ಖಾಪ್ ಪಂಚಾಯತ್‌ನಿಂದ ವಯಸ್ಕ ಜೋಡಿ ಮೇಲಿನ ದಾಳಿ ಕಾನೂನು ಬಾಹಿರ
Team Udayavani, Jan 16, 2018, 12:18 PM IST
ಹೊಸದಿಲ್ಲಿ : ಅಂತರ್ ಜಾತಿ ವಿವಾಹ ಬಯಸುವ ವಯಸ್ಕ ಮಹಿಳೆ ಮತ್ತು ಪುರುಷ ಜೋಡಿ ಮೇಲೆ ಖಾಪ್ ಪಂಚಾಯತ್ ಅಥವಾ ಯಾವುದೇ ಸಂಘಟನೆಗಳು ದಾಳಿ ಮಾಡುವುದುದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಹೇಳಿದೆ.
ವಯಸ್ಕ ಪುರುಷ ಮತ್ತು ಮಹಿಳೆ ಅಂತರ್ ಜಾತೀಯ ವಿವಾಹವಾಗಲು ಬಯಸಿದಲ್ಲಿ ಅವರನ್ನು ಯಾವುದೇ ಖಾಪ್, ಪಂಚಾಯತ್, ವ್ಯಕ್ತಿ ಅಥವಾ ಸಂಘಟನೆ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಂ ಖಾನ್‌ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವನ್ನು ಒಳಗೊಂಡ ಪೀಠ ಹೇಳಿತು.
ಅಂತರ್ಜಾತಿ ಮತ್ತು ಅಂತರ್ ಗೋತ್ರ ವಿವಾಹವಾಗುವ ಜೋಡಿಗಳಿಗೆ ಅವರ ಮನೆಯವರು ತಮ್ಮ ಕುಟುಂಬ ಮರ್ಯಾದೆಗೆ ಕೇಡು ಉಂಟು ಮಾಡಿದ ಕಾರಣಕ್ಕೆ ಹತ್ಯೆಗೈಯುವುದು, ಕಿರುಕುಳ ನೀಡುವುದು, ದಾಳಿ ನಡೆಸುವುದು ಇತ್ಯಾದಿಗಳನ್ನು ತಡೆಯುವ ನಿಟ್ಟಿನಲ್ಲಿ ಈ ಹಿಂದೆ ಕೋರ್ಟಿನ ಆ್ಯಮಿಕಸ್ ಕ್ಯೂರಿ ರಾಜು ರಾಮಚಂದ್ರನ್ ಸೂಚಿಸಿದ್ದ ಮಾರ್ಗೋಪಾಯಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪೀಠವು ಕೇಂದ್ರಕ್ಕೆ ನೊಟೀಸ್ ಜಾರಿ ಮಾಡಿತು.