ಕೊನೆ ತನಕ ಜೈಲು: ದೇವಮಾನವ ಅಸಾರಾಮ್‌ ಬಾಪೂಗೆ ಆಜೀವ ಸೆರೆವಾಸ

Team Udayavani, Apr 26, 2018, 6:00 AM IST

ಜೋಧ್‌ಪುರ್‌/ನವದೆಹಲಿ: ಹದಿನಾರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ದೇಶದ ಮತ್ತೂಬ್ಬ ಸ್ವಯಂ ಘೋಷಿತ ದೇವ ಮಾನವ ಅಸಾರಾಮ್‌ ಬಾಪೂಗೆ ಸಾಯುವ ವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇವರ ಇಬ್ಬರು ನಿಕಟವರ್ತಿಗಳಿಗೂ ತಲಾ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ರಾಜಸ್ಥಾನದ ಜೋಧ್‌ ಪುರದಲ್ಲಿರುವ ಎಸ್‌ಸಿ/ಎಸ್ಟಿ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಮಧುಸೂಧನ ಶರ್ಮಾ ತೀರ್ಪು ನೀಡಿದ್ದಾರೆ. 

ಮಕ್ಕಳಿಗೆ ಲೈಂಗಿಕ ಕಿರುಕುಳ ಕಾಯ್ದೆ(ಪೋಸ್ಕೋ) ಹಾಗೂ ಇತರ ಕಾಯ್ದೆಗಳ ಅನ್ವಯ ಕೋರ್ಟ್‌ ಈ ತೀರ್ಪು ನೀಡಿದೆ.
2013ರಿಂದಲೂ ಜೋಧ್‌ಪುರದ ಕೇಂದ್ರೀಯ ಕಾರಾಗೃಹದಲ್ಲೇ ಅಸಾರಾಮ್‌ ಬಾಪೂ ಜೈಲುವಾಸ ಅನುಭವಿಸುತ್ತಿದ್ದು, ತೀರ್ಪು ನೀಡುವ ಸಲುವಾಗಿ ನ್ಯಾಯಾಧೀಶರು ಜೈಲಿಗೇ ಬಂದರು. ಬೆಳಗ್ಗೆ 10.45ಕ್ಕೆ ತೀರ್ಪಿತ್ತ ನ್ಯಾಯಾಧೀಶರು, ಮಧ್ಯಾಹ್ನ 2.30ಕ್ಕೆ
ದೇವಮಾನವನಿಗೆ ಸಾಯುವ ವರೆಗೆ ಜೈಲು ಮತ್ತು 1 ಲಕ್ಷ ರೂ. ಜುಲ್ಮಾನೆಯನ್ನೂ ವಿಧಿಸಿ ತೀರ್ಪು ನೀಡಿದರು. ನಾಲ್ವರು ನಿಕಟವರ್ತಿಗಳ ಪೈಕಿ ಇಬ್ಬರಿಗೆ 20 ವರ್ಷ ಜೈಲು, ಇನ್ನಿಬ್ಬರನ್ನು ಬಿಡುಗಡೆ ಮಾಡಿ ಆದೇಶ ನೀಡಿದರು. ಜೈಲಲ್ಲಿಯೇ ತೀರ್ಪು ನೀಡಲು ವ್ಯವಸ್ಥೆ ಮಾಡಬೇಕು ಎಂದು ರಾಜಸ್ಥಾನ ಹೈಕೋರ್ಟ್‌ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು.

ಗುರ್ಮೀತ್‌ ರಾಮ್‌ ರಹೀಮ್‌ ತೀರ್ಪಿನ ಬೆನ್ನಲ್ಲೇ ಪಂಜಾಬ್‌ ಸೇರಿ ಕೆಲವೆಡೆ ಹಿಂಸಾಚಾರ ಸಂಭವಿಸಿದ್ದರಿಂದ ಈ ಬಾರಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಜತೆಗೆ ಜೋಧ್‌ ಪುರ ಕೇಂದ್ರೀಯ ಕಾರಾಗೃಹ ಸುತ್ತಮುತ್ತ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇದರ ಜತೆಗೆ ನಗರದ ವಿವಿಧ ಭಾಗಗಳಿಂದ 12 ಮಂದಿ ಅಸಾರಾಮ್‌ ಬೆಂಬಲಿ ಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಸಂತೋಷವಾಗಿದೆ: ಉತ್ತರ ಪ್ರದೇಶದಲ್ಲಿ ಶಹಜಹಾನ್ಪುರದಲ್ಲಿ ಮಾತನಾಡಿದ ಬಾಲಕಿಯ ತಂದೆ, ತೀರ್ಪಿನಿಂದ ಸಂತೋಷವಾಗಿದೆ. ನಮ್ಮ ಪುತ್ರಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಕ್ಕಿದೆ. ಇನ್ನು ನಾನು ಸತ್ತು ಹೋದರೂ ತೊಂದರೆ ಇಲ್ಲ. ನ್ಯಾಯಾಂಗದಲ್ಲಿ ನಮ್ಮ ಕುಟುಂಬಕ್ಕೆ ನಂಬಿಕೆ ಇತ್ತು. ಅದು ನಿಜವಾಗಿದೆ ಎಂದಿದ್ದಾರೆ. ನಮ್ಮ ಪುತ್ರಿ ಧೈರ್ಯಶಾಲಿಯಾದ್ದರಿಂದ ಈ ಗೆಲುವು ಸಾಧ್ಯವಾಯಿತಲ್ಲದೆ, ಢೋಂಗಿ ಬಾಬಾನ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಅಸಾರಾಮ್‌
ವಿರುದ್ಧದ ಹೋರಾಟ ನಡೆಸಿ ಆತ ಜೈಲಿನಿಂದ ಹೊರಗೆ ಬರದಂತಾಗಿದೆ ಎಂದು ವಿವರಿಸಿದ್ದಾರೆ.

10,000 ಕೋಟಿ ಆಸ್ತಿ
ಅಸಾರಾಮ್‌ ಬಾಪೂ ಬರೋಬ್ಬರಿ 10 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ದೇಶಾದ್ಯಂತ 400 ಸ್ಥಳಗಳಲ್ಲಿ
ಅವರ ಆಶ್ರಮವಿದೆ. ಮೂಲ ಹೆಸರು ಅಸುಮಾಲ್‌ ಸಿರುಮಲಾನಿ. 1941ರಲ್ಲಿ ಪಾಕ್‌ನಲ್ಲಿ ಜನನ. ದೇಶ ವಿಭಜನೆ ಗೊಂಡ ಬಳಿಕ ಅವರು ಅಹಮದಾಬಾದ್‌ಗೆ ಬಂದರು. ತಂದೆಯ ವ್ಯಾಪಾರದ ಉಸ್ತುವಾರಿ ಹೊತ್ತಿದ್ದರು. ತಂದೆಯ ನಿಧನ ನಂತರ ಗುಜರಾತ್‌ನ ವಿಜಯಪುರಕ್ಕೆ ಕುಟುಂಬ ಸ್ಥಳಾಂತರಗೊಂಡಿತು. ಅವರು ಕಲಿತದ್ದು ಕೇವಲ ನಾಲ್ಕನೇ ಕ್ಲಾಸ್‌. ಮನೆಯಿಂದ ಪದೇ ಪದೆ ಓಡಿಹೋಗುತ್ತಿದ್ದ ಅವರ ಮನಸ್ಸು ನಿಧಾನವಾಗಿ ಅಧ್ಯಾತ್ಮದತ್ತ ಹೊರಳಿತು. 23ನೇ ವಯಸ್ಸಿನಲ್ಲಿ ಅವರಿಗೆ ವಿವಾಹವಾಯಿತು. ಇದೇ ಸಂದರ್ಭದಲ್ಲಿ ಲೀಲಾಶಾಜಿ ಮಹಾರಾಜ್‌ರ ಸಂಪರ್ಕವಾಯಿತು. ಅವರೇ ಅಸುಮಾಲ್‌ ಗೆ 1964ರಲ್ಲಿ ಅಸಾರಾಮ್‌ ಎಂಬ ನಾಮಕರಣ ಮಾಡಿದರು. ನಂತರ ಅಸಾರಾಮ್‌ ತನ್ನ ಗುರುವನ್ನು ಹೊರಹಾಕಿದರು. ನಿಧಾನವಾಗಿ ಅವರ ಆಶ್ರಮ ವಿಸ್ತರಿಸುತ್ತಾ ಬಂತು. 1972ರಲ್ಲಿ “ಮೋಕ್ಷದ ಕುಟೀರ’ ಎಂಬ ಆಶ್ರಮ ಸ್ಥಾಪಿಸಿದ್ದರು. 2008ರಲ್ಲಿ ಇಬ್ಬರು ಸೋದರ ಸಂಬಂಧಿಗಳು ಸಂಶಯಾಸ್ಪದವಾಗಿ ಅಸುನೀಗಿದ್ದಾಗ ಅಸಾರಾಮ್‌ ವಿರುದ್ಧ ಮೊದಲ ಬಾರಿಗೆ ಆರೋಪಗಳು ಕೇಳಿ ಬಂದವು.

ಘಟನೆಯ ಪಕ್ಷಿನೋಟ
2013 ಆ.15 ಮತ್ತು 16ರ ರಾತ್ರಿ ಬಾಲಕಿ ಮೇಲೆ ಅತ್ಯಾಚಾರ ನಡೆದ ದಿನ 
ಮನೈ ಆಶ್ರಮ 
ಘಟನೆ ನಡೆದ ಸ್ಥಳ. ಇದು ಜೋಧ್‌ ಪುರದಿಂದ 39 ಕಿಮೀ ದೂರದಲ್ಲಿದೆ 
ದೂರು ನೀಡಿದ್ದು ಯಾರು? 
16 ವರ್ಷದ ಬಾಲಕಿ, ಆಕೆಯ ತಂದೆ
ಅಸಾರಾಮ್‌: ಪ್ರಮುಖ ಆರೋಪಿ

ಹೆದರಿಕೆಯಲ್ಲಿದ್ದೆವು 
ಸ್ವಯಂ ಘೋಷಿತ ದೇವಮಾನವನ ವಿರುದ್ಧ ದೂರು ನೀಡಿದ ಬಳಿಕ ಕುಟುಂಬ ಸದಸ್ಯರು ಯಾವಾಗ ಏನಾಗುತ್ತದೋ ಏನೋ ಎಂಬ
ಬಗ್ಗೆ ಆತಂಕದಲ್ಲಿದ್ದೆವು. ಪ್ರಕರಣ ಹಿಂಪಡೆಯುವಂತೆ ವಿವಿಧ ರೀತಿಯ ಆಮಿಷ, ಬೆದರಿಕೆಗಳು ಬಂದಿದ್ದವು ಎಂದು ತಂದೆ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ