ಕಳಸಾ-ಬಂಡೂರಿ ಮೇಲೆ ಮತ್ತೆ ಆತಂಕದ ಛಾಯೆ

Team Udayavani, Nov 19, 2019, 8:46 PM IST

– ಯೋಜನೆ ಜಾರಿ ಬಗ್ಗೆ ನೀಡಿದ್ದ ಒಪ್ಪಿಗೆಯನ್ನು ಮರುಪರಿಶೀಲಿಸಲು ಕೇಂದ್ರ ನಿರ್ಧಾರ
– ಪರಿಸರ ಖಾತೆ ನೀಡಿದ್ದ ಒಪ್ಪಿಗೆಯನ್ನು ಪರಾಮರ್ಶಿಸಲು ಹೊಸ ಸಮಿತಿ ಸ್ಥಾಪನೆಗೆ ತೀರ್ಮಾನ
– ಗೋವಾದ ಸತತ ಮನವಿಗಳಿಗೆ ಸ್ಪಂದಿಸಿದ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌
– ಗೋವಾಕ್ಕೆ ಪತ್ರ ಬರೆದು ಹೊಸ ಸಮಿತಿಯ ಆಧಾರದಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವ ಭರವಸೆ

ಪಣಜಿ: ದಶಕಗಳ ಹೋರಾಟದ ಫ‌ಲವಾಗಿ ಸಾಕಾರಗೊಳ್ಳುವ ಆಶಾಭಾವನೆ ಮೂಡಿಸಿದ್ದ “ಕಳಸಾ ಬಂಡೂರಿ’ ಯೋಜನೆ ಮತ್ತೆ ನನೆಗುದಿಗೆ ಬೀಳುವ ಆತಂಕ ಮೂಡಿದೆ. ಕಳಸಾ ಬಂಡೂರಿ ಯೋಜನೆ ಆರಂಭಕ್ಕೆ ಕೇಂದ್ರ ಪರಿಸರ ಇಲಾಖೆಯಿಂದ ಒಪ್ಪಿಗೆ ನೀಡಿರುವುದನ್ನು ಆಕ್ಷೇಪಿಸಿ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ನೇತೃತ್ವದಲ್ಲಿ ಅಲ್ಲಿನ ಸರ್ವಪಕ್ಷಗಳ ನಿಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಆಕ್ಷೇಪಕ್ಕೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಯೋಜನೆ ಆರಂಭಿಸಲು ಕರ್ನಾಟಕಕ್ಕೆ ನೀಡಲಾಗಿರುವ ಒಪ್ಪಿಗೆಯ ಬಗ್ಗೆ ಮರುಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸುವ ಭರವಸೆ ನೀಡಿದೆ.

ಈ ಕುರಿತಂತೆ, ನ. 18ರಂದು ಗೋವಾ ರಾಜ್ಯ ಸರ್ಕಾಕ್ಕೆ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌, “”ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ನೀವು (ಗೋವಾ) ಸಲ್ಲಿಸಿರುವ ಮನವಿ ಪತ್ರದಲ್ಲಿ ಆ ಯೋಜನೆಯು ಕುಡಿಯುವ ನೀರಿನ ಯೋಜನೆ ಮಾತ್ರವಾಗಿರದೆ ಅದಕ್ಕೂ ಮಿಗಿಲಾದ ವಿವಿಧೋದ್ದೇಶಗಳ ಯೋಜನೆಯಾಗಿರುತ್ತದೆ ಎಂದು ತಿಳಿಸಿದ್ದೀರಿ. ನಿಮ್ಮ ಆಕ್ಷೇಪವನ್ನು ಪರಿಷ್ಕರಿಸಲು ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಗುತ್ತದೆ. ಸಮಿತಿಯ ವರದಿಯ ಆಧಾರದಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು” ಎಂದಿದ್ದಾರೆ.

ಮರುಪರಿಶೀಲನೆಯನ್ನು ತಕ್ಷಣದಿಂದಲೇ ರದ್ದುಪಡಿಸಬೇಕೆಂಬ ಗೋವಾದ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ, ಆ ಬಗ್ಗೆ ಸಮಿತಿ ರಚನೆ ಮಾಡಲು ಮುಂದಾಗಿದೆ.

ಒತ್ತಡ ತಂತ್ರಗಾರಿಕೆಯಲ್ಲಿ ಮೊದಲ ಯಶಸ್ಸು
ಮಹದಾಯಿ ನದಿಯ ನೀರನ್ನು ತಿರುಗಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಕುಡಿಯುವ ನೀರು ಒದಗಿಸುವ ಯೋಜನೆಯಾದ ಕಳಸಾ-ಬಂಡೂರಿಗೆ, ಇದೇ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಪರಿಸರ ಖಾತೆಯು ಯೋಜನೆಯ ಅನುಷ್ಠಾನ, ಹಸಿರು ನಿಶಾನೆ ನೀಡಿತ್ತು. ಅದರ ಬೆನ್ನಲ್ಲೇ ಜಾವಡೇಕರ್‌ ಅವರಿಗೆ ಪತ್ರ ಬರೆದಿದ್ದ ಸಾವಂತ್‌, ಒಪ್ಪಿಗೆ ನೀಡಿರುವುದನ್ನು ಆಕ್ಷೇಪಿಸಿದ್ದರಲ್ಲದೆ, ಈ ಯೋಜನೆಯು, ಗೋವಾದ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಅವರು ಆರೋಪಿಸಿದ್ದರು. ಇದು ಸಾಲದೆಂಬಂತೆ, ನ. 4ರಂದು ದೆಹಲಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ದು ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದರು.

ನ್ಯಾಯ ಸಿಗುವ ಭರವಸೆಯಿದೆ: ಸಾವಂತ್‌ 
ಜಾವಡೇಕರ್‌ ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಸಾವಂತ್‌, “”ಗೋವಾ ಸಲ್ಲಿಸಿದ ಮನವಿಗೆ ಕೇಂದ್ರ ಪರಿಸರ ಸಚಿವರು ಸ್ಪಂದಿಸಿದ್ದಾರೆ. ಪರಿಸ್ಥಿತಿ ಅಧ್ಯಯನಕ್ಕೆ ಹೊಸ ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಗೋವಾಕ್ಕೆ ನ್ಯಾಯ ದೊರಕುವ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ. ಅಲ್ಲದೆ, “”ಯಾವುದೇ ಕಾರಣಕ್ಕೂ ಮಹದಾಯಿ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ