್ಠಾನಕ್ಕೆ ವ್ಯತ್ಯಾಸವಿದೆ. ಪಾಕ್‌ನ ಪರಿಸ್ಥಿತಿ ಬಗ್ಗೆ ನಮಗೆ ಅರಿವಿದೆ’ ಎಂದಿದ್ದಾರೆ. ಕಾಶ್ಮೀರ ವಿಚಾರ ಜೀವಂತ ಇರಿಸಲು ಅದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಭಾರತದ ಮೇಲೆ ದಾಳಿ ನಡೆಸಿದರೆ ಏನಾಗಲಿದೆ ಎನ್ನುವುದು 1999ರಲ್ಲಿ ಆ ದೇಶಕ್ಕೆ ಗೊತ್ತಾಗಿದೆ. ಮುಂದೆ ಅದೇ ರೀತಿಯ ದಾಳಿ ನಡೆಸಿದರೆ ಆ ನಷ್ಟಕ್ಕಿಂತ ಹೆಚ್ಚು ಪ್ರತಿಕೂಲ ಪರಿಣಾಮವನ್ನೇ ಪಾಕಿಸ್ಥಾನ ಎದುರಿಸಲಿದೆ ಎಂದು ಕಠೊರ ಎಚ್ಚರಿಕೆ ನೀಡಿದ್ದಾರೆ ಜ.ರಾವತ್‌.

ಹೀರೋಗೆ ಡಬಲ್ ಪ್ರಮೋಷನ್‌

1999ರ ಯುದ್ಧದಲ್ಲಿ ಪಾಲ್ಗೊಂಡು ಪಾಕ್‌ನ ಕರ್ನಲ್ ಶೇರ್‌ ಖಾನ್‌ನನ್ನು ಕೊಂದ ಯೋಧ ಸತ್ಪಾಲ್ ಸಿಂಗ್‌ ಅವರಿಗೆ ಪಂಜಾಬ್‌ ಸರಕಾರ ಡಬಲ್ ಪ್ರಮೋಷನ್‌ ನೀಡಿದೆ. ಸಂಗ್ರೂರ್‌ ಜಿಲ್ಲೆಯ ಪಟ್ಟಣದಲ್ಲಿ ಟ್ರಾಫಿಕ್‌ ಪೊಲೀಸ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅವರನ್ನು ಸಹಾಯಕ ಸಬ್‌-ಇನ್‌ಸ್ಪೆಕ್ಟರ್‌ ಆಗಿ ಪದೋನ್ನತಿ ನೀಡಲಾಗಿದೆ. ಸೇನೆ ತೊರೆದ ಬಳಿಕ ಅವರನ್ನು 2010ರಲ್ಲಿ ಪಂಜಾಬ್‌ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಳಿಸಲಾಗಿತ್ತು. ಸಿಂಗ್‌ ದ್ರಾಸ್‌ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೋದಿ ಫೋಟೋ ಟ್ವೀಟ್

ಕಾರ್ಗಿಲ್ ವಿಜಯ ದಿನ ಪ್ರಯುಕ್ತ 1999ರ ಹೋರಾಟದಲ್ಲಿ ಹುತಾತ್ಮರಾದ ಭಾರತ ಮಾತೆಯ ಪುತ್ರರಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಈ ದಿನ ನಮ್ಮ ಯೋಧರ ಧೈರ್ಯ, ಬದ್ಧತೆಯನ್ನು ತೋರಿಸುವ ದಿನ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೂಂದು ಟ್ವೀಟ್‌ನಲ್ಲಿ ಅವರು 1999ರಲ್ಲಿ ಕಾರ್ಗಿಲ್ಗೆ ಭೇಟಿ ನೀಡಿದ್ದ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಯ ಜಮ್ಮು- ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದುದಾಗಿ ಹೇಳಿದ್ದಾರೆ.

ರಾಹುಲ್, ಪ್ರಿಯಾಂಕಾರಿಂದ ಸ್ಮರಣೆ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹುತಾತ್ಮರಿಗೆ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ. ‘ಕಾರ್ಗಿಲ್ ವಿಜಯ ದಿನದಂದು 20 ವರ್ಷಗಳ ಹಿಂದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುತ್ತೇನೆ. ಅವರ ತ್ಯಾಗ, ಬಲಿದಾನ ಯಾವತ್ತೂ ಅನುಸರಣೀಯ ಮತ್ತು ಸ್ಮರಣೀಯ’ ಎಂದಿದ್ದಾರೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಟ್ವೀಟ್ ಮಾಡಿ, ಬಹಳಷ್ಟು ಶ್ರಮ, ಹೋರಾಟದ ಅನಂತರ ಯೋಧರು ತ್ರಿವರ್ಣಧ್ವಜವನ್ನು ಆಗಸದೆತ್ತರಕ್ಕೆ ಹಾರಿಸಿದ್ದಾರೆ. ದೇಶದ ಸಾರ್ವಭೌಮತ್ವಕ್ಕಾಗಿ ಅವರ ಹೋರಾಟ ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳುವಂಥದ್ದು. ಕಾರ್ಗಿಲ್ ಹೋರಾಟದ ಮೂಲಕ ಪ್ರಾಣ ತ್ಯಾಗ ಮಾಡಿದವರನ್ನು ಯಾವತ್ತೂ ಸ್ಮರಿಸುತ್ತೇವೆ ಎಂದಿದ್ದಾರೆ.

ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವಾಸೆ

ಜಮ್ಮು -ಕಾಶ್ಮೀರದ ದೋಡಾದಲ್ಲಿ 1999ರಲ್ಲಿ ನಡೆದ ಹತ್ಯಾಕಾಡದಲ್ಲಿ ಬದುಕಿ ಉಳಿದ ಜೋಗಿಂದರ್‌ ಸಿಂಗ್‌ ತಮ್ಮ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದಾರೆ. ಸದ್ಯ ಅವರು ಪುಣೆಯಲ್ಲಿ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಸರ್ಕಾರಿ ಉದ್ಯೋಗಕ್ಕಾಗಿ ಅಲೆದು ಬೇಸತ್ತಿರುವ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. 1999ರ ಜು.19ರಂದು ಕಾರ್ಗಿಲ್ ಯುದ್ಧ ಕೊನೆಯ ಹಂತದಲ್ಲಿರುವಾಗ ದೋಡಾ ಜಿಲ್ಲೆಯ ಲೆಹೋಟಾ ಗ್ರಾಮಕ್ಕೆ ನುಗ್ಗಿದ್ದ ಗುಂಪೊಂದು 15 ಮಂದಿಯನ್ನು ಕೊಂದಿತ್ತು. ಅದರಲ್ಲಿ ಹೆಚ್ಚಿನವರು ಜೋಗಿಂದರ್‌ರ ಕುಟುಂಬಸ್ಥರೇ ಆಗಿದ್ದರು.

ರಾಷ್ಟ್ರಪತಿಯಿಂದ ಗೌರವ ನಮನ

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶುಕ್ರವಾರ ಶ್ರೀನಗರದ ಸೇನೆಯ 15 ಕಾಪ್ಸ್‌ರ್ ಪ್ರಧಾನ ಕಚೇರಿಯಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಪುಷ್ಪಾಂಜಲಿ ಸಲ್ಲಿಸಿದರು. ನಿಯೋಜಿತ ಕಾರ್ಯಕ್ರಮದಂತೆ ಅವರು ದ್ರಾಸ್‌ಗೆ ತೆರಳಬೇಕಾಗಿತ್ತು. ಪ್ರತಿಕೂಲ ಹವಾ ಮಾನದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳದೆ ಶ್ರೀನಗರ ದ ಕಾರ್ಯಕ್ರಮದಲ್ಲಿ ಭಾಗಿಯಾದರು.

ಪಾಠ ಕಲಿಯದ ಪಾಕ್‌

ಇಪ್ಪತ್ತು ವರ್ಷಗಳ ಹಿಂದೆ ಪಾಕಿಸ್ಥಾನ ಕಾರ್ಗಿಲ್ನಲ್ಲಿ ಸೋಲು ಅನುಭವಿಸಿತ್ತು. ಇದರ ಹೊರತಾಗಿಯೂ ಆ ದೇಶ ಪಾಠ ಕಲಿತಿಲ್ಲ ಎಂದು ಸೇನೆಯ ಪೂರ್ವ ಭಾಗದ ಕಮಾಂಡರ್‌ ಲೆ| ಜ| ಎಂ.ಎಂ. ನರವಾನೆ ಹೇಳಿದ್ದಾರೆ. ಸೇನೆ ಯಾವುದೇ ಸಂದರ್ಭದಲ್ಲಿ ದೇಶಕ್ಕಾಗಿ ಕಾರ್ಯ ನಿರ್ವಹಿಸಲು ಸಿದ್ಧವಾಗಿಯೇ ಇದೆ ಎಂದು ಕೋಲ್ಕತಾದ ಕಾರ್ಯಕ್ರಮಗದಲ್ಲಿ ಹೇಳಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ