ವಾಟ್ಸ್‌ಆ್ಯಪ್‌ ಸಂದೇಶದ ಮೂಲ ಹುಡುಕಲು ಕಾಯ್ದೆ

Team Udayavani, Dec 25, 2018, 6:00 AM IST

ನವದೆಹಲಿ: ಇತ್ತೀಚೆಗಷ್ಟೇ ಎಲ್ಲರ ಕಂಪ್ಯೂಟರುಗಳ ಮೇಲೆ ಕಣ್ಗಾವಲಿಡಲು ತನಿಖಾ ಸಂಸ್ಥೆಗಳಿಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ ಇದೀಗ, ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸುವವರ ಮೂಲ ಪತ್ತೆಹಚ್ಚಿ ಅವರನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಚಿಂತಿಸಿದೆ.

ಈ ಕಾಯ್ದೆ ಜಾರಿಯಿಂದಾಗಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಹಾಗೂ ಇತರ ಸಂಸ್ಥೆಗಳು “ಕಾನೂನು ಬಾಹಿರ’ ಎಂದು ಕಂಡುಬರುವ ಸಂದೇಶ, ವಿಡಿಯೋ ಅಥವಾ ಚಿತ್ರಗಳನ್ನು ಹಂಚಿಕೊಳ್ಳುವವರು ಹಾಗೂ ಅದನ್ನು ಹರಿಬಿಡುವನ್ನು ಪತ್ತೆ ಮಾಡಬೇಕಾಗುತ್ತದೆ. ಸದ್ಯ ಈ ಸಂಸ್ಥೆಗಳು ಗೂಢಲಿಪೀಕರಣ ತಂತ್ರಜ್ಞಾನ ಹೊಂದಿದ್ದು, ಇದರಿಂದಾಗಿ ಸಂದೇಶದ ಮೂಲ ಪತ್ತೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಈ ಸಂಸ್ಥೆಗಳು ತಮ್ಮ ತಂತ್ರಜ್ಞಾನದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ.

72 ಗಂಟೆಗಳಲ್ಲಿ ಮೂಲ ಪತ್ತೆ!:ಈ ಕಾಯ್ದೆ ಜಾರಿಗೆ ಬಂದಲ್ಲಿ 72 ಗಂಟೆಗಳಲ್ಲಿ ಸಂದೇಶದ ಮೂಲವನ್ನು ಸೋಷಿಯಲ್‌ ಮೀಡಿಯಾ ಸೈಟ್‌ಗಳು ಕಂಡುಹಿಡಿಯಬೇಕಾಗುತ್ತದೆ. 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರಿರುವ ಎಲ್ಲ ಪ್ಲಾಟ್‌ಫಾರಂಗಳಿಗೆ ಇದು ಅನ್ವಯವಾಗುತ್ತದೆ. ಸರ್ಕಾರದ ಸಂಸ್ಥೆಗಳೊಂದಿಗೆ ಸಂವಹನ ನಡೆಸುವುದಕ್ಕಾಗಿ ನೋಡಲ್‌ ಅಧಿಕಾರಿಯನ್ನು ಇಂತಹ ಎಲ್ಲ ಸಂಸ್ಥೆಗಳೂ ನೇಮಕ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಯಾವುದೇ ಅಕ್ರಮ ಚಟುವಟಿಕೆಯ ದಾಖಲೆಯನ್ನು 180 ದಿನಗಳವರೆಗೆ ಸಂಗ್ರಹಿಸಿಟ್ಟಿರಬೇಕು. ಸದ್ಯ ಇದರ ಮಿತಿಯು 90 ದಿನಗಳಾಗಿವೆ.

ಚರ್ಚೆ: ಈ ಕಾಯ್ದೆಗೆ ಸಂಬಂಧಿಸಿ ಶುಕ್ರವಾರ ಸಾಮಾಜಿಕ ಮಾಧ್ಯಮಗಳ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಗೂಗಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಅಮೆಜಾನ್‌, ಯಾಹೂ, ಟ್ವಿಟರ್‌, ಶೇರ್‌ಚಾಟ್‌ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸುಪ್ರೀಂಗೆ 2 ಪಿಐಎಲ್‌
ಸಾರ್ವಜನಿಕರ ಕಂಪ್ಯೂಟರ್‌ ಮೇಲೆ ಕಣ್ಗಾವಲು ನಡೆಸಲು 10 ತನಿಖಾ ಸಂಸ್ಥೆ ಗಳಿಗೆ ಅನುಮತಿ ನೀಡಿದ ಸರ್ಕಾರದ ಕ್ರಮದ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ವಕೀಲ ಮನೋಹರ ಲಾಲ್‌ ಶರ್ಮಾ ಹಾಗೂ ಅಮಿತ್‌ ಸಾಹಿ° ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದು, ಈ ಆದೇಶ ವಜಾಗೊಳಿಸುವಂತೆ ಕೋರಿದ್ದಾರೆ. ಈ ಅರ್ಜಿಗಳ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಕಾನೂನುಬಾಹಿರ ಸಂದೇಶ ಕಾನೂನು ವ್ಯಾಪ್ತಿಗೆ
ಸೋಷಿಯಲ್‌ ಮೀಡಿಯಾ ಸಂಸ್ಥೆಗಳು ಅಳವಡಿಸಿಕೊಂಡಿರುವ ಗೂಢಲಿಪೀಕರಣ ವನ್ನು ಕೊನೆಗೊಳಿಸುವಂತೆ ಭಾರತವೂ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಕೇಳುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿ ಅಮೆರಿಕ ಸರ್ಕಾರ ಹಾಗೂ ಆ್ಯಪಲ್‌ ಸಂಸ್ಥೆಯ ಮಧ್ಯೆ ಭಾರಿ ಕಾನೂನು ಸಮರವೇ ನಡೆದಿದೆ. ಭಾರತದಲ್ಲೂ ಈ ಸಂಬಂಧ ಹಲವು ಬಾರಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಈ ಬಗ್ಗೆ ಆಗ್ರಹಿಸಲಾಗಿದೆ. ಆದರೆ ಗ್ರಾಹಕರ ಗೌಪ್ಯತೆಯನ್ನು ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಸಂಸ್ಥೆಗಳು ಇದಕ್ಕೆ ಒಪ್ಪುತ್ತಿಲ್ಲ. ಆದರೆ ಈ ಬಾರಿ ಕೇವಲ ಕಾನೂನು ಬಾಹಿರ ಕಂಟೆಂಟ್‌ ಹರಡುವ ಖಾತೆಗಳು ಮತ್ತು ವ್ಯಕ್ತಿಗಳನ್ನು ಮಾತ್ರ ಗುರುತಿಸುವಂತೆ ಹಾಗೂ ಅವುಗಳನ್ನು ನಿರ್ಬಂಧಿಸುವಂತೆ ಸರ್ಕಾರ ತಾಕೀತು ಮಾಡುತ್ತಿದೆ. ಈಗಾಗಲೇ ಬಹುತೇಕ ಸೋಷಿಯಲ್‌ ಮೀಡಿಯಾ ಸೈಟ್‌ಗಳು ಈ ಸಂಬಂಧ ಆಂತ ರಿಕ ಸಮಿತಿ ಹೊಂದಿದ್ದು, ಕಾನೂನು ಬಾಹಿರ ಕಂಟೆಂಟ್‌ಗಳನ್ನು ಪೋಸ್ಟ್‌ ಮಾಡುವ ಖಾತೆಗಳನ್ನು  ನಿರ್ಬಂಧಿಸುತ್ತಿವೆ. ಕೆಲವು ತಿಂಗಳುಗಳ ಹಿಂದೆ ವ್ಯಾಪಕವಾಗಿ ನಡೆಯುತ್ತಿದ್ದ ಗುಂಪು ಘರ್ಷಣೆಗೆ ವಾಟ್ಸ್‌ಆ್ಯಪ್‌ನಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಯೇ ಕಾರಣ ಎಂದು ಆರೋಪಿಸಿದ್ದರಿಂದ ವಾಟ್ಸ್‌ಆ್ಯಪ್‌ ಇಂಥವುಗಳನ್ನು ತಡೆಯಲು ಪ್ರಚಾರ ಕ್ಯಾಂಪೇನ್‌ಗಳನ್ನು ಹಮ್ಮಿಕೊಂಡಿದೆ.
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ