ಔರಂಗಾಬಾದ್ ಭೀಕರ ದುರಂತ: ಗೂಡ್ಸ್ ರೈಲು ಹರಿದು 15 ಮಂದಿ ವಲಸೆ ಕಾರ್ಮಿಕರು ಸಾವು
ರೈಲ್ವೆ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದಿದ್ದು ಕನಿಷ್ಟ 15 ಜನ ಮೃತಪಟ್ಟಿದ್ದಾರೆ.
Team Udayavani, May 8, 2020, 8:22 AM IST
ಔರಂಗಾಬಾದ್: ವಿಶಾಖಪಟ್ಟಣಂ ಗ್ಯಾಸ್ ದುರಂತ ಮಾಸುವ ಮುನ್ನವೇ ಇದೀಗ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲ್ವೆ ಅಪಘಾತವಾಗಿ 15 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ರೈಲ್ವೆ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಇಂದು ಬೆಳಗ್ಗೆ ಗೂಡ್ಸ್ ರೈಲು ಹರಿದಿದ್ದು ಕನಿಷ್ಟ 15 ಜನ ಮೃತಪಟ್ಟಿದ್ದು, ನಾಲ್ಕು ಜನ ಗಂಭೀರವಾಗಿ ಗಾಯಗಂಡಿದ್ದಾರೆಂದು ತಿಳಿದುಬಂದಿದೆ.
ಔರಂಗಾಬಾದ್‌ನ ಜಲ್ನಾ ರೈಲ್ವೆ ಟ್ರಾಕ್ ಬಳಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮೃತಪಟ್ಟ ಎಲ್ಲಾ ಕಾರ್ಮಿಕರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಲಾಕ್ ಡೌನ್ ಕಾರಣದಿಂದಾಗಿ ಈ ವಲಸೆ ಕಾರ್ಮಿಕರು ಛತ್ತಿಸ್ ಗಡ್ ಗೆ ಹಿಂದಿರುಗುತ್ತಿದ್ದರು. ರೈಲ್ವೆ ಹಳಿಗಳ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದ ಈ ಸಂದರ್ಭದಲ್ಲಿ ಕಾರ್ಮಿಕರು ಬಳಲಿಕೆಯಿಂದ ನಿದ್ರೆಗೆ ಜಾರಿದ್ದಾರೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಮುಂಜಾನೆ ವೇಳೆಗೆ ಮಲಗಿದ್ದವರು ಮೇಲೆ ರೈಲು ಹರಿದಿದ್ದು ದುರಂತಕ್ಕೆ ಕಾರಣವಾಗಿದೆ.
ದೇಶಾದ್ಯಂತ ಲಾಕ್ ಡೌನ್ ಇರುವ ಕಾರಣ ಹಲವೆಡೆ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳುತ್ತಿದ್ದು, ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಸಿಗದ ಕಾರಣ ನಡೆದುಕೊಂಡೇ ತೆರಳುತ್ತಿದ್ದಾರೆ.