6 ವರ್ಷಗಳ ಬಳಿಕ ದೆಹಲಿಯಲ್ಲಿ ಕಾರು ನೋಂದಣಿಯಲ್ಲಿ ಕುಸಿತ : ಕಾರಣವೇನು?

Team Udayavani, Sep 20, 2019, 5:30 PM IST

ಹೊಸದಿಲ್ಲಿ: ಆರ್ಥಿಕತೆ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯ ಪ್ರಭಾವ ಆಟೋಮೊಬೈಲ್ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಆರ್ಥಿಕ ಕುಸಿತ, ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆ ಇತ್ಯಾದಿ ಕಾರಣಗಳನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ಜನರು ವಾಹನಗಳ ಖರೀದಿಯಿಂದ ಹಿಂದೆ ಉಳಿದಿದ್ದಾರೆ.

ರಾಷ್ಟ್ರೀಯ ರಾಜಧಾನಿಯಲ್ಲಿ ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಾರುಗಳ ನೋಂದಾವಣಿ ಕ್ಷೀಣಿಸಿದ್ದು , ಆರು ವರ್ಷಗಳ ಬಳಿಕ ಮೊದಲ ಬಾರಿಗೆ ಕಾರು ಖರೀದಿಸುವರರ ಸಂಖ್ಯೆ ನೆಲ ಕಚ್ಚಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ರಾಜ್ಯ ಸಾರಿಗೆ ಇಲಾಖೆ ತಿಳಿಸಿದೆ.

12.6 % ಕುಸಿತ
ಈ ವರದಿಯ ಪ್ರಕಾರ ಕಳೆದ ವರ್ಷದ ಮೊದಲ ಎಂಟು ತಿಂಗಳು ಅಂದರೆ ಜನವರಿಯಿಂದ ಆಗಸ್ಟ್ ವರೆಗೆ 486,889 ಕಾರು ಮಾರಾಟ ನೋಂದನಿಯಾಗಿದ್ದು, ಈ ವರ್ಷ ಈ ಅವಧಿಯಲ್ಲಿ 425,691ಗೆ ಇಳಿಕೆಯಾಗಿದೆ. ಅಂದರೆ ಕಾರು ನೋಂದಣಿಯಲ್ಲಿ 61,198ರಷ್ಟು (12.6%) ಇಳಿಕೆಯಾಗಿದೆ. ಇಷ್ಟು ಮಟ್ಟದ ಇಳಿಕೆ 2014ರ ನಂತರ ಇದೇ ಮೊದಲು ಎಂದು ಈ ವರದಿ ಉಲ್ಲೇಖಿಸಿದೆ.

ದ್ವಿಚಕ್ರ ವಾಹನ ನೋಂದಣಿಯಲ್ಲಿಯೂ ಇಳಿಕೆ
ದ್ವಿಚಕ್ರವಾಹನಗಳ ನೋಂದಣಿಯಲ್ಲಿ ಶೇ13 ಇಳಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 43,182 ಯೂನಿಟ್ಗಳಷ್ಟು ಮಾರಾಟ ಕಡಿಮೆಯಾಗಿದೆ. ಹೀಗಾಗಿ ಈ ಬಾರಿಯ ದ್ವಿಚಕ್ರ ವಾಹನ ನೋಂದಣಿ 286,467 ಕ್ಕೆ ತಲುಪಿದೆ.

10 ತಿಂಗಳಿಂದ ಕುಂಟಿತವಾದ ವ್ಯಾಪಾರ-ವಾಹಿವಾಟು.
ಭಾರತೀಯ ವಾಹನ ಮಾರಾಟದಲ್ಲಿ ಕಳೆದ 10 ತಿಂಗಳುಗಳಿಂದ ಸತತವಾಗಿ ಕುಸಿತವಾಗುತ್ತಿದೆ.  ಗ್ರಾಹಕರು ಮಾಡುವ ಖರ್ಚಿನಲ್ಲಿ ಕಡಿತ ಮತ್ತು, ಕಳೆದ 25 ತ್ರೈಮಾಸಿಕಗಳಲ್ಲಿ ಹೋಲಿಸಿದಾಗ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆ ಅತ್ಯಂತ ನಿಧಾನಗತಿ ಅಂದರೆ 5% ಕ್ಕೆ ಇಳಿದಿರುವ ಕಾರಣ ಆಗಸ್ಟ್ ತಿಂಗಳಲ್ಲಿ ದಾಖಲೆಯ ಕುಸಿತವಾಗಿದೆ.

ಕಡಿಮೆಯಾದ ಪ್ರಯಾಣಿಕರ ವಾಹನಗಳ ಬೇಡಿಕೆ
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಪ್ರಯಾಣಿಕರ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಆಗಸ್ಟ್ ತಿಂಗಳು ಶೇ 31.57 ನಷ್ಟು ಇಳಿಕೆಯಾಗಿದ್ದು, 196,524 ಯೂನಿಟ್ಗಳು ಮಾರಾಟವಾಗಿದೆ. ಜತೆಗೆ ಪ್ರಯಾಣಿಕರ ಕಾರು ಮಾರಾಟದಲ್ಲಿಯೂ ಬದಲಾವಣೆಯಾಗಿದ್ದು, ಶೇ41.09 ರಷ್ಟು ಇಳಿಮುಖವಾಗಿದೆ.

ಕಳೆದ ಮೂರು ತಿಂಗಳಲ್ಲಿ ದಾಖಲೆ ಮಟ್ಟದ ಕುಸಿತ
ಕಳೆದ ಮೂರು ತಿಂಗಳಲ್ಲಿ ವಾಹನ ನೋಂದಣಿ ವಿಶೇಷವಾಗಿ ಕಡಿಮೆಯಾಗಿದೆ. ಉದಾಹರಣೆಗೆ, 2018 ರ ಆಗಸ್ಟ್ ಅಲ್ಲಿ 62,000 ವಾಹನಗಳು ಮಾರಾಟವಾಗಿದ್ದು, 2017 ರಲ್ಲಿ 54,000, 2016 ರಲ್ಲಿ 56,000 ಮತ್ತು 2015 ರಲ್ಲಿ ಸುಮಾರು 54,000 ಮತ್ತು 2014 ರಲ್ಲಿ 46,249 ವಾಹನಗಳು ಮಾರಾಟವಾಗಿದೆ. ಕಳೆದ ನಾಲ್ಕು ವರ್ಷಗಳ ಅಂಕಿ-ಅಂಶಕ್ಕೆ ಹೋಲಿಸಿದರೆ 2014 ಹೊರತು ಪಡಿಸಿ ಈ ವರ್ಷ ಆಗಸ್ಟ್ ನಲ್ಲಿ ಕಡಿಮೆ ಮಟ್ಟದಲ್ಲಿ ಅಂದರೆ 49,000 ವಾಹನಗಳು ನೋಂದಣಿಯಾಗಿವೆ.

ಭಾರತದ ಅತೀ ದೊಡ್ಡ ಮಾರುಕಟ್ಟೆಯಲ್ಲಿಯೂ ಕುಂಠಿತ
ಕಾರು ನೋಂದಣಿಯ ಮಾಹಿತಿಯ ಪ್ರಕಾರ ದೆಹಲಿಯಲ್ಲಿ 2017ರ ವರ್ಷವನ್ನು ಹೊರತುಪಡಿಸಿ ವಾಹನಗಳ ಬೇಡಿಕೆ ಕ್ರಮೇಣ ಕುಸಿಯುತ್ತಿದೆ. ಈ ವರ್ಷ ನೋಂದಣಿಗಳ ಸಂಖ್ಯೆಯಲ್ಲಿನ ಕುಸಿತದ ಪ್ರಮಾಣ ಶೇ10.7ಕ್ಕೆ ಏರಿದ್ದು, ಭಾರತದ ವಾಹನಗಳ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ದೆಹಲಿಯಲ್ಲಿ ಆರ್ಥಿಕ ಹಿಂಜರಿತದ ಕಾರಣ ವಾಹನ ನೋಂದಣಿ ಮತ್ತು ರಸ್ತೆ ಸುಂಕದಲ್ಲಿಯೂ ನಷ್ಟ ಅನುಭವಿಸಿದೆ ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭ ಹೇಳಿದರು.

ಕುಸಿತ ಕಂಡ ತೆರಿಗೆ ಆದಾಯ
ವಾಹನ ನೋಂದಣಿ ಮತ್ತು ರಸ್ತೆ ತೆರಿಗೆ ಮೂಲಕ ರಾಜ್ಯ ಬೊಕ್ಕಸಕ್ಕೆ ಬರುವ ಆದಾಯವು ಕಳೆದ ವರ್ಷದಿಂದ ಇಳಿಮುಖವಾಗಿದೆ.ಪ್ರಸ್ತುತ ವರ್ಷ ಆದಾಯದ ಕುಸಿತ ಶೇ 7 ರಷ್ಟು ಹೆಚ್ಚಾಗಿದೆ ಎಂದು ಸಾರಿಗೆ ಸಚಿವ ತಿಳಿಸಿದ್ದು, 2017ರಲ್ಲಿ ಇಲಾಖೆ ಸಂಗ್ರಹಿಸಿದ ಆದಾಯ ಮೊತ್ತ 1,300 ಕೋಟಿ ರೂ.ಗಳಾಗಿದ್ದು, 2018 ರಲ್ಲಿ ಇದೇ ಅವಧಿಯಲ್ಲಿ 1,258.39 ಕೋಟಿ ರೂ. ಮೊತ್ತ ಸಂಗ್ರಹವಾಗಿತ್ತು. ಆದರೆ ಈ ವರ್ಷ ಕೇವಲ 1,176 ಕೋಟಿ ರೂ. ಮಾತ್ರ ಆದಾಯ ಸಂಗ್ರಹವಾಗಿದೆ ಎಂದಿದ್ದಾರೆ.

ಹೆಚ್ಚಿದ ತೈಲ ಬೆಲೆ ಹಾಗೂ ವಿಮೆ ದರ
ತೈಲ ಬೆಲೆಯಲ್ಲಿ ಆದ ಬದಲಾವಣೆ ಹಾಗೂ ವಿಮೆ ದರದ ಏರಿಕೆ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಪ್ರತಿ ವಾಹನದ ಬೆಲೆ ಶೇ10 ರಷ್ಟು ಏರಿಕೆಯಾಗಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕ (ಎಸ್ಐಎಎಂ) ಸಂಸ್ಥೆ ತಿಳಿಸಿದೆ.

ಬಿಎಸ್-6 ಪ್ರಭಾವ
ಮುಂದಿನ ವರ್ಷದ ಏಪ್ರಿಲ್ ನಲ್ಲಿ ಮಾರುಕಟ್ಟೆಗೆ ಬರಲಿರುವ ಬಿಎಸ್-6ನ ನಿಯಮಗಳು ಹಾಗೂ ಮಾನದಂಡಗಳು ವಾಹನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿವೆ. ಇದು ಗ್ರಾಹಕರ ಮನಸ್ಥಿತಿ ಮೇಲೆ ಪರಿಣಾಮ ಬೀರಿದ್ದು, ವಾಹನ ಮಾರಾಟದಲ್ಲಿನ ಕುಸಿತಕ್ಕೆ ಒಂದು ಕಾರಣ ಎಂದು ಇತರ ವಾಹನ ವಿತರಕರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಿತರಕರು ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿರುವ ಹಲವಾರು ಗ್ರಾಹಕರು ನಂತರವೇ ವಾಹನ ಖರೀದಿ ಮಾಡಬಹುದು ಎಂದು ನಗರದ ಪ್ರಮುಖ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ