ಶ್ರೇಷ್ಠ ಪ್ರೇಮಿಯಾಗು: ಯುವಕನಿಗೆ ಸುಪ್ರೀಂ ಸಲಹೆ

Team Udayavani, Sep 12, 2019, 5:24 AM IST

ನವದೆಹಲಿ: ‘ನೀನೊಬ್ಬ ಶ್ರೇಷ್ಠ ಪ್ರೇಮಿಯಾಗಿ ತೋರಿಸು…’ ಇದು ಹಿಂದೂ ಯುವತಿಯನ್ನು ವಿವಾಹವಾದ ಮುಸ್ಲಿಂ ಯುವಕನಿಗೆ ಸುಪ್ರೀಂ ಕೋರ್ಟ್‌ ನೀಡಿರುವ ಸಲಹೆ. ಛತ್ತೀಸ್‌ಗಡದಲ್ಲಿ ನಡೆದ ಅಂತರ್‌ಧರ್ಮೀಯ ವಿವಾಹಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾ.ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ರೀತಿ ಹೇಳಿದೆ.

‘ಹುಡುಗಿಯ ಕುಟುಂಬ ನಮ್ಮನ್ನು ಸ್ವೀಕರಿಸಲಿ ಎಂಬ ಕಾರಣಕ್ಕಾಗಿ ನಾನು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದೇನೆ’ ಎಂದು ಯುವಕ ಕೋರ್ಟ್‌ಗೆ ತಿಳಿಸಿದ್ದಾನೆ. ಆದರೆ, ಇದನ್ನು ಒಪ್ಪದ ಹುಡುಗಿಯ ಮನೆಯವರು, ‘ಆತ ಸುಳ್ಳು ಹೇಳುತ್ತಿದ್ದು, ಇದೆಲ್ಲ ನಾಟಕ. ಇದು ಹೆಣ್ಣುಮಕ್ಕಳನ್ನು ಬಲೆಗೆ ಹಾಕುವ ದಂಧೆ’ ಎಂದು ಆರೋಪಿಸಿದ್ದಾರೆ. ಆದರೆ, ಇದನ್ನು ಒಪ್ಪದ, ನ್ಯಾಯಪೀಠ, ‘ನಾವು ಅಂತರ್‌ಧರ್ಮೀಯ, ಅಂತ ರ್ಜಾತಿ ವಿವಾಹವನ್ನು ವಿರೋಧಿಸುವುದಿಲ್ಲ. ಯುವ ತಿಯ ಭವಿಷ್ಯ ಸುರಕ್ಷಿತವಾಗಿರಬೇಕು ಎಂದಷ್ಟೇ ಬಯಸುತ್ತೇವೆ. ನೀನೊಬ್ಬ ವಿಧೇಯ ಪತಿ ಹಾಗೂ ಶ್ರೇಷ್ಠ ಪ್ರೇಮಿಯಾಗಿ ಉಳಿಯಬೇಕು’ ಎಂದು ಯುವಕನಿಗೆ ಕಿವಿಮಾತು ಹೇಳಿತು. ಅಲ್ಲದೆ, ಆರ್ಯಸಮಾಜ ದೇಗುಲದಲ್ಲಿ ಮದುವೆಯಾದ ಬಳಿಕ, ನಿನ್ನ ಹೆಸರು ಬದಲಿಸಿದ್ದೀಯಾ ಎಂದು ಪ್ರಶ್ನಿಸಿದ ಕೋರ್ಟ್‌, ಅದನ್ನು ದೃಢಪಡಿಸಲು ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ