ರಾಜ್ಯಕ್ಕೆ ಬರದ ನೆರವು ಹೊಸ ಸರ್ಕಾರದಿಂದ

ಇನ್ನೂ ನಿರ್ಧರಿಸದ ಉನ್ನತ ಅಧಿಕಾರಿಗಳ ಸಮಿತಿ

Team Udayavani, May 14, 2019, 6:00 AM IST

ನವದೆಹಲಿ: ಬರದಿಂದ ನಲುಗುತ್ತಿರುವ ಕರ್ನಾಟಕಕ್ಕೆ ಕೇಂದ್ರದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬರುವವರೆಗೂ ಯಾವುದೇ ರೀತಿಯ ಪರಿಹಾರದ ಪ್ಯಾಕೇಜ್‌ ಸಿಗುವುದು ಅನುಮಾನ ಎಂದು ಹೇಳಲಾಗಿದ್ದು, ಇದು ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜ್ಯ ಸರ್ಕಾರ 2,064 ಕೋಟಿ ಬರ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಜ್ಞಾಪನಾ ಪತ್ರವನ್ನು ನೀಡಿದೆ. ಹಿಂಗಾರು ಋತುವಿನ ವೇಳೆ ರಾಜ್ಯದಲ್ಲಿ ಬರದಿಂದ ಆಗಿರುವ ನಷ್ಟದ ಬಗ್ಗೆ ಅಧ್ಯಯನ ನಡೆಸಿರುವ ಕೇಂದ್ರ ಬರ ಅಧ್ಯಯನ ತಂಡ ಕೃಷಿ ಇಲಾಖೆಗೆ ವರದಿಯನ್ನೂ ನೀಡಿದ್ದು, ಈ ವರದಿಯನ್ನು ಎಚ್ಎಲ್ಸಿಗೆ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಗೃಹ ಇಲಾಖೆಯ ಅಡಿಯಲ್ಲಿ ಬರುವ ಉನ್ನತ ಅಧಿಕಾರಿಗಳ ಸಮಿತಿ (ಎಚ್ಎಲ್ಸಿ) ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆದರೆ, ಇದುವರೆಗೆ ಈ ಸಮಿತಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ. ಇನ್ನೇನಿದ್ದರೂ ಹೊಸ ಸರ್ಕಾರ ಬಂದ ಮೇಲೆಯೇ ತೀರ್ಮಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಚಿತ್ರವೆಂದರೆ, ಈ ಸಮಿತಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನೀತಿ ಸಂಹಿತೆ ಅಡ್ಡಿ ಉಂಟು ಮಾಡುವುದಿಲ್ಲ. ಬರ ಸಂಬಂಧ ಪರಿಹಾರ ಕಾರ್ಯಾಚರಣೆ ತೆಗೆದುಕೊಳ್ಳಲು ಅವಕಾಶವಿದೆ. ಆದರೂ, ಹೊಸ ಸರ್ಕಾರ ಬಂದ ಮೇಲೆಯೇ ನಿರ್ಧಾರ ತೆಗೆದುಕೊಳ್ಳಲು ಸಮಿತಿ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯನ್ನೇ ನಡೆಸಿರಲಿಲ್ಲ. ಕಳೆದ ಗುರುವಾರವಷ್ಟೇ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆದು, ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿ ಮಾಡುತ್ತಿರುವ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ