ಲೋಹಿಯಾ ಭವಿಷ್ಯ ಪ್ರಕಾರ ಮೋದಿ 25 ವರ್ಷ ದೇಶ ಆಳುತ್ತಾರೆ: ಯೋಗಿ ಆದಿತ್ಯನಾಥ್‌

Team Udayavani, May 15, 2019, 4:43 PM IST

ಗೋರಖ್‌ಪುರ, ಉತ್ತರ ಪ್ರದೇಶ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದು ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ನುಡಿದಿದ್ದ ಭವಿಷ್ಯವನ್ನು ಉಲ್ಲೇಖೀಸಿ ಬಡಜನರ ಶೌಚಾಲಯ ಮತ್ತು ಇಂಧನ ಆವಶ್ಯಕತೆಗೆ ಒತ್ತು ಕೊಡುತ್ತಿರುವ ನರೇಂದ್ರ ಮೋದಿ ಅವರು ಈ ದೇಶವನ್ನು ಇನ್ನೂ 25 ವರ್ಷಗಳ ಕಾಲ ಆಳುವರೆಂದು ಹೇಳಿದರು.

ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್‌ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿನ 80 ಸೀಟುಗಳ ಪೈಕಿ 74 ಸೀಟುಗಳನ್ನು ಗೆಲ್ಲುತ್ತದೆ ಎಂದು ಹೇಳಿದರು. 2014ರಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆದ್ದಿದ್ದ ಸ್ಥಾನಗಳಿಗಿಂತಲೂ ಇದು ಹೆಚ್ಚು ಎಂದವರು ಹೇಳಿದರು.

ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರ ಕನಸನ್ನು ಪ್ರಧಾನಿ ಮೋದಿ ಅವರು ಈಡೇರಿಸುತ್ತಿದ್ದಾರೆ ಮತ್ತು ಆ ಕಾರಣಕ್ಕೆ 2019ರ ಈ ಮಹಾಚುನಾವಣೆಯಲ್ಲಿ ಬಿಜೆಪಿಯು ಅತ್ಯಂತ ಸ್ಪಷ್ಟ ಬಹುಮತ ಪಡೆದು ಕೇಂದ್ರದಲ್ಲಿ ಪುನಃ ಸರಕಾರ ರಚಿಸಲಿದೆ ಎಂದು ಹೇಳಿದರು.

“ಡಾ. ಲೋಹಿಯಾ ಅವರು ಶ್ರೀಮತಿ ಇಂದಿರಾ ಗಾಂಧಿ ಜೀ ಅವರಿಗೆ ಲೋಕಸಭೆಯಲ್ಲಿ 1966 ಅಥವಾ 1967ರಲ್ಲಿ ಹೇಳಿದ್ದರು : ದೇಶದ ಪ್ರತಿಯೋರ್ವ ಬಡವ ತನ್ನ ಮನೆಗೆ ಯಾವ ದಿನ ಶೌಚಾಲಯ ಹೊಂದುವನೋ ಮತ್ತು ಆತನ ಇಂಧನ ಅಗತ್ಯವನ್ನು ಯಾವಾಗ ಪೂರೈಸಲಾಗುವುದೋ ಆಗ ಯಾರೇ ಪ್ರಧಾನಿಯಾಗಿರಲಿ ಅವರು ಈ ದೇಶವನ್ನು ಕನಿಷ್ಠ 25 ವರ್ಷಗಳ ಕಾಲ ಆಳುತ್ತಾರೆ. ಡಾ. ಲೋಹಿಯಾ ಅವರ ಕನಸು ಈಗಷ್ಟೇ ನನಸಾಗುತ್ತಿದೆ’ ಎಂದು ಆದಿತ್ಯನಾಥ್‌ ಹೇಳಿದರು.

“ಡಾ. ಲೋಹಿಯಾ ಹೆಸರಲ್ಲಿ ಬಹಳಷ್ಟು ಜನರು ರಾಜಕಾರಣ ಮಾಡುತ್ತಿರುವುದು ನನಗೆ ಗೊತ್ತಿದೆ; ಆದರೆ ಲೋಹಿಯಾ ಕನಸನ್ನು ಪಿಎಂ ಮೋದಿ ನನಸು ಮಾಡಿದ್ದಾರೆ’ ಎಂದು ಆದಿತ್ಯನಾಥ್‌ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ