ಸಲ್ಲುಗೆ ಸಂಕಟ ತಪ್ಪಿದ್ದಲ್ಲ

Team Udayavani, Apr 8, 2018, 7:00 AM IST

ಜೋಧಪುರ: ನಟ ಸಲ್ಮಾನ್‌ ಖಾನ್‌ಗೆ ಜಾಮೀನು ಸಿಕ್ಕಿದೆಯಾದರೂ, ಅವರಿಗೆ ಸಂಕಟ ತಪ್ಪಿದ್ದಲ್ಲ. 50 ಸಾವಿರ ರೂ.ಗಳ ಬಾಂಡ್‌ ಪಡೆದು ಜಾಮೀನು ನೀಡಿರುವ ಸೆಷನ್ಸ್‌ ನ್ಯಾಯಾಲಯ, ಕೋರ್ಟ್‌ ಒಪ್ಪಿಗೆ ಹೊರತಾಗಿ ದೇಶ ಬಿಟ್ಟು ಹೋಗದಂತೆ ತಾಕೀತು ಮಾಡಿದೆ. ಮೇ 7ರಂದು ಪ್ರಕರಣದ ಮುಂದಿನ ವಿಚಾರಣೆಗೆ ಹಾಜರಾಗು ವಂತೆ ನ್ಯಾಯಮೂರ್ತಿ ರವೀಂದ್ರ ಕುಮಾರ್‌ ಜೋಷಿ ಆದೇಶಿಸಿದ್ದಾರೆ.  ಆದರೆ, ಜಾಮೀನು ಆದೇಶವನ್ನು ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನಿಸುವು ದಾಗಿ ಬಿಶ್ನೋಯ್‌ ಮಹಾ ಸಭಾ ಹಾಗೂ ಬಿಶ್ನೋಯ್‌ ಟೈಗರ್‌ ಫೋರ್ಸ್‌ ಸಂಘಟನೆಗಳು ತಿಳಿಸಿವೆ. ಸರ್ಕಾರಿ ಅಭಿಯೋಜಕ ಪೋಕರ್‌ ರಾಮ್‌ ಬಿಶ್ನೋಯ್‌ ಕೂಡಾ ಇದನ್ನೇ ಹೇಳಿದ್ದಾರೆ. ಜಾಮೀನು ಸಿಕ್ಕಿದ್ದರೂ, ಸಲ್ಮಾನ್‌ಗೆ ಈ ಪ್ರಕರಣದಲ್ಲಿನ ಸಂಕಟ ಮತ್ತೆ ಮುಂದುವರಿಯಲಿದೆ.

ಏತನ್ಮಧ್ಯೆ, ಶುಕ್ರವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ರಾಜಸ್ಥಾನ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌, 124 ನ್ಯಾಯಾಧೀಶರ ಸಾಮೂಹಿಕ ವರ್ಗಾ ವಣೆ ಆದೇಶ ಹೊರಡಿಸಿದ್ದು, ಸಲ್ಮಾನ್‌ ಜಾಮೀನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಜೋಷಿ ಕೂಡ ವರ್ಗಾವಣೆಗೊಂಡಿದ್ದಾರೆ. 

ಸಲ್ಲುಗೆ ಮುಳ್ಳಾದ ಮರಣೋತ್ತರ ವರದಿ?
1998ರ ಅಕ್ಟೋಬರ್‌ 1ರ ಮಧ್ಯರಾತ್ರಿ ಸಲ್ಮಾನ್‌ ಅವರಿಂದ ಹತ್ಯೆಯಾಗಿವೆ ಎನ್ನಲಾಗಿರುವ ಎರಡು ಕೃಷ್ಣಮೃಗಗಳ 2ನೇ ಮರಣೋತ್ತರ ಪರೀಕ್ಷೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ಪರವಾಗಿ ವಾದ ಮಂಡಿಸಿದ್ದ ವಕೀಲ ಮಹೇಶ್‌ ಬೋರಾ, ಅನುಮಾನದ ಮೇಲೆ ಸಲ್ಮಾನ್‌ ಖಾನ್‌ ಮೇಲೆ ಕೇಸ್‌ ಜಡಿಯಲಾಗಿದೆ ಎಂದು ವಾದಿಸಿದ್ದರು. ಆದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೃಷ್ಣಮೃಗಗಳು ಗುಂಡೇಟಿನಿಂದಲೇ ಸತ್ತಿರುವುದು ಖಾತ್ರಿಯಾಗಿದೆ ಎಂದ ನ್ಯಾಯಾಧೀಶರು, ಬೋರಾ ವಾದವನ್ನು ತಳ್ಳಿಹಾಕಿದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ