ಆಯುಷ್ಮಾನ್‌ ಭಾರತ್‌: 3000 ಮೋಸದ ಪ್ರಕರಣಗಳು ಪತ್ತೆ

4.5 ಕೋಟಿ ರೂ. ವಂಚನೆ ಪತ್ತೆ

Team Udayavani, Nov 12, 2019, 8:04 PM IST

ಹೊಸದಿಲ್ಲಿ: ಬಡವರಿಗೂ ತತ್‌ಕ್ಷಣ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಲಿ ಎಂಬ ಆಶಯದಿಂದ ಆರಂಭವಾದ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಅಥವಾ ಆಯುಷ್ಮಾನ್‌ ಭಾರತದಲ್ಲಿ ಈಗ ಮೋಸ ನಡೆದಿರುವುದು ಬೆಳಕಿಗೆ ಬಂದಿದೆ.

ಹಲವರು ಯೋಜನೆಯಿಂದ ಹಣ ಪಡೆದು ಮೋಸ ಎಸಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮೋಸ ಮಾಡಿದವರ ಹೆಸರು ಮತ್ತು ಚಿತ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಆಯುಷ್ಮಾನ್‌ ಭಾರತ್‌ ವಾರ್ಷಿಕ ವರದಿ ಪ್ರಕಾರ ಸುಮಾರು 3000 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳ ಮೂಲಕ 4.5 ಕೋಟಿ ರೂ. ವಂಚನೆ ಎಸಗಲಾಗಿದೆ ಎಂದು ತನಿಖೆ ಮೂಲಕ ತಿಳಿದುಬಂದಿದೆ. ಜತೆಗೆ ಆಸ್ಪತ್ರೆಗಳಲ್ಲಿ ಲೆಕ್ಕಪತ್ರ ತಪಾಸಣೆ ನಡೆಸಿ ಆರೋಗ್ಯ ಪ್ರಾಧಿಕಾರ ಸುಮಾರು 2.29 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದೆ. ಯೋಜನೆ ಮೂಲಕ ವಂಚನೆ ಎಸಗುವವರಲ್ಲಿ ವ್ಯಕ್ತಿಗಳು, ಆಸ್ಪತ್ರೆ ಸಿಬಂದಿ, ವಿಮೆ ಪಡೆದುಕೊಂಡವರೂ ಇದ್ದಾರೆ ಎನ್ನಲಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ 338 ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ವಂಚನೆ ಹೆಚ್ಚಾಗದಂತೆ ಮುಂದೆ ರಾಷ್ಟ್ರೀಯ ವಂಚನೆ ವಿರೋಧಿ ದಳ (ಎನ್‌ಎಎಫ್ಯು) ಒಂದನ್ನು ಸ್ಥಾಪಿಸಲು ಆರೋಗ್ಯ ಪ್ರಾಧಿಕಾರ ಮುಂದಾಗಿದೆ. ಇದರೊಂದಿಗೆ ರಾಜ್ಯದಲ್ಲೂ ಒಂದು ದಳ ಸ್ಥಾಪಿಸಲಾಗುತ್ತದೆ. 2019-20ರ ಬಜೆಟ್‌ನಲ್ಲಿ ಆಯುಷ್ಮಾನ್‌ ಭಾರತಕ್ಕೆ 6400 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿತ್ತು. ವಂಚನೆಯಿಂದಾಗಿ ವಿಮೆ ಉದ್ಯಮಕ್ಕೆ ವಾರ್ಷಿಕ 250 ಕೋಟಿ ರೂ. ನಷ್ಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆರೋಗ್ಯ ವಿಮೆಯಲ್ಲಿ ಸುಮಾರು 50 ಕೋಟಿ ರೂ. ನಷ್ಟವಾಗುತ್ತಿದೆ ಎನ್ನಲಾಗಿದೆ.

ಆರೋಗ್ಯ ವಿಮೆಗಳಲ್ಲಿ ಹೆಚ್ಚಾಗಿ ಆಸ್ಪತ್ರೆಗಳಿಂದ ಅಥವಾ ರೋಗಿಯ ಕಡೆಯಿಂದ ನಕಲಿ ಬಿಲ್ಲುಗಳನ್ನು ನೀಡಿ ಹಣ ಪಡೆದುಕೊಳ್ಳಲಾಗುತ್ತಿದೆ ಎಂದು ವರದಿ ಬೊಟ್ಟು ಮಾಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ