ಪುಲ್ವಾಮಾ ಎನ್ಕೌಂಟರ್: ಯೋಧ ಹುತಾತ್ಮ
Team Udayavani, Aug 13, 2020, 12:59 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಮ್ರಾಜಿಪೋರಾ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರನನ್ನು ಹತ್ಯೆ ಗೈಯ್ಯಲಾಗಿದ್ದು, ಈ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಉಗ್ರರು ಅವಿತಿರುವ ಸುಳಿವಿನ ಮೇರೆಗೆ ಪೊಲೀಸ್, ಸಿಆರ್ಪಿಎಫ್ ಹಾಗೂ ಸೇನೆ ಮಂಗಳವಾರ ಸಂಜೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದವು. ಅಷ್ಟರಲ್ಲಿ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದು, ಈ ವೇಳೆ ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಒಬ್ಬ ಉಗ್ರನನ್ನು ಹತ್ಯೆಗೈಯ್ಯಲಾಗಿದ್ದು, ಆತನಿಂದ ಎಕೆ ಅಸಾಲ್ಟ್ ರೈಫಲ್, ಗ್ರೆನೇಡ್ಗಳು ಸೇರಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಈ ನಡುವೆ, ಬಂಡಿಪೋರಾ ಜಿಲ್ಲೆಯ ಹಾಜಿನ್ನಲ್ಲಿ ಪಾಕ್ ಮೂಲದ ಲಷ್ಕರ್ ಉಗ್ರರನ್ನು ಬುಧವಾರ ಬೆಳಗ್ಗೆ ಬಂಧಿಸಲಾಗಿದೆ. ಬಂಧಿತ ಅಖೀಬ್ ಅಹ್ಮದ್ ರಾಥರ್ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.