ರನ್ ವೇನಲ್ಲಿ ಬೀದಿನಾಯಿಗಳನ್ನು ಕಂಡು ಪೈಲಟ್ ಕಂಗಾಲು! ಮುಂದೇನಾಯ್ತು?

Team Udayavani, Aug 14, 2019, 8:29 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪಣಜಿ: ಬೀದಿನಾಯಿಗಳಿಂದ ವಾಹನ ಸವಾರರು ಪಡುವ ಪಾಡು ಅಷ್ಟಿಷ್ಟಲ್ಲ. ಅದರಲ್ಲೂ ಕತ್ತಲೆಯ ಸಮಯದಲ್ಲಿ ಏಕಾಏಕಿ ರಸ್ತೆಗೆ ನುಗ್ಗುವ ಬೀದಿನಾಯಿಗಳ ಕಾಟದಿಂದ ಅದೆಷ್ಟೋ ಅಪಘಾತಗಳು ನಮ್ಮಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುತ್ತದೆ.

ಆದರೆ ಈ ಬೀದಿ ನಾಯಿಗಳು ಆಗಸದಲ್ಲಿ ಹಾರುವ ವಿಮಾನಕ್ಕೂ ಕಾಟಕೊಡುತ್ತವೆಂದರೆ ನೀವು ನಂಬುತ್ತೀರಾ? ಇಂತಹದ್ದೊಂದು ವಿಚಿತ್ರ ಘಟನೆ ಗೋವಾದ ಡಾಬೋಲಿಮ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಎಐ 033 ವಿಮಾನವು ಮುಂಬಯಿಂದ ಆಗಮಿಸಿ ಇನ್ನೇನು ಗೋವಾದ ಡಾಬೋಲಿಮ್ ವಿಮಾನ ನಿಲ್ದಾಣದ ರನ್ ವೇನಲ್ಲಿ ಇಳಿಯಬೇಕಿತ್ತು. ಆದರೆ ಅಷ್ಟರಲ್ಲಿ ವಿಮಾನದ ಪೈಲಟ್ ಗೆ ರನ್ ವೇನಲ್ಲಿ ಬೀದಿ ನಾಯಿಗಳ ಒಂದು ಹಿಂಡು ಕಾಣಿಸುತ್ತದೆ. ತಕ್ಷಣವೇ ಎಚ್ಚೆತ್ತುಕೊಂಡ ಪೈಲಟ್ ವಿಮಾನವನ್ನು ಇಳಿಸದೆ ಸುಮಾರು 15 ನಿಮಿಷಗಳ ಕಾಲ ಆಗಸದಲ್ಲೇ ಹಾರಾಡಿಸುತ್ತಾರೆ ಮತ್ತು ನಿಲ್ದಾಣದ ನಿಯಂತ್ರಣ ಕೊಠಡಿಗೆ ಈ ಕುರಿತಾಗಿ ಮಾಹಿತಿಯನ್ನು ನೀಡುತ್ತಾರೆ.

ತಕ್ಷಣವೇ ನಿಲ್ದಾಣದ ಅಧಿಕಾರಿಗಳು ಬೀದಿ ನಾಯಿಗಳನ್ನು ರನ್ ವೇ ಪರಿಸರದಿಂದ ಓಡಿಸಿ ವಿಮಾನ ಇಳಿಯಲು ಅವಕಾಶ ಮಾಡಿಕೊಡುತ್ತಾರೆ. ಇಷ್ಟೆಲ್ಲಾ ರಾಮಾಯಣ ಮುಗಿಯುವಾಗ ಸುಮಾರು 15 ನಿಮಿಷಗಳು ಕಳೆದುಹೋಗಿತ್ತು!

ಅಂತೂ 15 ನಿಮಿಷಗಳ ಕಾಲ ವಿಮಾನದಲ್ಲಿದ್ದ ಪ್ರಯಾಣಿಕರು ಏನಾಗಿರಬಹುದೆಂಬ ಆತಂಕದಲ್ಲಿ ಸಮಯಕಳೆದರೆ, ಇತ್ತ ಈ ಬೀದಿನಾಯಿಗಳು ನಾವು ಆಕಾಶದಲ್ಲಿ ಹಾರಾಡುವ ವಿಮಾನಕ್ಕೇ ಕಾಟ ಕೊಟ್ಟೆವು ಎಂದು ಹಲ್ಲು ಕಿರಿಯುತ್ತಾ ಹೋಗಿರಬಹುದು ಅಲ್ವಾ?

ಈ ಎಲ್ಲಾ ವಿಚಾರವನ್ನು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಫೇಸ್ಬುಕ್ ಪೋಸ್ಟ್ ಮೂಲಕ ಹಾಕಿಕೊಂಡಿದ್ದಾರೆ. ಮತ್ತು ಈ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಗೋವಾದ ಮಾಜೀ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ದಿಗಂಬರ ಕಾಮತ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದು, ವಿಮಾನಯಾನ ಮಹಾನಿರ್ದೇಶಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ವಿಮಾನ ಪ್ರಯಾಣಿಕರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಕಾಮತ್ ಆಗ್ರಹಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ