ಕರ್ನಾಟಕದ BJP ಚುನಾವಣಾ ಉಸ್ತುವಾರಿ ಜಾವ್ಡೇಕರ್, ಗುಜರಾತ್ ಗೆ ಜೇಟ್ಲಿ
Team Udayavani, Aug 24, 2017, 6:17 PM IST
ನವದೆಹಲಿ: 2018ರ ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ತಯಾರಿ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಗೆ ಕರ್ನಾಕಟದ ಬಿಜೆಪಿ ಚುನಾವಣಾ ಉಸ್ತುವಾರಿಯನ್ನು ವಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಕ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಏತನ್ಮಧ್ಯೆ ಮತ್ತೊಬ್ಬ ಕೇಂದ್ರ ಸಚಿವ ಪಿಯೂಷ್ ಗೊಯೆಲ್ ಗೆ ಕರ್ನಾಟಕ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಮುರಳಿಧರ್ ರಾವ್ ಅವರು ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿದೆ.
ಅದೇ ರೀತಿ ಈ ವರ್ಷದ ಅಂತ್ಯದಲ್ಲಿ ಗುಜರಾತ್ ಚುನಾವಣೆ ನಡೆಯುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಗುಜರಾತ್ ಚುನಾವಣೆ ಉಸ್ತುವಾರಿಯನ್ನಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ನೇಮಕ ಮಾಡಿದ್ದಾರೆ. ಗುಜರಾತ್ ವಿಧಾನಸಭೆಯ ಅವಧಿ 2018ರ ಜನವರಿ 22ರಂದು ಮುಕ್ತಾಯಗೊಳ್ಳಲಿದೆ. ಕರ್ನಾಟಕ ವಿಧಾನಸಭೆ ಅವಧಿ 2018ರ ಮೇ 28ರಂದು ಮುಕ್ತಾಯಗೊಳ್ಳಲಿದೆ.